ಉಡುಪಿ: ಶಿವಮೊಗ್ಗ ರಂಗಾಯಣದಿಂದ ನಾಟಕ ಪ್ರದರ್ಶನ
ಉಡುಪಿ, ಮಾ.7: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಹಾಗೂ ಯಕ್ಷರಂಗಾಯಣ ಕಾರ್ಕಳ ವತಿಯಿಂದ ರಂಗಾಯಣ ಶಿವಮೊಗ್ಗ ಇವರು ಪ್ರಸ್ತುತ ಪಡಿಸಿರುವ ಡಾ. ಗೀತಾ ಪಿ. ಸಿದ್ದಿ ಅವರ ಕಥೆ ಆಧಾರಿತ ಮಾರ್ನಮಿ ನಾಟಕ ಪ್ರದರ್ಶನ ಮಂಗಳವಾರ ಎಂ.ಜಿ.ಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿ ನಡೆಯಿತು.
ಉಡುಪಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಚಂಡೆ ಬಾರಿಸುವ ಮೂಲಕ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಎಂ.ಜಿ.ಎಂ. ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಲಕ್ಷ್ಮೀನಾರಾಯಣ ಕಾರಂತ, ತಲ್ಲೂರು ಫ್ಯಾಮಿಲಿ ಟ್ರಸ್ಟ್ನ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ, ಸಮಾಜ ಸೇವಕ ವಿಶ್ವನಾಥ ಶೆಣೈ ಹಾಗೂ ನಾಟಕ ನಿರ್ದೇಶಕ ಶ್ರೀಕಾಂತ್ ಕುಮಟಾ ಉಪಸ್ಥಿತರಿದ್ದರು.
ನಾಟಕಕ್ಕೆ ಶ್ರೀಪಾದ ತೀರ್ಥಹಳ್ಳಿ ಅವರ ಸಂಗೀತ, ಗಿರೀಶ್ ಪಿ.ಸಿದ್ಧಿ ಮಂಚಿಕೇರಿ ಇವರಿಂದ ಸಿದ್ಧಿ ಹಾಡುಗಳು ಹಾಗೂ ನೃತ್ಯ ಸಂಯೋಜನೆ, ರಾಜಣ್ಣ ಗಡಿಕಟ್ಟೆ ಇವರ ವಸ್ತ್ರ ವಿನ್ಯಾಸ ಮಧುಸೂಧನ್ ಇವರ ರಂಗಸಜ್ಜಿಕೆ ಇತ್ತು.
ಕಾರ್ಕಳ ಯಕ್ಷರಂಗಾಯಣದ ವಿಶೇಷ ಕರ್ತವ್ಯಾಧಿಕಾರಿ ಪೂರ್ಣಿಮಾ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ರಾಮಾಂಜಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.