ಬೆಳ್ತಂಗಡಿ: ವೇಣೂರಿನ ಬಾಹುಬಲಿ ಸ್ವಾಮಿಗೆ ಮಹಾಮಸ್ತಕಾಭಿಷೇಕ ಸಂಭ್ರಮ

ವೇಣೂರು: ಬೆಳ್ತಂಗಡಿ ತಾಲೂಕಿನ ವೇಣೂರಿನ ಬಾಹುಬಲಿ ಕ್ಷೇತ್ರದಲ್ಲಿ ಮಹಾಮಸ್ತಕಾಭಿಷೇಕಕ್ಕೆ ನಿನ್ನೆಯೇ ಅಧಿಕೃತ ಚಾಲನೆ ಸಿಕ್ಕಿದ್ದು, 12 ವರ್ಷದ ಬಳಿಕ ಕಲಶದ ಮೂಲಕ 35 ಅಡಿ ಎತ್ತರದ ಬಾಹುಬಲಿ ಮೂರ್ತಿಗೆ ಐದು ಅಂತಸ್ತಿನ ಅಟ್ಟಳಿಗೆ ಹತ್ತಿ ಅಭಿಷೇಕ ಮಾಡುತ್ತಿದ್ದಾರೆ. ಇದನ್ನು ಕಣ್ತುಂಬಿಕೊಳ್ಳಲು ವೇಣೂರು ಬಾಹುಬಲಿ ಮಹಾಮಸ್ತಕಾಭಿಷೇಕದಲ್ಲಿ ಸಾವಿರಾರು ಭಕ್ತರು ಭಾಗಿಯಾಗಿದ್ದಾರೆ. ಇದು ಮಾರ್ಚ್ 1ರವರೆಗೆ ಮುಂದುವರಿಯಲಿದ್ದು ವಿವಿಧ ದ್ರವ್ಯಗಳಿಂದ ಬಾಹುಬಲಿ ಮೂರ್ತಿಗೆ ಅಭಿಷೇಕ ನಡೆಯಲಿದೆ.

ರಾಜ್ಯದಲ್ಲಿರುವ ಪ್ರಮುಖ ನಾಲ್ಕು ಬಾಹುಬಲಿ ಮೂರ್ತಿಗಳ ಪೈಕಿ ಮೂರು ಮೂರ್ತಿಗಳು ದಕ ಜಿಲ್ಲೆಯಲ್ಲಿದ್ದರೆ, ಅತಿ ಎತ್ತರದ ಮೂರ್ತಿ ಶ್ರವಣಬೆಳಗೊಳದಲ್ಲಿದೆ. ಕಾರ್ಕಳದಲ್ಲಿ 42 ಅಡಿ, ವೇಣೂರಿನಲ್ಲಿ 35 ಅಡಿ ಹಾಗೂ ಧರ್ಮಸ್ಥಳದಲ್ಲಿ 39 ಅಡಿ ಎತ್ತರದ ಬಾಹುಬಲಿ ಮೂರ್ತಿಗಳಿವೆ. ವೇಣೂರಿನ ಅಜಿಲ ಮನೆತನದವರು ಸ್ಥಾಪಿಸಿದ ಬಾಹುಬಲಿ ಮೂರ್ತಿಗೆ ಈ ಶತಮಾನದ ಮೂರನೇ ಮಹಾ ಮಸ್ತಕಾಭಿಷೇಕ. ಈ ಹಿಂದೆ 2000, 2012ರಲ್ಲಿ ಮಹಾ ಮಸ್ತಕಾಭಿಷೇಕ ನಡೆದಿತ್ತು.

ಅಟ್ಟಳಿಗೆ: ಪ್ರಾಚೀನ ಕಾಲದಲ್ಲಿಹಗ್ಗದ ಅಟ್ಟಳಿಗೆ ನಿರ್ಮಿಸಲಾಗುತ್ತಿತ್ತು ಬಳಿಕ ಬಿದಿರಿನ ಅಟ್ಟಳಿಗೆ ಬಂತು. 2000ದಲ್ಲಿನಡೆದ ಮಹಾಮಸ್ತಕಾಭಿಷೇಕಕ್ಕೆ ಮರದ ಅಟ್ಟಳಿಗೆ ಮಾಡಲಾಗಿತ್ತು. 2012ರಲ್ಲಿಕಬ್ಬಿಣದ ಅಟ್ಟಳಿಗೆ ನಿರ್ಮಿಸಲಾಗಿತ್ತು. ಈ ಬಾರಿ 50 ಅಡಿ ಎತ್ತರದ ಕಬ್ಬಿಣದ ಅಟ್ಟಳಿಗೆ ಸಿದ್ಧವಾಗಿದ್ದು, 5 ಅಂತಸ್ತಿನಲ್ಲಿದೆ. ಪ್ರತಿ ಅಂತಸ್ತಿನಲ್ಲಿ 100 ಮಂದಿ ನಿಲ್ಲಲು ಸ್ಥಳಾವಕಾಶ ಇದೆ.

9 ದಿನಗಳ ವಿವಿಧ ಕಾರ್ಯಕ್ರಮ

ಮಾ.1ರಂದು ಮಹಾಮಸ್ತಕಾಭಿಷೇಕ ಕಾರ್ಯಕ್ರಮ ಸಂಪನ್ನಗೊಳ್ಳಲಿದ್ದು, ಪ್ರತಿದಿನ ಧಾರ್ಮಿಕ ವಿಧಿವಿಧಾನ, ಸಂತರ್ಪಣೆ, ಧಾರ್ಮಿಕ ಸಭೆ, ಪ್ರವಚನ, ಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಂಜೆ ಹಲವು ದ್ರವ್ಯಗಳಿಂದ ಬಾಹುಬಲಿ ಮೂರ್ತಿಗೆ ಮಹಾಮಸ್ತಕಾಭಿಷೇಕ ಜರುಗಲಿದೆ. ವಸ್ತು ಪ್ರದರ್ಶನ ವ್ಯವಸ್ಥೆ ಮಾಡಲಾಗಿದೆ.

Leave a Reply

Your email address will not be published. Required fields are marked *

error: Content is protected !!