ಉಡುಪಿ: ಮಾ.8-9ಕ್ಕೆ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದಿಂದ ಮಹಿಳಾ “ಚೈತನ್ಯ ದಿನ”
ಉಡುಪಿ: ಮಹಿಳಾ ದೌರ್ಜನ್ಯವನ್ನು ವಿರೋಧಿಸುವ ಜನಪರ ಹಾಗೂ ಮಹಿಳಾ ಪರ ಸಂಘಟನೆಗಳ ಜಾಲವಾಗಿರುವ ಕರ್ನಾಟಕ ರಾಜ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಈ ವರ್ಷದ ‘ಮಹಿಳಾ ಚೈತನ್ಯ ದಿನ’ ವನ್ನು ಮಾ.8 ಮತ್ತು 9ರಂದು ಉಡುಪಿಯಲ್ಲಿ ಆಯೋಜಿಸುತ್ತಿದೆ ಎಂದು ಒಕ್ಕೂಟದ ಅಖಿಲ ವಿದ್ಯಾಸಂದ್ರ ಬೆಂಗಳೂರು ಇಂದಿಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ನಡೆದ ಪಬ್ ದಾಳಿ ಹಾಗೂ ಹೊಸದಿಲ್ಲಿಯ ನಿರ್ಭಯಾ ಅತ್ಯಾಚಾರ ಪ್ರಕರಣದ ಹಿನ್ನೆಲೆಯಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯವನ್ನು ವಿರೋಧಿಸಲು ಹಾಗೂ ಈ ಬಗ್ಗೆ ಜಾಗೃತಿ ಮೂಡಿಸಲು 2013ರಲ್ಲಿ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಅಸ್ತಿತ್ವಕ್ಕೆ ಬಂದಿದ್ದು, ಈವರೆಗೆ 12 ಜಿಲ್ಲೆಗಳಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಯನ್ನು ಮಹಿಳಾ ಚೈತನ್ಯ ದಿನವನ್ನಾಗಿ ಆಚರಿಸಲಾಗಿದೆ. ಈ ಬಾರಿ ಉಡುಪಿ ಜಿಲ್ಲೆಯನ್ನು ಆಯ್ಕೆ ಮಾಡಲಾಗಿದೆ ಎಂದರು.
ಈ ಜಿಲ್ಲೆಗಳಲ್ಲಿ ಜಾಥಾ, ಸಮಾವೇಶ, ಜಾಗೃತಿ ಕಾರ್ಯಕ್ರಮಗಳ ಮೂಲಕ ಜನಪರ ಹೋರಾಟ ಗಳಲ್ಲಿ ಸಹಭಾಗಿತ್ವ ನೀಡುತ್ತಾ ಬಂದಿದ್ದೇವೆ. ನಮ್ಮ ಸಂಘಟನೆಗಳಲ್ಲಿ ಮಹಿಳಾ ಚಳವಳಿ, ಸಾಹಿತ್ಯ, ಶಿಕ್ಷಣ ಕ್ಷೇತ್ರದ ಪರಿಣತರು, ರಂಗಭೂಮಿ, ಜನಪದ ಹೋರಾಟಗಳಲ್ಲಿ ಸಕ್ರಿಯವಾಗಿರುವ ವ್ಯಕ್ತಿ, ಸಂಘಟನೆಗಳು ಪಾಲ್ಗೊಳ್ಳುತಿದ್ದಾರೆ. ವಿವಿಧ ಮಹಿಳಾ ಸಂಘಟನೆ ಗಳು, ದಲಿತ ದಮನಿತರ ಸಂಘಟನೆಗಳು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಬಿಸಿ ಯೂಟದ ನೌಕರರು, ಮನೆಕೆಲಸದ ಕಾರ್ಮಿಕರು, ಲಿಂಗತ್ವ ಅಲ್ಪಸಂಖ್ಯಾತರು ನಮ್ಮೊಂದಿಗಿದ್ದಾರೆ ಎಂದರು.
ಈ ಬಾರಿ ಉಡುಪಿಯಲ್ಲಿ: ಕಳೆದ ವರ್ಷ ತುಮಕೂರಿನಲ್ಲಿ ನಡೆದ ಎರಡು ದಿನಗಳ ಸಮಾವೇಶ ಈ ಬಾರಿ ಸಮಸಮಾಜದ ನಿರ್ಮಾಣಕ್ಕಾಗಿ ಅರಿವಿನ ಆಂದೋಲನ ನಡೆದ ಉಡುಪಿಯಲ್ಲಿ ನಡೆಯಲಿದೆ. ಇದಕ್ಕಾಗಿ ಕಳೆದ ಎಂಟು ತಿಂಗಳಿನಿಂದ ಪೂರ್ವಭಾವಿ ಸಿದ್ಧತಾ ಸಭೆ, ಕಾರ್ಯಾಗಾರಗಳು ನಡೆದಿವೆ ಎಂದು ಮಂಗಳೂರಿನ ವಾಣಿ ಪೆರಿಯೋಡಿ ತಿಳಿಸಿದರು.
5 ತಾಲೂಕುಗಳ ಆಯ್ದ ಕಾಲೇಜುಗಳಲ್ಲಿ ಅರಿವಿನ ಪಯಣ ಎಂಬ ಲಿಂಗಸೂಕ್ಷ್ಮತಾ ಅಭಿಯಾನ, ಕೌದಿ ಹೊಲಿಯುವುದು ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಜಿಲ್ಲೆಯ ನಾನಾ ಕಡೆಗಳಲ್ಲಿ ಹಮ್ಮಿಕೊಂಡಿದ್ದೇವೆ ಎಂದರು.
ಅರುಳ್ ಮೌಳಿ ಆಶಯ ಮಾತು: ಇದೀಗ ಮಾ.8ರ ಅಂತಾರಾಷ್ಟ್ರೀಯ ಮಹಿಳಾ ದಿನದಂದು ನಗರದ ಅಜ್ಜರಕಾಡಿನ ಪುರಭವನದಲ್ಲಿ ಬೆಳಗ್ಗೆ 9:30ಕ್ಕೆ ‘ಮಹಿಳಾ ಪ್ರಾತಿನಿಧ್ಯ: ಆಶಯ ಮತ್ತು ವಾಸ್ತವ’ ಎಂಬ ವಿಷಯದ ಕುರಿತು ವಿಚಾರ ಸಂಕಿರಣ ನಡೆಯಲಿವೆ. ಇದರಲ್ಲಿ ಚೆನ್ನೈನ ನ್ಯಾಯವಾದಿ, ಮಹಿಳಾ ಹೋರಾಟಗಾರ್ತಿ ಎ.ಅರುಳ್ ಮೌಳಿ ಆಶಯ ಭಾಷಣ ಮಾಡಲಿದ್ದಾರೆ. ಬೆಂಗಳೂರಿನ ಕೆ.ಎಸ್.ಲಕ್ಷ್ಮೀ, ಹುಬ್ಬಳ್ಳಿಯ ಶಾಹೀನ್ ಮೊಕಾಶಿ, ಬೆಂಗಳೂರಿನ ಮೈತ್ರಿ, ಮಂಗಳೂರಿನ ಯು.ಟಿ.ಫರ್ಜಾನಾ, ಡಾ.ಸಬಿತಾ ಕೊರಗ ವಿಚಾರ ಮಂಡನೆ ಮಾಡಲಿದ್ದಾರೆ.
ಕಾರ್ಯಕ್ರಮದಲ್ಲಿ ತುಮಕೂರು ಮಹಿಳಾ ದಿನದ ನೆನಪಿನ ಹೊತ್ತಗೆ ಬಹುತ್ವದೆಡೆಗೆ ನಮ್ಮ ನಡಿಗೆ ಬಿಡುಗಡೆಗೊಳ್ಳಲಿದೆ. ಇದರಲ್ಲಿ ಬಾ.ಹ.ರಮಾ ಕುಮಾರಿ ತುಮಕೂರು, ಜಾನಕಿ ಬ್ರಹ್ಮಾವರ, ಜಾನೆಟ್ ಬಾರ್ಬೋಜಾ, ಸುನಂದಾ ಕಡಮೆ ಹುಬ್ಬಳ್ಳಿ, ಪ್ರೊ. ನಿಕೇತನ, ಸಿಮಿ ಡಿಸೋಜ, ಪವಿತ್ರ ಚಿಕ್ಕನಕೋಡು ಭಾಗವಹಿಸಲಿದ್ದಾರೆ.
ಶನಿವಾರ ಮಾ.9ರಂದು ಬೆಳಗ್ಗೆ 10ಗಂಟೆಗೆ ಅಜ್ಜರಕಾಡಿನ ಹುತಾತ್ಮ ಚೌಕದಲ್ಲಿ ಹಕ್ಕೊತ್ತಾಯ ಜಾಥಾ ಹಾಗೂ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಜಾಥಾ ನಡೆಯಲಿದೆ.ಬಳಿಕ ಮಿಷನ್ ಕಾಂಪೌಂಡ್‌ನ ಬಾಸೆಲ್ ಮಿಷನ್ ಚರ್ಚ್ ಹಾಲ್‌ನಲ್ಲಿ ಸಾರ್ವಜನಿಕ ಸಮಾವೇಶ ನಡೆಯಲಿದೆ ಎಂದು ಅಖಿಲಾ ವಿದ್ಯಾಸಂದ್ರ ತಿಳಿಸಿದರು.
ಹಕ್ಕೊತ್ತಾಯ ಜಾಥಾ ಮತ್ತು ಮೆರವಣಿಗೆಯನ್ನು ಸಿಕಂದರಾಬಾದ್‌ನ ಸಾಹಿತಿ, ಹೋರಾಟಗಾರ್ತಿ, ಗದ್ದರ್ ಪುತ್ರಿ ಡಾ.ಜಿ.ವಿ.ವೆನ್ನೆಲ ಗದ್ದರ್ ಉದ್ಘಾಟಿಸಲಿದ್ದಾರೆ. ಹೊಸದಿಲ್ಲಿ ಹಿರಿಯ ಪತ್ರಕರ್ತೆ ಸಬಾ ನಖ್ವಿ ಭಾಗವಹಿಸುವರು. ಕಾರ್ಯ ಕ್ರಮದಲ್ಲಿ ಪ್ರೊ.ಸಬಿಹಾ ಭೂಮಿಗೌಡ, ಆತ್ರಾಡಿ ಅಮೃತಾ, ಅನಸೂಯಮ್ಮ ಅರಳಾಳುಸಂದ್ರ ಭಾಗವಹಿಸುವರು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಾನಕಿ ಬ್ರಹ್ಮಾವರ, ಧಾರವಾಡದ ಲಿನೆಟ್, ಉಡುಪಿಯ ವೆರೋನಿಕಾ ಕರ್ನೇಲಿಯೊ, ಕಾರ್ಕಳದ ಹುಮೈರಾ, ಕೃತಿ, ರೇಖಾ ಮುಂತಾದವರು ಉಪಸ್ಥಿತರಿದ್ದರು.
ನಮ್ಮ ಉಡುಪು ನಮ್ಮ ಹಕ್ಕು
ಮಾ.8ರ ಸಂಜೆ 5:30ರಿಂದ ನಗರದ ಜೋಡುಕಟ್ಟೆ ಯಿಂದ ಕ್ಯಾಂಡಲ್ ಬೆಳಕಿನೊಂದಿಗೆ ‘ಕಪ್ಪು ಉಡುಗೆಯಲ್ಲಿ ಮಹಿಳೆ ಯರು’ ಮೌನ ಜಾಗೃತಿ ಕಾರ್ಯಕ್ರಮ ‘ನಮ್ಮ ಉಡುಪಿ ನಮ್ಮ ಹಕ್ಕು’ ಘೋಷ ವಾಕ್ಯ ದೊಂದಿಗೆ ‘ಸರ್ವ ಜನಾಂಗದ ಶಾಂತಿಯ ದೇಶ’ದ ಅಂಗವಾಗಿ ನಡೆಯಲಿದೆ ಎಂದು ವಾಣಿ ಪೆರಿಯೋಡಿ ತಿಳಿಸಿದರು.
ಇದರಲ್ಲಿ ಭಾಗವಹಿಸುವ ಎಲ್ಲಾ ಮಹಿಳೆಯರು ಕಪ್ಪು ಉಡುಗೆ ಧರಿಸಿ ರಸ್ತೆಯುದ್ದಕ್ಕೂ ಮೌನವಾಗಿ ನಿಲ್ಲಲಿದ್ದಾರೆ ಎಂದರು.