ಉಳ್ಳಾಲ: ನಾಪತ್ತೆಯಾಗಿರುವ ಸಂಶೋಧನ ವಿದ್ಯಾರ್ಥಿನಿ ಚೈತ್ರಾ ವಿದೇಶದಲ್ಲಿ
ಉಳ್ಳಾಲ: ದೇರಳಕಟ್ಟೆಯ ಖಾಸಗಿ ಕಾಲೇಜಿನ ಪಿಎಚ್.ಡಿ ಸಂಶೋಧನ ವಿದ್ಯಾರ್ಥಿನಿ ಚೈತ್ರಾ ನಾಪತ್ತೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಚೈತ್ರಾ ವಿದೇಶಕ್ಕೆ ತೆರಳಿರುವುದು ಖಚಿತವಾಗಿದೆ. ಆಕೆಯ ಸ್ನೇಹಿತ ಶಾರೂಕ್ನನ್ನು ಮಧ್ಯಪ್ರದೇಶದಿಂದ ಪೊಲೀಸರು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸುತ್ತಿದ್ದಾರೆ.
ಅತ್ತ ವಿದೇಶಕ್ಕೆ ತೆರಳಿರುವ ಚೈತ್ರಾ ತಾನು ಸ್ವ ಇಚ್ಛೆಯಿಂದ ತೆರಳಿದ್ದು, ಈ ಕುರಿತು ಸೋಮವಾರ ವಿದೇಶದಲ್ಲಿರುವ ಭಾರತದ ದೂತವಾಸದ ಮೂಲಕ ಮಂಗಳೂರು ಕಮಿಷನರ್ಗೆ ಮಾಹಿತಿ ನೀಡುವ ಸಾಧ್ಯತೆ ಇದೆ.
ಚೈತ್ರಾ ಫೆ. 17ರಂದು ಮಾಡೂರಿನ ಬಾಡಿಗೆ ಮನೆಯಿಂದ ಸ್ಕೂಟರ್ನಲ್ಲಿ ಹೊರಟು ಸುರತ್ಕಲ್ನಲ್ಲಿ ಸ್ಕೂಟರ್ ತ್ಯಜಿಸಿ ನಾಪತ್ತೆಯಾಗಿದ್ದಳು. ಆರಂಭದಲ್ಲಿ ಸಾಮಾನ್ಯ ನಾಪತ್ತೆ ಪ್ರಕರಣ ಎಂದು ಪರಿಗಣಿಸಿದ್ದ ಪೊಲೀಸರು ಶೋಧ ಕಾರ್ಯ ನಡೆಸಿದ್ದರು. ಆದರೆ ಚೈತ್ರಾ ನಾಪತ್ತೆಯ ಹಿಂದೆ ಡ್ರಗ್ ಪೆಡ್ಲರ್ ಅನ್ಯಕೋಮಿನ ಯುವಕನ ಕೈವಾಡವಿದೆ ಎಂದು ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸುವ ಬೆದರಿಕೆ ಹಾಕಿದಾಗ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದರು. ಆಕೆಯ ಮೊಬೈಲ್ ಲೊಕೇಶನ್ ಆಧಾರದಲ್ಲಿ ಬೆಂಗಳೂರು ಕಡೆ ತೆರಳಿರುವ ಮಾಹಿತಿಯನ್ನು ಕಲೆ ಹಾಕಿತ್ತು. ಈ ನಡುವೆ ಆಕೆ ಮೆಜೆಸ್ಟಿಕ್ನಿಂದ ಬಸ್ ಇಳಿದು ಹೋಗಿರುವ ಮಾಹಿತಿ ಸಿಸಿಟಿವಿಯಲ್ಲಿ ಪತ್ತೆ ಹಚ್ಚಿದ್ದ ಪೊಲೀಸರು ಬೆಂಗಳೂರು ವ್ಯಾಪ್ತಿಯಲ್ಲಿ ಆಕೆಯ ಶೋಧ ಕಾರ್ಯವನ್ನು ಚುರುಕುಗೊಳಿಸಿದ್ದರು.
ಉಳ್ಳಾಲ ಪೊಲೀಸರ ಒಂದು ತಂಡ ತನಿಖೆಯ ಮುಂದುವರಿದ ಭಾಗವಾಗಿ, ಗೋವಾ, ಮದ್ಯಪ್ರದೇಶದ ಮೂಲಕ ವಿದೇಶಕ್ಕೆ ತೆರಳಿರುವ ಮಾಹಿತಿ ಕಲೆ ಹಾಕಿ ಮಧ್ಯಪ್ರದೇಶದಲ್ಲಿ ಸ್ನೇಹಿತನೊಂದಿಗಿದ್ದ ಶಾರೂಕ್ನನ್ನು ವಶಕ್ಕೆ ತೆಗೆದುಕೊಂಡಿದ್ದರು.