ಉಡುಪಿ ಜಿಲ್ಲೆ ಶಾಂತಿ ಸುವ್ಯವಸ್ಥೆಯಲ್ಲಿ ರಾಜ್ಯಕ್ಕೆ ಮಾದರಿಯಾಗಿದೆ-ಡಿಜಿಪಿ ಡಾ. ಎಂ.ಎ. ಸಲಿಂ

ಉಡುಪಿ: ಶನಿವಾರ ನಗರದ ಯುನೈಟೆಟ್ ಬಾಸೆಲ್ ಮಿಷನ್ ಜುಬ್ಲಿ ಚರ್ಚ್ ಹಾಲ್ ನಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಇದರ 1999 ರ ಪ್ರಥಮ ತಂಡದ ಸಿಬ್ಬಂದಿಗಳ ರಜತ ಸಂಭ್ರಮ ಕಾರ್ಯಕ್ರಮದ ಉದ್ಘಾಟನೆ ನಡೆಯಿತು.

ಬಳಿಕ ಮಾತನಾಡಿದ ಡಿಜಿಪಿ ಡಾ. ಎಂ.ಎ.ಸಲಿಂ ಅವರು ಉಡುಪಿ ಜಿಲ್ಲೆ ಆರಂಭದಿಂದ ಇಲ್ಲಿಯವರೆಗೆ ಶಾಂತಿ ಸುವ್ಯವಸ್ಥೆಯಲ್ಲಿ ರಾಜ್ಯಕ್ಕೆ ಮಾದರಿಯಾಗಿದೆ, ಇದಕ್ಕೆ ಪೊಲೀಸ್ ಅಧಿಕಾರಿಗಳು ಸಿಬ್ಬಂದಿಗಳ ಪ್ರಾಮಾಣಿಕ ಸೇವೆಯೇ ಕಾರಣ ಎಂದರು‌. ಪೊಲೀಸ್ ವ್ಯವಸ್ಥೆಯಲ್ಲಿ ಇಂದು ವಿಶೇಷ ಬದಲಾವಣೆಗಳಾಗಿದ್ದು ಅದಕ್ಕೆ ತಕ್ಕಂತೆ ನಮ್ಮ ಕಾರ್ಯವೈಖರಿ ಕೂಡ ಬದಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಇಂದು ಜಿಲ್ಲಾ ಪೊಲೀಸ್ ಜೊತೆಯಲ್ಲಿ ಕರಾವಳಿ ಕಾವಲು ಪಡೆ ಹಾಗೂ ನಕ್ಸಲ್ ನಿಗ್ರಹ ದಳ ಕಾರ್ಯಾಚರಿಸುತ್ತಿದೆ. ಇದರಿಂದಾಗ ಸಾರ್ವಜನಿಕ ರೊಂದಿಗೆ ಪೊಲೀಸರು ಹೆಚ್ಚು ನಿಕಟವಾದ ಸಂಪರ್ಕ ಹೊಂದಲು ಸಾಧ್ಯವಾಗಿದೆ. ಸಂಘಟಿತವಾದ ಪೊಲೀಸ್ ವ್ಯವಸ್ಥೆಗೆ ಪೂರಕ ಜಿಲ್ಲೆಯಾಗಿದ್ದು ಅದನ್ನು ಮುಂದುವರೆಸಿ ಕೊಂಡು ಹೋಗಬೇಕಾದ ಅಗತ್ಯತೆ ಇದೆ ಎಂದರು.

ಕಾರ್ಯಕ್ರಮದಲ್ಲಿ ಡಿಜಿಪಿ ಡಾ. ಎಂ ಎ ಸಲೀಂ ಹಾಗೂ 1999ರ ಬ್ಯಾಚ್ ಗೆ ತರಬೇತಿ ನೀಡಿದ ಗುರುಗಳಿಗೆ ಸಿಬಂದಿಗಳಿಂದ ಗೌರವಾರ್ಪಣೆ ಜರುಗಿತು. 1999ರ ಬ್ಯಾಚ್ ನ ಎಲ್ಲಾ ಸಿಬಂದಿಗಳಿಗೆ ರಜತ ಸಂಭ್ರಮದ ಪ್ರಯುಕ್ತ ನೆನಪಿನ ಕಾಣಿಕೆಯನ್ನು ವಿತರಿಸಲಾಯಿತು. ನಿಧನರಾದ ತಂಡದ ಸದಸ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ ವಹಿಸಿದ್ದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎಸ್ ಟಿ ಸಿದ್ದಲಿಂಗಪ್ಪ, ಆಸರೆ ಸಂಸ್ಥೆಯ ಜೈ ವಿಠ್ಠಲ್, ಪ್ರೋಬೆಶನರಿ ಐಪಿಎಸ್ ಅಧಿಕಾರಿ ಹರ್ಷಪ್ರಿಯಂವಧ, ಆರ್ಕಿಟೇಕ್ಟ್ ಸೈಮನ್, ಡಿಎಆರ್‌ನ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ವಿರೇಂದ್ರ ಶೆಟ್ಟಿ ಸ್ವಾಗತಿಸಿ, ಸುಧಾಕರ ಎರ್ಮಾಳ್ ವಂದಿಸಿದರು. ರಾಘವೇಂದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭಾ ಕಾರ್ಯಕ್ರಮದ ಬಳಿಕ ರವೀಂದ್ರ ಪ್ರಭು ತಂಡದಿಂದ ಸಂಗೀತ ರಸಮಂಜರಿ, ಭಾರ್ಗವಿ ತಂಡ ಉಡುಪಿ ಹಾಗೂ ಅಶೋಕ್ ಪೊಳಲಿ ಇವರಿಂದ ನೃತ್ಯ ಪ್ರದರ್ಶನ, ಶ್ರೀದೇವಿ ಕಿರಣ್ ಮಂಗಳೂರು ಇವರಿಂದ ಚಿತ್ರಕಲಾ ಪ್ರದರ್ಶನ, 99 ರ ಬ್ಯಾಚ್ ಸಿಬಂದಿ ಕೃಷ್ಣಯ್ಯ ದೇವಾಡಿಗ ಅವರಿಂದ ಯಕ್ಷ ನೃತ್ಯ ವೈಭವ ಕಾರ್ಯಕ್ರಮ ಜರುಗಿತು.ಡಿಎಆರ್ ಸಿಬ್ಬಂದಿ ಯೋಗೇಶ ನಾಯ್ಕ & ಸ್ಟಾರ್ ಈವೆಂಟ್ಸ್ ‌ನ ಪ್ರವೀಣ ತೊನ್ಸೆ ಜಂಟಿಯಾಗಿ ಕಾರ್ಯಕ್ರಮ ನಿರೂಪಿಸಿದರು‌.

Leave a Reply

Your email address will not be published. Required fields are marked *

error: Content is protected !!