ಲೋಕಸಭಾ ಚುನಾವಣೆ: ಉಡುಪಿ- ಚಿಕ್ಕಮಗಳೂರು ಕ್ಷೇತ್ರಕ್ಕೆ ಜಯಪ್ರಕಾಶ್ ಹೆಗ್ಡೆ?ಸ್ಥಳೀಯ ನಾಯಕರಲ್ಲಿ ಭಾರೀ ವಿರೋಧ

ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಗೆ ತನ್ನ ಮೊದಲ ಪಟ್ಟಿ ಘೋಷಣೆ ಬಗ್ಗೆ ಚರ್ಚಿಸಲು ಈ ವಾರಾಂತ್ಯದೊಳಗೆ ದೆಹಲಿಯಲ್ಲಿ ಕಾಂಗ್ರೆಸ್‌ ಚುನಾವಣಾ ಸಮಿತಿ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ರಾಜ್ಯದ ಹತ್ತಕ್ಕೂ ಹೆಚ್ಚು ಕ್ಷೇತ್ರಗಳು ಸೇರಿದಂತೆ ಗೊಂದಲವಿಲ್ಲದ ಕ್ಷೇತ್ರಗಳಿಗೆ ಅಭ್ಯರ್ಥಿ ಹೆಸರು ಘೋಷಣೆಯಾಗುವ ಸಾಧ್ಯತೆಯಿದೆ. ಈ ಸಭೆಯ ಹಿನ್ನೆಲೆಯಲ್ಲಿ ರಾಜ್ಯ ಉಸ್ತುವಾರಿ ರಣದೀಪ್‌ ಸುರ್ಜೇವಾಲಾ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಸಂಭವನೀಯರ ಪಟ್ಟಿಯನ್ನು ಅಖೈರು ಮಾಡಿ ದೆಹಲಿಗೆ ಕಳುಹಿಸಲು ಸೋಮವಾರ ವಿಸ್ತೃತ ಚರ್ಚೆ ನಡೆಸಿದ್ದು, ಈ ಸಭೆಯಲ್ಲಿ ಸುಮಾರು 15 ಕ್ಷೇತ್ರಗಳ ಹೆಸರನ್ನು ಅಖೈರುಗೊಳಿಸುವ ಬಗ್ಗೆ ಚರ್ಚೆ ನಡೆಸಿದರು ಎಂದು ಮೂಲಗಳು ತಿಳಿಸಿವೆ.

ಕುತೂಹಲಕಾರಿ ಸಂಗತಿಯೆಂದರೆ, ಚರ್ಚೆಯಾಗಿರುವ ಮೊದಲ 15 ಮಂದಿಯ ಪಟ್ಟಿಯಲ್ಲಿ ಹಾಲಿ ಸಚಿವರ ಪೈಕಿ ಒಬ್ಬರ ಹೆಸರು ಮಾತ್ರ ಇದೆ. ಅದು ಕೋಲಾರ ಕ್ಷೇತ್ರಕ್ಕೆ ಕೆ.ಎಚ್‌. ಮುನಿಯಪ್ಪ. ಇನ್ನು ಹಾಲಿ ಶಾಸಕರ ಪೈಕಿ ಬೆಂಗಳೂರು ಕೇಂದ್ರಕ್ಕೆ ಎನ್‌.ಎ. ಹ್ಯಾರೀಸ್‌ ಅವರ ಹೆಸರು ಇದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಳಿಯ ರಾಧಾಕೃಷ್ಣ ಅವರ ಹೆಸರನ್ನು ಕಲಬುರಗಿ ಕ್ಷೇತ್ರಕ್ಕೆ ಅಖೈರುಗೊಳಿಸಲಾಗಿದೆ.

ಶಿವಮೊಗ್ಗ ಕ್ಷೇತ್ರಕ್ಕೆ ಹ್ಯಾಟ್ರಿಕ್‌ ಹೀರೋ ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜಕುಮಾರ್‌, ಬೆಂಗಳೂರು ಗ್ರಾಮಾಂತರಕ್ಕೆ ಡಿ.ಕೆ. ಸುರೇಶ್‌, ಮಂಡ್ಯ ಕ್ಷೇತ್ರಕ್ಕೆ ಸ್ಟಾರ್‌ ಚಂದ್ರು (ವೆಂಕಟೇರಮಣಗೌಡ), ಮೈಸೂರಿಗೆ ಲಕ್ಷ್ಮಣ್‌, ಹಾಸನಕ್ಕೆ ಶ್ರೇಯಸ್‌ ಪಟೇಲ್‌, ತುಮಕೂರಿಗೆ ಈಗಷ್ಟೇ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಮುದ್ದಹನುಮೇಗೌಡ, ಚಿಕ್ಕಬಳ್ಳಾಪುರಕ್ಕೆ ರಕ್ಷಾ ರಾಮಯ್ಯ ಸೇರಿ 15 ಕ್ಷೇತ್ರಗಳಿಗೆ ಹೆಸರು ಅಖೈರುಗೊಳಿಸಿ, ಅಂತಿಮ ನಿರ್ಧಾರವನ್ನು ಹೈಕಮಾಂಡ್‌ಗೆ ಬಿಡಲು ನಿರ್ಧರಿಸಲಾಯಿತು ಎಂದು ಮೂಲಗಳು ತಿಳಿಸಿವೆ. ಇನ್ನು ಉಡುಪಿ- ಚಿಕ್ಕಮಗಳೂರು ಕ್ಷೇತ್ರಕ್ಕೆ ಜಯಪ್ರಕಾಶ್ ಹೆಗ್ಡೆ ಅವರ ಹೆಸರು ಪರಿಗಣಿಸಲಾಗಿದ್ದರೂ, ಜಿಲ್ಲೆಯ ಶಾಸಕರು ತೀವ್ರ ವಿರೋಧ ಮಾಡುತ್ತಿರುವುದರಿಂದ ಇನ್ನೂ ಗೊಂದಲವಿದೆ. ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ಹಾಗೂ ಕಾಡಾ ಅಧ್ಯಕ್ಷರಾಗಿರುವ ಡಾ. ಅಂಶುಮಂತ್‌ ಅವರ ಹೆಸರು ಪರಿಗಣನೆಯಲ್ಲಿದೆ.

ರಾಜ್ಯದಲ್ಲಿ ಫೈನಲ್‌ ಆಗಿರುವ ಪಟ್ಟಿ
ಬೆಂಗಳೂರು ಗ್ರಾಮಾಂತರ – ಡಿ.ಕೆ. ಸುರೇಶ್‌
ಮಂಡ್ಯ- ಸ್ಟಾರ್ ಚಂದ್ರು (ವೆಂಕಟೇರಮಣಗೌಡ)
ತುಮಕೂರು- ಎಸ್‌.ಪಿ. ಮುದ್ದಹನುಮೇಗೌಡ
ಮೈಸೂರು- ಎಂ. ಲಕ್ಷ್ಮಣ್
ಚಿಕ್ಕಬಳ್ಳಾಪುರ- ರಕ್ಷಾ ರಾಮಯ್ಯ
ಕೋಲಾರ- ಕೆ.ಎಚ್‌. ಮುನಿಯಪ್ಪ
ಬೆಂಗಳೂರು ಕೇಂದ್ರ-ಎನ್‌.ಎ. ಹ್ಯಾರೀಸ್‌
ಬೆಂಗಳೂರು ದಕ್ಷಿಣ- ಸೌಮ್ಯಾ ರೆಡ್ಡಿ
ಹಾಸನ- ಶ್ರೇಯಸ್‌ ಪಟೇಲ್
ಶಿವಮೊಗ್ಗ – ಗೀತಾ ಶಿವರಾಜಕುಮಾರ್
ಚಿತ್ರದುರ್ಗ- ಬಿ.ಎನ್. ಚಂದ್ರಪ್ಪ
ವಿಜಯಪುರ- ಮಾಜಿ ಶಾಸಕ ರಾಜು ಅಲಗೂರು
ಬೀದರ್‌- ರಾಜಶೇಖರ್ ಪಾಟೀಲ್
ಕಲಬುರಗಿ- ರಾಧಾಕೃಷ್ಣ
ಉಡುಪಿ-ಚಿಕ್ಕಮಗಳೂರು- ಜಯಪ್ರಕಾಶ್‌ ಹೆಗ್ಡೆ/ ಡಾ. ಅಂಶುಮಂತ್

ಜಯಪ್ರಕಾಶ್ ಹೆಗ್ಡೆ ಕಾಂಗ್ರೆಸ್‌ಗೆ ಸೇರುತ್ತಿರುವ ಸುದ್ದಿ ದಟ್ಟವಾಗುತ್ತಿರುವಾಗಲೇ ಉಡುಪಿ ಚಿಕ್ಕಮಗಳೂರು ಟಿಕೆಟ್ ವಾಗ್ಮಿ ಸುಧೀರ್ ಮುರೊಳ್ಳಿ ಪರ ಹಿರಿಯ ಕಿರಿಯ ನಾಯಕರ ಲಾಬಿ!

ಎರಡು ಜಿಲ್ಲೆಯ ಶಾಸಕರು ಹಾಗೂ ಉಡುಪಿಯ ಪರಾಜಿತ ಅಭ್ಯರ್ಥಿಗಳು ಎರಡು ಜಿಲ್ಲೆಯ ಪ್ರಮುಖ ನಾಯಕರು ಸಿಎಂ ಹಾಗೂ ಡಿಸಿಎಂ ಭೇಟಿಯಾಗಿ ಜಯಪ್ರಕಾಶ್ ಹೆಗ್ಡೆಯವರಿಗೆ ಟಿಕೆಟ್ ನೀಡುವ ಬಗ್ಗೆ ವಿರೋಧ ವ್ಯಕ್ತಪಡಿಸುವ ಮಾಹಿತಿ ಲಭ್ಯವಾಗಿದೆ.

ಶೃಂಗೇರಿಯ ಟಿ.ಡಿ ರಾಜೇಗೌಡ, ಕಿಮ್ಮನೆ ರತ್ನಾಕರ್, ಕಾರ್ಕಳದ ಉದಯ್ ಕುಮಾರ್ ಶೆಟ್ಟಿ, ಕುಂದಾಪುರದ ದಿನೇಶ್ ಹೆಗ್ಡೆ, ಉಡುಪಿ ಬ್ಲಾಕ್ ಅಧ್ಯಕ್ಷ ರಮೇಶ್ ಕಾಂಚನ್, ಉಡುಪಿ Nsui ಜಿಲ್ಲಾ ಅಧ್ಯಕ್ಷ ಸೌರವ್ ಬಲ್ಲಾಳ್, ಉಡುಪಿ ಯುವ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ದೀಪಕ್ ಕೋಟ್ಯಾನ್, ಉಮಾ ಐಬಿ ಶಂಕರ್, ಲಕ್ಷ್ಮೀಶ್ ಗಬ್ಬಲಡ್ಕ, ಚಿಕ್ಕಮಗಳೂರು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರುಗಳಾದ ನಾಗೇಶ್, ಚನ್ನಗಿರಿ ಗೌಡ ಸೇರಿದಂತೆ 50 ಕ್ಕೂ ಹೆಚ್ಚು ಪ್ರಮುಖ ನಾಯಕರು ಭೇಟಿಯಾಗಿ ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *

error: Content is protected !!