ಮಣಿಪಾಲ: ಫೆ.26ರಿಂದ ನ್ಯಾನೋ ತಂತ್ರಜ್ಞಾನದ ಬಗ್ಗೆ ಅಂತಾರಾಷ್ಟ್ರೀಯ ಸಮ್ಮೇಳನ

ಮಣಿಪಾಲ: ವಿಶ್ವದ ಪ್ರತಿಷ್ಠಿತ ನೇಚರ್ ರಿಸರ್ಚ್ ಗ್ರೂಪ್‌ನ ಸಹಯೋಗದೊಂದಿಗೆ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ) ಫೆ.26ರಿಂದ ಮಾ.1ರವರೆಗೆ ನ್ಯಾನೋ ತಂತ್ರಜ್ಞಾನದ ವಿವಿಧ ಸಂಶೋಧನೆಗೆ ಸಂಬಂಧಿಸಿದಂತೆ ಮೂರು ಅಂತಾರಾಷ್ಟ್ರೀಯ ಮಟ್ಟದ ಸಮ್ಮೇಳನವನ್ನು ಆಯೋಜಿಸಿದೆ ಎಂದು ಮಾಹೆ ವಿವಿಯ ಕುಲಪತಿ ಲೆ.ಜ.(ಡಾ.) ಎಂ.ಡಿ.ವೆಂಕಟೇಶ್ ತಿಳಿಸಿದ್ದಾರೆ.

ಮಾಹೆಯಲ್ಲಿ ಶನಿವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನ್ಯಾನೋ ತಂತ್ರಜ್ಞಾನಕ್ಕೆ ಸಂಬಂಧಿಸಿದ ಸಂಶೋಧನೆಗೆ ಹೊಸ ದಿಕ್ಕನ್ನು ತೋರಿಸುವ ಗುರಿಯೊಂದಿಗೆ ಮಾಹೆ ನೇಚರ್ ಗ್ರೂಪ್ ಸಹಕಾರದಲ್ಲಿ ಐದು ದಿನಗಳ ಕಾಲ ಹಲವು ವೈಜ್ಞಾನಿಕ ಗೋಷ್ಠಿಗಳು, ಸಮಾವೇಶವನ್ನು ಆಯೋಜಿಸುತ್ತಿದೆ ಎಂದರು.

ಫೆ.26 ಮತ್ತು 27ರಂದು ಬಯೋಮೆಡಿಕಲ್ಸ್ ಅಪ್ಲಿಕೇಶನ್ಸ್‌ಗಳಲ್ಲಿ ನ್ಯಾನೋ ಮೆಟೀರಿಯಲ್ಸ್‌ಗಳ ಪಾತ್ರದ ಕುರಿತು ಎರಡು ದಿನಗಳ ಕಾಲ ಅಂತಾರಾಷ್ಟ್ರೀಯ ಮಟ್ಟದ ಸಮ್ಮೇಳನ ನಡೆಯಲಿದೆ. ನೋಬೆಲ್ ಪ್ರಶಸ್ತಿಗೆ ಸೂಚಿತರಾದ ವಿಜ್ಞಾನಿಗಳೂ ಸೇರಿದಂತೆ ವಿಶ್ವದ ಪ್ರಸಿದ್ಧ, ಖ್ಯಾತ ಸಂಶೋಧಕರು ಸೇರಿ 60ಕ್ಕೂ ಅಧಿಕ ಮಂದಿ ವಿಶೇಷ ತಜ್ಞರು ಈ ಸಮ್ಮೇಳನದಲ್ಲಿ ಭಾಗವಹಿಸಿ ನ್ಯಾನೋತಂತ್ರಜ್ಞಾನ ಹಾಗೂ ಅದರ ಬಯೋಮೆಡಿಕಲ್ ಅಪ್ಲಿಕೇಶನ್ಸ್‌ಗಳಲ್ಲಿ ಆಗಿರುವ ಆಧುನಿಕ ಪ್ರಗತಿಯ ಕುರಿತು ಚರ್ಚಿಸಲಿದ್ದಾರೆ. ಎರಡು ದಿನಗಳ ಈ ಸಮ್ಮೇಳನ ಮಣಿಪಾಲದ ಫಾರ್ಚ್ಯೂನ್ ಇನ್ ಲ್ಯಾಲಿವ್ಯೆ ಹೊಟೇಲ್‌ನ ಚೈತ್ಯ ಹಾಲ್‌ನಲ್ಲಿ ನಡೆಯಲಿದೆ ಎಂದರು.

ಫೆ.28ರಂದು ವಿಶ್ವದ ಶ್ರೇಷ್ಠ ಮ್ಯಾಗಝೀನ್‌ಗಳ ಸಾಲಿಗೆ ಸೇರುವ ‘ನೇಚರ್’ ನಿಯತಕಾಲಿಕವನ್ನು ಪ್ರಕಟಿಸುವ ನೇಚರ್ ಗ್ರೂಪ್‌ನಿಂದ ನೇಚರ್ ಮಾಸ್ಟರ್‌ಕ್ಲಾಸ್ ಕಾರ್ಯಾಗಾರ ನಡೆಯಲಿದೆ. ಇದರಲ್ಲಿ ಉದಯೋನ್ಮುಖ ಸಂಶೋಧಕರಿಗೆ ವಿಶೇಷ ಕಾರ್ಯಾಗಾರವನ್ನು ನೇಚರ್ ಪೋರ್ಟ್‌ಪೊಲಿಯೊ ದಲ್ಲಿ ಸಂಪಾದಕೀಯ ಅಭಿವೃದ್ಧಿ ವ್ಯವಸ್ಥಾಪಕರಾಗಿರು ವ ಡಾ. ಹ್ಯಾರಿ ಶೆರ್ಲಿ ಅವರ ನೇತೃತ್ವದಲ್ಲಿ ನಡೆಯಲಿದೆ. ಸಂಶೋಧನೆಯ ವಿವಿಧ ಮುಖಗಳು, ಅವುಗಳ ವರದಿಗಳನ್ನು ವೈಜ್ಞಾನಿಕ ರೀತಿಯಲ್ಲಿ ಪರಿಣಾಮಕಾರಿ ಯಾಗಿ ಪ್ರಸ್ತುತ ಪಡಿಸುವ ಕುರಿತು ಕಾರ್ಯಾಗಾರದಲ್ಲಿ ಮಾಹಿತಿಗಳನ್ನು ನೀಡಲಾಗುವುದು ಎಂದು ಡಾ. ವೆಂಕಟೇಶ್ ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!