ಸತ್ಯಜಿತ್ ಸುರತ್ಕಲ್ಗೆ ದ.ಕ ಲೋಕಸಭಾ ಟಿಕೆಟ್ ನೀಡಲು ಆಗ್ರಹ: ಅಚ್ಯುತ್ ಕಲ್ಮಾಡಿ
ಕುಂದಾಪುರ: ಹಿಂದುತ್ವಕ್ಕಾಗಿ ಫಲಾಪೇಕ್ಷೆ ಇಲ್ಲದೆ ಕೆಲಸ ಮಾಡಿ, ತನ್ನ ತತ್ವ ಸಿದ್ಧಾಂತಕ್ಕೆ ಬದ್ಧರಾಗಿ, ಧೀಮಂತ ನಾಯಕ ಎನಿಸಿಕೊಂಡ ಸತ್ಯಜಿತ್ ಸುರತ್ಕಲ್ ಅವರಿಗೆ ಬಿಜೆಪಿ ದ.ಕ ಲೋಕಸಭಾ ಟಿಕೆಟ್ ನೀಡಬೇಕು ಎಂದು ಸಂಘ ಪರಿವಾರದ ಹಿರಿಯ ಮುಖಂಡ ಅಚ್ಯುತ್ ಕಲ್ಮಾಡಿ ಆಗ್ರಹಿಸಿದ್ದಾರೆ.
ಬಿಜೆಪಿ ಪಕ್ಷದ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಸತ್ಯಜಿತ್ ಸುರತ್ಕಲ್ ಅವರನ್ನು ಆಯ್ಕೆ ಮಾಡಲು ಒತ್ತಾಯಿಸಿ ಸತ್ಯಜಿತ್ ಸುರತ್ಕಲ್ ಅಭಿಮಾನಿ ಬಳಗ ಕುಂದಾಪುರ ತಾಲೂಕು ವತಿಯಿಂದ ತಾಲೂಕು ಪಂಚಾಯತ್ ಎದುರು ರವಿವಾರ ನಡೆದ ಆಗ್ರಹ ಸಭೆಯಲ್ಲಿ ಅವರು ಮಾತನಾಡಿದರು.
ಪ್ರಸ್ತುತ ಕುಲಗೆಟ್ಟಿರುವ, ಸ್ವಾರ್ಥ ತುಂಬಿರುವ ರಾಜಕೀಯ ವ್ಯವಸ್ಥೆಯಿದೆ. ರಾಜಕೀಯದಲ್ಲಿ ಹಿಂದುತ್ವದ ಕಡೆಗೆ ಗಮನಹರಿ ಸುವ ವ್ಯಕ್ತಿ ಆರಿಸಿ ಬರಬೇಕಿದೆ. ಸಮರ್ಪಣಾ ಮನೋಭಾವನೆಯಿಂದ ತನ್ನನ್ನು ಹಿಂದುತ್ವಕ್ಕಾಗಿ ಸಮರ್ಪಿಸಿಕೊಂಡ ಸತ್ಯಜಿತ್ ಸುರತ್ಕಲ್ ಅವರಿಗೆ ಬೇರೆ ಬೇರೆ ಪಕ್ಷಗಳು ಟಿಕೆಟ್ ನೀಡಲು ಮುಂದೆ ಬಂದಿದ್ದರೂ ಅದನ್ನು ತಿರಸ್ಕರಿಸಿ ಬದ್ಧತೆ ತೋರಿದ್ದಾರೆ ಎಂದವರು ನುಡಿದರು.
ಸತ್ಯಜಿತ್ ಸುರತ್ಕಲ್ ಅಭಿಮಾನಿ ಬಳಗ ಕುಂದಾಪುರದ ಪ್ರಮುಖರಾದ ಧನಂಜಯ್ ಕುಂದಾಪುರ ಮಾತನಾಡಿ, ಸತ್ಯಜಿತ್ ಸುರತ್ಕಲ್ ಅವರಿಗೆ ದ.ಕ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ನೀಡಲು ಆಗ್ರಹಿಸಿ ಫೆ.25ರಂದು ಬಂಟ್ವಾಳದ ಬಂಟರ ಭವನದಲ್ಲಿ ರಾಜ್ಯಮಟ್ಟದ ಜನಾಗ್ರಹ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.
ಸತ್ಯಜಿತ್ ಸುರತ್ಕಲ್ ಅಭಿಮಾನಿ ಬಳಗ ಕುಂದಾಪುರದ ಪ್ರಮುಖರಾದ ಗಣೇಶ್ ಹೆಗ್ಡೆ ಕುಂದಾಪುರ, ಭಾಸ್ಕರ ಶೆಟ್ಟಿ ಸಿದ್ದಾಪುರ, ರಾಜೇಶ್ ಕೋಟೇಶ್ವರ ವೇದಿಕೆಯಲ್ಲಿದ್ದರು.