ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ವಾರದೊಳಗೆ ನಿರ್ಧಾರ- ಕೆ.ಜಯಪ್ರಕಾಶ್ ಹೆಗ್ಡೆ
ಉಡುಪಿ: ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ವಾರದೊಳಗೆ ತೀರ್ಮಾನ ಕೈಗೊಳ್ಳುತ್ತೇನೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಕೆ ಜಯಪ್ರಕಾಶ್ ಹೆಗ್ಡೆ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈವರೆಗೆ ನಾನು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಕಾರಣ ಯಾವುದೇ ಪಕ್ಷದ ಸದಸ್ಯನಾಗಿರಲಿಲ್ಲ. ಈಗ ಸರಕಾರಕ್ಕೆ ವರದಿ ಸಲ್ಲಿಸಿದ್ದೇನೆ. ಮುಂದಿನ ರಾಜಕೀಯ ನಡೆಯ ಬಗ್ಗೆ ಒಂದು ವಾರದೊಳಗೆ ಸೂಕ್ತ ತೀರ್ಮಾನ ಕೈಗೊಳ್ಳುತ್ತೇನೆ. ಚುನಾವಣೆಯಲ್ಲಿ ಸ್ಪರ್ಧಿಸಬೇಕೋ ಬೇಡವೋ ಎಂಬ ಕುರಿತು ಕುಟುಂಬದವರು ಹಾಗೂ ಸ್ನೇಹಿತರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇನೆ ಎಂದರು.
ಚಿಕ್ಕಮಗಳೂರಿನಲ್ಲಿ ನಡೆಯುತ್ತಿರುವ ಗೋ ಬ್ಯಾಕ್ ಜಯಪ್ರಕಾಶ್ ಹೆಗ್ಡೆ ಎಂಬ ವಿಚಾರದ ಕುರಿತಾಗಿ ಮಾತನಾಡಿದ ಹೆಗಡೆಯವರು, ನಾನು ಈಗಾಗಲೇ ಎಲ್ಲಾ ಪಕ್ಷಗಳಿಂದ ಹೊರಗಡೆ ಇದ್ದೇನೆ ಇನ್ನು ಗೋ ಬ್ಯಾಕ್ ಎಂದರೆ ಎಲ್ಲಿಗೆ ಹೋಗಬೇಕು ಮತ್ತೆ ನಾನು ಹಿಂದುಳಿದ ವರ್ಗದ ಸಮಿತಿಯಲ್ಲಿ ಇರಬೇಕೆ ಎಂದು ಪ್ರಶ್ನಿಸಿದರು. ಈಗಾಗಲೇ ಎರಡು ಪಕ್ಷದ ನನ್ನ ಆಪ್ತ ಸ್ನೇಹಿತರು ನನ್ನೊಂದಿಗೆ ಮಾತನಾಡಿದ್ದು ಯಾವ ಪಕ್ಷವನ್ನು ಸೇರುವುದರ ಕುರಿತು ಹಾಗೂ ಲೋಕಸಭೆ ಚುನಾವಣೆಯ ಸ್ಪರ್ಧಿಸುವುದರ ಕುರಿತಾಗಿ ಯಾವುದೇ ನಿರ್ಧಾರವನ್ನ ತೆಗೆದುಕೊಂಡಿಲ್ಲ ಎಂದರು.