ಅನಿವಾಸಿ ಕನ್ನಡಿಗರಿಗೆ ಪ್ರತ್ಯೇಕ ಸಚಿವಾಲಯ ಸ್ಥಾಪನೆ: ಸಚಿವ ಡಾ.ಜಿ. ಪರಮೇಶ್ವರ್

ಬೆಂಗಳೂರು: ಕೇರಳ ಮಾದರಿಯಲ್ಲಿಯೇ ಅನಿವಾಸಿ ಕನ್ನಡಿಗರ ಯೋಗಕ್ಷೇಮ ನೋಡಿಕೊಳ್ಳುವುದಕ್ಕಾಗಿ ಕರ್ನಾಟಕದಲ್ಲಿ ಪ್ರತ್ಯೇಕ ಸಚಿವಾಲಯ ಸ್ಥಾಪನೆ ಮಾಡಲಾಗುವುದು ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.

ಬುಧವಾರ ಸ್ಪೀಕರ್ ಯು ಟಿ ಖಾದರ್ ಅವರ ವಿಶೇಷ ಆಹ್ವಾನದ ಮೇರೆಗೆ ಬೆಂಗಳೂರಿಗೆ ಬಂದ 15ಕ್ಕೂ ಅಧಿಕ ಅನಿವಾಸಿ ಭಾರತೀಯರ ನಿಯೋಗದ ಅನಿವಾಸಿ ಭಾರತೀಯ ಕೋಶ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ ಅವರ ಜೊತೆ ವಿಧಾನಸಭೆಯ ಕಾರ್ಯ ಕಲಾಪ ವೀಕ್ಷಣೆ ಮಾಡುತ್ತಿರುವುದನ್ನು ಸ್ವಾಗತಿಸಿ ಅವರು ಮಾತನಾಡಿದರು. ಶೂನ್ಯ ವೇಳೆಯಲ್ಲಿ ಅನಿವಾಸಿ ಕನ್ನಡಿಗರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸ್ಪೀಕರ್ ಖಾದರ್ ವಿಶೇಷ ಅವಕಾಶ ಮಾಡಿಕೊಟ್ಟಿರು.

ಅನಿವಾಸಿಗಳಿಗೆ ಉತ್ತೇಜನ, ಅವರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಈಗಾಗಲೇ ಕೇರಳ ರಾಜ್ಯದಲ್ಲಿ ಅನಿವಾಸಿ ಪ್ರತ್ಯೇಕ ಸಚಿವಾಲಯ ಸ್ಥಾಪಿಸಲಾಗಿದೆ. ಇದೇ ರೀತಿ ರಾಜ್ಯದಲ್ಲಿ ಸಚಿವಾಲಯ ಸ್ಥಾಪನೆ ಮಾಡಿ ರಾಜ್ಯದಿಂದ ಹೊರ ದೇಶಗಳಿಗೆ ತೆರಳುವ ಅನಿವಾಸಿಗ ಳಿಗೆ ಪ್ರೋತ್ಸಾಹ ನೀಡಲಾಗುವುದು ಎಂದು ಹೇಳಿದರು.

ಅನಿವಾಸಿ ಭಾರತೀಯರಿಗಾಗಿಯೇ ಪ್ರತ್ಯೇಕ ಸಚಿವಾಲಯ ಸ್ಥಾಪಿಸುವುದಾಗಿ ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ತನ್ನ ಪಕ್ಷದ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿದೆ. ಈಗಾಗಲೇ ರಾಜ್ಯದ ಎನ್ಆರ್‌ಐ ಕೋಶದ ಉಪಾಧ್ಯಕ್ಷರನ್ನು ನೇಮಿಸಲಾಗಿದೆ. ನಾವು ಅನಿವಾಸಿ ಭಾರತೀಯರಿಗೆ ಅನುಕೂಲವಾಗುವಂತೆ ಸಚಿವಾಲಯವನ್ನು ಸ್ಥಾಪಿಸುತ್ತೇವೆ. ಅವರಲ್ಲಿ ಬಹಳಷ್ಟು ಮಂದಿ ಕರ್ನಾಟಕದಲ್ಲಿ ಹೂಡಿಕೆ ಮಾಡಲು ಬಯಸುತ್ತಾರೆ. ಅವರು ತಮ್ಮ ತಾಯ್ನಾಡು ಸಮೃದ್ಧವಾಗಿರಬೇಕೆಂದು ಬಯಸುತ್ತಾರೆ ಎಂದು ನುಡಿದರು.

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಕರಾವಳಿ ಭಾಗದಿಂದ ಅನೇಕ ಮಂದಿ ವಿದೇಶಕ್ಕೆ ತೆರಳಿ ಅಲ್ಲಿಂದ ತಾಯ್ನಾಡಿಗೆ ಸೇವೆ, ಕೊಡುಗೆ ನೀಡುತ್ತಿದ್ದಾರೆ. ಇಂತಹವರ ಹಿತಕಾಪಾಡ ಬೇಕು. ಜೊತೆಗೆ ಬಂಡವಾಳ ಹೂಡಿಕೆಯೂ ಆಗಲಿದೆ ಎಂದರು.

ವಿಧಾನಸಭೆ ವಿರೋಧ ಪಕ್ಷದ ಉಪ ನಾಯಕ ಅರವಿಂದ್‌ ಬೆಲ್ಲದ್‌ ಮಾತನಾಡಿ, ನರೇಂದ್ರ ಮೋದಿ ಪ್ರಧಾನಿ ಆದ ಬಳಿಕ ದೇಶದ ಬಗ್ಗೆ ಅಭಿಮಾನ ಹೆಚ್ಚಾಗಿದೆ. ಹೊರಗಡೆ ಹೋದವರೂ, ತಮ್ಮದು ಭಾರತ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.

ಬಳಿಕ ಸಚಿವರಾದ ಎಂ.ಬಿ.ಪಾಟೀಲ್, ಪ್ರಿಯಾಂಕ್ ಖರ್ಗೆ, ಶಾಸಕರಾದ ಎನ್.ಎ.ಹಾರಿಸ್ ಸೇರಿದಂತೆ ಪ್ರಮುಖರು ಅನಿವಾಸಿಗಳ ಸೇವೆ, ಕೊಡುಗೆ ಕುರಿತು ಗುಣಗಾನ ಮಾಡಿದರು.

Leave a Reply

Your email address will not be published. Required fields are marked *

error: Content is protected !!