ರಾಜ್ಯಕ್ಕೆ ಅತಿ ಹೆಚ್ಚು ಅನುದಾನ, ಕೇಂದ್ರವನ್ನು ದೂಷಿಸುವ ಪ್ರವೃತ್ತಿ ಕೈಬಿಡಬೇಕು- ಆರ್‌.ಅಶೋಕ

ಬೆಂಗಳೂರು,ಫೆ 23:ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅತಿ ಹೆಚ್ಚು ಅನುದಾನ ಬಂದಿದ್ದು, ಈ ಕುರಿತು ಅಭಿನಂದನೆ ಸಲ್ಲಿಸಿ ನಿರ್ಣಯ ಕೈಗೊಳ್ಳಲಾಗಿದೆ. ಜೊತೆಗೆ ಕೇಂದ್ರವನ್ನು ದೂಷಿಸುವ ಪ್ರವೃತ್ತಿಯನ್ನು ಕೈ ಬಿಡಬೇಕೆಂದು ಒತ್ತಾಯಿಸಲಾಗಿದೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದರು.

ವಿಧಾನಸಭೆಯಲ್ಲಿ ಬಿಜೆಪಿ ವತಿಯಿಂದ ನಿರ್ಣಯ ಮಂಡನೆಯಾದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಕೇಂದ್ರ ಸರ್ಕಾರದಿಂದ ಹೆಚ್ಚು ಅನುದಾನ ರಾಜ್ಯಕ್ಕೆ ಬಂದಿದೆ. ರೈಲ್ವೆ, ಗ್ರಾಮೀಣಾಭಿವೃದ್ಧಿ, ವಿಮಾನ ನಿಲ್ದಾಣ, ಹೆದ್ದಾರಿ ಸೇರಿದಂತೆ ಅನೇಕ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಉತ್ತಮ ಅನುದಾನ ನೀಡಿದೆ. ಇದಕ್ಕಾಗಿ ಅಭಿನಂದನೆ ಸಲ್ಲಿಸಿ ನಿರ್ಣಯ ಮಂಡಿಸಲಾಗಿದೆ.ಸಂಸದ ಡಿ.ಕೆ.ಸುರೇಶ್‌ ಅವರು ದೇಶ ಒಡೆಯುವ ಮಾತನಾಡಿದ್ದು, ಅದನ್ನು ಮರೆಸಲು ರಾಜ್ಯ ಸರ್ಕಾರದಿಂದ ನಿರ್ಣಯ ಮಂಡಿಸಲಾಗಿದೆ. ಇಡೀ ದೇಶದಲ್ಲಿ ಖಂಡನೆ ಕೇಳಿಬಂದ ನಂತರ ಈ ನಾಟಕವಾಡಲಾಗಿದೆ. ಆದ್ದರಿಂದ ಕೇಂದ್ರ ಸರ್ಕಾರದ ನೀಡಿದ ಸಹಕಾರದ ಬಗ್ಗೆ ಬಿಜೆಪಿ ಮಂಡಿಸಿದ ನಿರ್ಣಯದಲ್ಲಿ ತಿಳಿಸಲಾಗಿದೆ ಎಂದರು.

ದೇಶದಲ್ಲಿ ಎರಡು ಧ್ವಜ ಹಾರಿಸಲು ಕಾಂಗ್ರೆಸ್‌ ಅನುಮತಿ ನೀಡಿತ್ತು. ದೇಶ ಮೊದಲು ಪಕ್ಷ ನಂತರ ಎಂದು ಬಿಜೆಪಿ ಹೇಳಿದರೆ, ದೇಶ ನಂತರ ಸೋನಿಯಾ ಮೊದಲು ಎನ್ನುವುದು ಕಾಂಗ್ರೆಸ್‌ನ ಧೋರಣೆ. ಕುತಂತ್ರ ಮಾಡಿ ನಿರ್ಣಯ ಕೈಗೊಂಡಿದ್ದು, ಅದನ್ನು ಹಿಂಪಡೆಯಲು ಧರಣಿ ಮಾಡಿದ್ದೇವೆ. ಕೇಂದ್ರ-ರಾಜ್ಯ ಸರ್ಕಾರಗಳು ಜೋಡೆತ್ತಿನಂತೆ ಸಾಗಬೇಕು ಎಂದರು. ಕಾಂಗ್ರೆಸ್‌ ಸರ್ಕಾರ ಬಜೆಟ್‌ನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ದ್ವೇಷಕಾರಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ದುರಂಹಕಾರದಿಂದ ಮಾತನಾಡಿರುವುದು ಜನತೆಗೆ ಮಾಡಿದ ಅಪಮಾನ ಎಂದರು.

ಬಿ.ಕೆ.ಹರಿಪ್ರಸಾದ್‌ ಅವರು ಸಚಿವರಾಗದಿರುವುದರಿಂದ ಈಗ ಸರ್ಕಾರದ ತಪ್ಪುಗಳನ್ನು ಹೇಳುತ್ತಿದ್ದಾರೆ. ಅಯೋಧ್ಯೆಗೆ ಹೋಗುತ್ತಿರುವ ರೈಲಿಗೆ ಮುಸ್ಲಿಮರು ಬೆದರಿಕೆ ಹಾಕುತ್ತಾರೆ ಎಂದರೆ ಅದಕ್ಕೆ ಕಾಂಗ್ರೆಸ್‌ ಕಾರಣವಾಗುತ್ತದೆ. ಇಲ್ಲಿ ಮುಸ್ಲಿಂ ಸಂಘಟನೆಗಳಿಗೆ ಕಾಂಗ್ರೆಸ್‌ ಸರ್ಕಾರ ಕುಮ್ಮಕ್ಕು ನೀಡಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಈಗಾಗಲೇ ಹೇಳಿದ್ದೇನೆ ಎಂದರು.ತಮಿಳುನಾಡಿನ ಸಚಿವರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಗೆ ಆತ್ಮೀಯ ಸ್ನೇಹಿತರು. ಅವರ ಪಕ್ಷದವರು ಪಾರ್ಟ್‌ನರ್‌ ಆಗಿರುವುದರಿಂದ ಅಲ್ಲಿ ಹೋಗಿ ಮಾತನಾಡಲಿ. ನಮ್ಮ ನೀರು ನಮ್ಮ ಹಕ್ಕು ಎನ್ನುವುದು ಬೋಗಸ್‌ ನಾಟಕ ಎನ್ನುವುದು ಜನರಿಗೆ ಗೊತ್ತಾಗಿದೆ ಎಂದರು.

ನಿರ್ಣಯದಲ್ಲಿರುವ ಅಂಶ: ಭಾರತ ಪ್ರಜಾಸತ್ತಾತ್ಮಕ ದೇಶವಾಗಿ 75 ವರ್ಷ ಕಳೆದಿದೆ. ಈ ಪೈಕಿ ಹೆಚ್ಚು ವರ್ಷ ಆಡಳಿತ ಮಾಡಿರುವುದು ಕಾಂಗ್ರೆಸ್. ಹಲವಾರು ವರ್ಷ ರಾಜ್ಯಗಳ ತೆರಿಗೆ ಪಾಲು ಕೇವಲ 20% ರಷ್ಟು ಇದ್ದು, 30% ಕ್ಕೆ ಹೆಚ್ಚಿಸಲು ಸುದೀರ್ಘ ಹೋರಾಟವನ್ನು ರಾಜ್ಯ ಮಾಡಬೇಕಾಯಿತು. 30% ರಿಂದ ಶೇ 40% ಏರಿಕೆ ಮಾಡುವ ಬೇಡಿಕೆಯನ್ನು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಮಾಡಲು ನಿರಾಕರಿಸಿತ್ತು. ರಾಜ್ಯದ ಅಭಿವೃದ್ಧಿಗಾಗಿ ಹೆಚ್ಚಿನ ಪಾಲು ಕೊಡದ ಯುಪಿಎ ಸರ್ಕಾರದ ವಿರುದ್ಧ ಚಕಾರ ಎತ್ತದ ರಾಜ್ಯ ಕಾಂಗ್ರೆಸ್ ಕೇವಲ ರಾಜಕಾರಣಕ್ಕಾಗಿ ಈ ವಿಷಯವನ್ನು ಪ್ರಸ್ತಾಪಿಸಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಕೋ ಆಪರೇಟಿವ್ ಫೆಡರಲಿಸಂ ಎಂಬ ನೀತಿಯಿಂದ ರಾಜ್ಯಕ್ಕೆ ತೆರಿಗೆ ಪಾಲು ಕೊಡುವ ಬಹಳ ದಿನಗಳ ಬೇಡಿಕೆ 32% ರಿಂದ 42% ಏರಿಸಿರುವುದು ಎನ್‌ಡಿಎ ಸರ್ಕಾರದ ಕಾಳಜಿ ತೋರಿಸುತ್ತದೆ. ಸಂವಿಧಾನದ ಅಡಿಯಲ್ಲಿ ರಚನೆಯಾಗಿರುವ ಹಣಕಾಸು ಆಯೋಗಗಳ ಶಿಫಾರಸ್ಸಿನಂತೆ ರಾಜ್ಯಗಳಿಗೆ ಹಣಕಾಸು ಹಂಚಿಕೆ ಮಾಡಬೇಕಾಗುತ್ತದೆ. ಅದನ್ನು ಕೆಂದ್ರದ ಎನ್‌ಡಿಎ ಸರ್ಕಾರ ಚಾಚೂತಪ್ಪದೆ ಪಾಲಿಸಿದೆ. ರಾಜ್ಯ ಸರ್ಕಾರದ ತಾರತಮ್ಯದ ಆರೋಪ ಸಂಪೂರ್ಣ ಸುಳ್ಳಿನಿಂದ ಕೂಡಿದೆ ಎಂದು ವಾಗ್ದಾಳಿ ನಡೆಸಿದರು.

Leave a Reply

Your email address will not be published. Required fields are marked *

error: Content is protected !!