ಶಿವಸೇನೆಯ ಹಿರಿಯ ನಾಯಕ,ಮಹಾರಾಷ್ಟ್ರದ ಮಾಜಿ ಸಿಎಂ ಮನೋಹರ್ ಜೋಶಿ ಇನ್ನಿಲ್ಲ

ನವದೆಹಲಿ: ಶಿವಸೇನೆಯ ಹಿರಿಯ ನಾಯಕ ಹಾಗೂ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಮನೋಹರ್ ಜೋಶಿ ವಿಧಿವಶರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು.

ಮನೋಹರ್ ಜೋಶಿ ಅವರು ಹೃದಯಾಘಾತದಿಂದ ಮುಂಬೈನ ಹಿಂದೂಜಾ ಆಸ್ಪತ್ರೆಗೆ ದಾಖಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಫೆಬ್ರವರಿ 23ರ ಮುಂಜಾನೆ 3 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಕೆಲವು ತಿಂಗಳ ಹಿಂದೆ ಮನೋಹರ್ ಜೋಶಿ ಮೆದುಳಿನ ರಕ್ತಸ್ರಾವದಿಂದ ಹಿಂದೂಜಾ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಅವರು ಚೇತರಿಸಿಕೊಂಡ ನಂತರ ಅವರನ್ನು ಡಿಸ್ಚಾರ್ಜ್ ಮಾಡಲಾಗಿತ್ತು. ಅನಾರೋಗ್ಯದ ಹಿನ್ನೆಲೆಯಲ್ಲಿ ಕಳೆದ ಹಲವು ದಿನಗಳಿಂದ ಮನೋಹರ್ ಜೋಶಿ ಸಕ್ರಿಯ ರಾಜಕಾರಣದಿಂದ ದೂರ ಉಳಿದಿದ್ದರು.

ಮನೋಹರ್ ಜೋಶಿ ಅವರು ರಾಯಗಡ ಜಿಲ್ಲೆಯ ನಂಡ್ವಿ ಗ್ರಾಮದಲ್ಲಿ 1937ರ ಡಿಸೆಂಬರ್​​ 2 ರಂದು ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಎಂಎ ಮತ್ತು ಎಲ್​ಎಲ್​ಬಿ ಪದವಿಗಳನ್ನು ಮುಂಬೈ ವಿಶ್ವವಿದ್ಯಾಲಯದಿಂದ ಪಡೆದರು.

ಜೋಶಿ ಅವರು 1995ರಿಂದ 1999ರವರೆಗೆ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಅವಿಭಜಿತ ಶಿವಸೇನಾದಿಂದ ರಾಜ್ಯದಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಿದ ಮೊದಲ ನಾಯಕರಾಗಿದ್ದರು. ಸಂಸತ್ ಸದಸ್ಯರಾಗಿಯೂ ಸೇವೆ ಸಲ್ಲಿದ್ದ ಇವರು ವಾಜಪೇಯಿ ಸರ್ಕಾರ ಅಧಿಕಾರದಲ್ಲಿದ್ದಾಗ 2002ರಿಂದ 2004ರವರೆಗೆ ಲೋಕಸಭಾ ಸ್ಪೀಕರ್ ಆಗಿಯೂ ಸೇವೆ ಸಲ್ಲಿದ್ದರು

Leave a Reply

Your email address will not be published. Required fields are marked *

error: Content is protected !!