ಉಡುಪಿ: ಫೆ.24ಕ್ಕೆ ನೂತನ ಕೈಮಗ್ಗ ನೇಯ್ಗೆ ಕೇಂದ್ರ ಉದ್ಘಾಟನೆ

ಉಡುಪಿ: ಉಡುಪಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘ ಹಾಗೂ ಪದ್ಮಶಾಲಿ ನೇಕಾರ ಪ್ರತಿಷ್ಠಾನ ಉಡುಪಿ ಇವರ ಸಹಭಾಗಿತ್ವದಲ್ಲಿ ಉಡುಪಿ ಜಿಲ್ಲಾಡಳಿತ, ನಬಾರ್ಡ್, ಕೈಮಗ್ಗ ಮತ್ತು ಜವಳಿ ಇಲಾಖೆ, ನೇಕಾರರ ಸೇವಾ ಕೇಂದ್ರ ಬೆಂಗಳೂರು ಹಾಗೂ ರೋಬೋಸಾಫ್ಟ್‌ನ ಸಿಎಸ್‌ಆರ್ ನಿಧಿಯ ಸಹಕಾರದೊಂದಿಗೆ ಉಡುಪಿಯಲ್ಲಿ ಪ್ರಾರಂಭಿಸಲಾದ ನೂತನ ಕೈಮಗ್ಗ ನೇಯ್ಗೆ ಕೇಂದ್ರದ ಉದ್ಘಾಟನೆ ಹಾಗೂ 30 ಮಂದಿ ಮಹಿಳೆಯರಿಗೆ ಪ್ರಾರಂಭಿಸಲಾಗುವ ಆರು ತಿಂಗಳ ಕೈಮಗ್ಗ ನೇಯ್ಗೆ ತರಬೇತಿಗೆ ಫೆ.24ರಂದು ಬನ್ನಂಜೆಯಲ್ಲಿರುವ ಜಿಲ್ಲಾ ಪಂಚಾಯತ್ ಕಟ್ಟಡದಲ್ಲಿ ಚಾಲನೆ ನೀಡಲಾಗುವುದು ಎಂದು ಪದ್ಮಶಾಲಿ ನೇಕಾರ ಪ್ರತಿಷ್ಠಾನ ಹಾಗೂ ಉಡುಪಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರತ್ನಾಕರ್ ಇಂದ್ರಾಳಿ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೈಮಗ್ಗ ನೇಯ್ಗೆ ತರಬೇತಿ ಕೇಂದ್ರದಲ್ಲಿ ಈಗಾಗಲೇ 50 ಕೈಮಗ್ಗಗಳನ್ನು ಅಳವಡಿಸಲಾಗಿದ್ದು, ಇದರಲ್ಲಿ ಎರಡನೇ ಹಂತದ ಆರು ತಿಂಗಳ ಕೈಮಗ್ಗ ನೇಯ್ಗೆ ತರಬೇತಿಯನ್ನು 30 ಮಂದಿ ಮಹಿಳೆಯರಿಗೆ ನೀಡಲಾಗುವುದು ಎಂದರು.

ಕೈಮಗ್ಗ ನೇಕಾರಿಕೆಯ ಪುನಶ್ಚೇತನಕ್ಕಾಗಿ ಕಳೆದ ಮೂರು ವರ್ಷಗಳಿಂದ ಶ್ರಮಿಸುತ್ತಿರುವ ನೇಕಾರ ಪ್ರತಿಷ್ಠಾನ, ಉಡುಪಿ ಯಲ್ಲಿ ನೂತು ಹೊಸ ಕೈಮಗ್ಗ ನೇಕಾರರಿಗೆ ತರಬೇತಿ ನೀಡುವ ಸಂಕಲ್ಪ ಹೊಂದಿದೆ ಎಂದರು. ಈಗಾಗಲೇ ಉಡುಪಿ ಜಿಲ್ಲಾಡಳಿತದ ಆಶ್ರಯದಲ್ಲಿ 25 ಯುವತಿಯರಿಗೆ 12,000 ಶಿಷ್ಯ ವೇತನ ನೀಡಿ, ಊಟ, ಉಪಹಾರ, ಪ್ರಯಾಣ ಭತ್ಯೆ ಭರಿಸಿ ಮಣಪಾಲದಲ್ಲಿ ಆರು ತಿಂಗಳ ಮೊದಲ ಹಂತದ ತರಬೇತಿ ನೀಡಲಾಗಿದೆ. ಇವರಲ್ಲಿ 22 ಮಂದಿ ಯುವತಿಯರು ಬನ್ನಂಜೆ ನೂತನ ಕಟ್ಟಡದಲ್ಲಿ ವೃತ್ತಿಪರ ನೇಕಾರರಾಗಿ ನೇಯ್ಗೆ ಕಾಯಕ ಪ್ರಾರಂಭಿಸಲಿದ್ದಾರೆ ಎಂದು ರತ್ನಾಕರ ಇಂದ್ರಾಳಿ ತಿಳಿಸಿದರು.

ಇದೀಗ 2ನೇ ಹಂತದಲ್ಲಿ ತರಬೇತಿಗೆ ಆಯ್ಕೆಯಾಗಿರು ವ 30 ಮಂದಿ ಮಹಿಳೆಯರಿಗೂ ತಿಂಗಳಿಗೆ ತಲಾ 8,000ರೂ. ಶಿಷ್ಯವೇತನದೊಂದಿಗೆ ಉಚಿತ ಊಟ, ಉಪಹಾರ ನೀಡಲಾಗುವುದು ಎಂದರು.

ಕರಾವಳಿ ಭಾಗದಲ್ಲಿ ಕೈಮಗ್ಗದ ಮೂಲಕ ಗಂಜಿ ಹಾಕಿ ನೇಯಲಾಗುವ ಹತ್ತಿ ನೂಲಿನ ವಿಶಿಷ್ಟ ಸೀರೆಗಳಿಗೆ ಈಗ ಬೇಡಿಕೆ ಬಂದಿದೆ. ಉಡುಪಿ ಸೀರೆಗಳೆಂದು ಮಾರುಕಟ್ಟೆ ಯಲ್ಲಿ ಬೇಡಿಕೆಯನ್ನು ಹೊಂದಿರುವ ಈ ಸೀರೆಗಳಿಗೆ 2018ರಲ್ಲಿ ಜಿಯೋಗ್ರಾ ಫಿಕಲ್ ಇಂಡಿಕೇಷನ್ ಟ್ಯಾಗ್(ಜಿಐ ಟ್ಯಾಗ್) ದೊರಕಿದ್ದು, ಇಂದು ದೇಶ-ವಿದೇಶಗಳು ಸೇರಿದಂತೆ ಎಲ್ಲಾ ಕಡೆಗಳಲ್ಲಿ ತುಂಬಾ ಜನಪ್ರಿಯತೆಯನ್ನು ಪಡೆದಿದೆ ಎಂದವರು ತಿಳಿಸಿದರು.

ಒಂದೆರಡು ದಶಕಗಳ ಹಿಂದಿನವರೆಗೂ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾವಿರಾರು ನೇಕಾರರಿದ್ದರೆ, ಇಂದು ಸ್ಪರ್ಧಾ ತ್ಮಕ ಜಗತ್ತಿನ ಹೊಡೆತಗಳಿಂದ ಚೇತರಿಸಿಕೊಳ್ಳಲಾರದೇ ಅವು ನಶಿಸಿಹೋಗುತ್ತಿವೆ. ಇದರೊಂದಿಗೆ ಹೆಚ್ಚಿನ ಪರಿಶ್ರಮ ಬೇಡುವ ಈ ಕಸುಬಿನ ಕುರಿತಂತೆ ಯವಜನತೆಯಲ್ಲಿ ಹೆಚ್ಚಿದ ಕೀಳರಿಮೆ, ಕಡಿಮೆ ಆದಾಯದಿಂದ ನೇಯ್ಗೆ ಉದ್ಯಮ ಉಡುಪಿ ಮತ್ತು ದಕ್ಷಿಣಕನ್ನಡ ಜಿಲ್ಲೆಗಳಲ್ಲಿ ನಲುಗಿ ಹೋಗಿದ್ದು, 50ಕ್ಕಿಂತ ಕಡಿಮೆ ನೇಕಾರರು ಇಂದು ಉಳಿದುಕೊಂಡಿದ್ದಾರೆ. ಇವರಲ್ಲಿ ಬಹುಸಂಖ್ಯಾತರು ಬದುಕಿನ ಸಂಧ್ಯಾಕಾಲದಲ್ಲಿರುವವರು ಎಂದರು.

ಹೀಗಾಗಿ ನೇಕಾರಿಕೆ ಕುಲಕಸುಬಿನ ಪುನರುತ್ಥಾನದ ಗುರಿಯೊಂದಿಗೆ ಪದ್ಮಶಾಲಿ ನೇಕಾರ ಪ್ರತಿಷ್ಠಾನ ಕಾರ್ಯಪ್ರವೃತ್ತ ವಾಗಿದ್ದು, ಯುವಜನತೆಯನ್ನು ನೇಕಾರಿಕೆಯತ್ತ ಸೆಳೆಯಲು ಪ್ರಯತ್ನಿಸುತ್ತಿದೆ ಎಂದರು.

ಕೈಮಗ್ಗ ನೇಯ್ಗೆ ಕೇಂದ್ರವನ್ನು ಫೆ.24ರ ಬೆಳಗ್ಗೆ 10:30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಉದ್ಘಾಟಿ ಸಲಿದ್ದು, ಕೇಂದ್ರ ಸಚಿವೆ, ಸಂಸದೆ ಶೋಭಾ ಕರಂದ್ಲಾಜೆ ದೀಪ ಬೆಳಗಿಸುವರು. ಶಾಸಕ ಯಶಪಾಲ್ ಸುವರ್ಣ ಅಧ್ಯಕ್ಷತೆ ವಹಿಸುವರು ಎಂದರು. ಜಿಲ್ಲಾಧಿಕಾರಿ, ಸಿಇಓ ಸೇರಿದಂತೆ ಗಣ್ಯರು ಇದರಲ್ಲಿ ಭಾಗವಹಿಸುವರು ಎಂದರು.

ಪತ್ರಿಕಾಗೋಷ್ಠಿಯಲ್ಲಿ ನೇಕಾರರ ಸೇವಾ ಸಂಘದ ಪ್ರೇಮಾನಂದ ಶೆಟ್ಟಿಗಾರ್, ದೇವರಾಯ ಶೆಟ್ಟಿಗಾರ್, ಕೇಶವ ಶೆಟ್ಟಿಗಾರ್, ವ್ಯವಸ್ಥಾಪಕ ನಿರ್ದೇಶಕ ದಿನೇಶ್ ಕುಮಾರ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!