ಬೈಂದೂರು: ಯುವಕ ಸಂಶಯಾಸ್ಪದ ಸಾವು- ಪ್ರಕರಣ ದಾಖಲು
ಬೈಂದೂರು: ಹಣಕಾಸಿನ ವಿಚಾರದಲ್ಲಿ ತೊಂದರೆ ಅನುಭವಿಸುತ್ತಿದ್ದ ಯುವಕನೋರ್ವ ಸಂಶಯಾಸ್ಪದವಾಗಿ ಮೃತಪಟ್ಟ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಂದೂರು ಕಾಲ್ತೋಡು ನಿವಾಸಿ ಮಂಜುನಾಥ ಎಂಬವರ ಮಗ ಸುಚೇಂದ್ರ ಆಚಾರ್ಯ (28) ಎಂದು ಗುರುತಿಸಲಾಗಿದೆ. ಆ್ಯಂಕರಿಂಗ್ ಹಾಗೂ ಸಿಂಗರ್ ಆಗಿ ಕಾರ್ಯಕ್ರಮ ನೀಡುವುದರ ಜೊತೆಗೆ ಬೆಂಗಳೂರಿನ ಹೊಟೇಲಿನಲ್ಲಿ ಕ್ಯಾಶರ್ ಆಗಿ ಕೆಲಸ ಮಾಡುತಿದ್ದ ಇವರು, ಹಣಕಾಸಿನ ತೊಂದರೆ ಅನುಭವಿಸುತ್ತಿದ್ದರು. ಕಳೆದ 7-8 ತಿಂಗಳ ಹಿಂದೆ ಇವರು ಆತ್ಮಹತ್ಯೆಗೆ ಪ್ರಯತ್ನಿಸಿ, ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು.
ಕಳೆದ 15 ದಿನಗಳ ಹಿಂದೆ ಬೆಂಗಳೂರಿನಿಂದ ಊರಿಗೆ ಬಂದ ಸುಚೇಂದ್ರ ಚಿಂತೆಯಲ್ಲಿದ್ದು, ಫೆ.24ರಂದು ಸಂಜೆ ಮನೆಯಿಂದ ಹೊರಗೆ ಹೋದವನು ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದರು. ಎಲ್ಲಾ ಕಡೆ ಹುಡುಕುತ್ತಿರುವಾಗ ಫೆ.26ರಂದು ಬೆಳಗ್ಗೆ 10:30ರ ಸುಮಾರಿಗೆ ಸುಚೇಂದ್ರ ಮೃತ ಶರೀರ ಹೊಸಗದ್ದೆ ಗೇರು ಹಾಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆ ಯಾಗಿದೆ.
ಸುಚೇಂದ್ರ ಹಣಕಾಸಿನ ವಿಚಾರದಲ್ಲಿ ಯಾರಿಂದಲೋ ಒತ್ತಡಕ್ಕೆ ಒಳಗಾಗಿ ಅಥವಾ ಬೇರೆ ಯಾವುದೋ ಸಮಸ್ಯೆಯಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು. ಮೃತರ ಮರಣದಲ್ಲಿ ಅನುಮಾನವಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.