ಭಾರತಕ್ಕಿಂತಲೂ ಪಾಕಿಸ್ತಾನ ಕೋವಿಡ್ ಅನ್ನು ಉತ್ತಮವಾಗಿ ನಿಭಾಯಿಸಿದೆ: ರಾಹುಲ್ ಗಾಂಧಿ

ನವದೆಹಲಿ: “ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಕೂಡ ಕೋವಿಡ್ ಅನ್ನು ಭಾರತಕ್ಕಿಂತ ಉತ್ತಮವಾಗಿ ನಿಭಾಯಿಸಿದೆ” ಎಂದು ಕಾಂಗ್ರೆಸ್ ಮುಖಂಡ  ರಾಹುಲ್ ಗಾಂಧಿ ಹೇಳಿದ್ದಾರೆ.

ಕೇಂದ್ರ ಸರ್ಕಾರದ ಕೋವಿಡ್ ನಿಭಾವಣೆ ಹಾಗೂ ಆರ್ಥಿಕ ಪುನಶ್ಚೇತನ ನೀತಿಗಳ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್ ಈ ವರ್ಷ ಭಾರತದ ಆರ್ಥಿಕತೆಯು ಶೇಕಡಾ 10.3 ರಷ್ಟು ಭಾರಿ ಪ್ರಮಾಣದಲ್ಲಿ ಸಂಕುಚಿತಗೊಳ್ಳಲಿದೆ ಎಂಬ ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಹೇಳಿಕೆಯನ್ನು ಉಲ್ಲೇಖಿಸಿ ಇದು ಸರ್ಕಾರದ ಮತ್ತೊಂದು “ಘನ ಸಾಧನೆ” ಎಂದು ಹೇಳಿದರು.

ಬಾಂಗ್ಲಾದೇಶ, ಮ್ಯಾನ್ಮಾರ್, ನೇಪಾಳ, ಚೀನಾ, ಭೂತಾನ್, ಪಾಕಿಸ್ತಾನ, ಶ್ರೀಲಂಕಾ, ಅಫ್ಘಾನಿಸ್ತಾನ ಮತ್ತು ಭಾರತದ  2020-21ರ ಐಎಂಎಫ್ ಬೆಳವಣಿಗೆಯ ಅಂದಾಜನ್ನು  ತೋರಿಸುವ ಚಾರ್ಟ್ ಅನ್ನು ಟ್ಯಾಗ್ ಮಾಡುವ ಮೂಲಕ ಗಾಂಧಿ ಟ್ವಿಟ್ಟರ್ ನಲ್ಲಿ ಸರ್ಕಾರವನ್ನು ಟೀಕಿಸಿದ್ದಾರೆ.

ಈ ವರ್ಷ ಭಾರತದ ಆರ್ಥಿಕತೆಯು ಶೇಕಡಾ 10.3 ರಷ್ಟು ಭಾರಿ ಪ್ರಮಾಣದಲ್ಲಿ ಸಂಕುಚಿತಗೊಳ್ಳುವ ನಿರೀಕ್ಷೆಯಿದೆ ಎಂದು ಚಾರ್ಟ್ ತೋರಿಸಿದೆ, ಇದು ಪಟ್ಟಿಯಲ್ಲಿರುವ ಎಲ್ಲಾ ಇತರೆ ದೇಶಗಳಿಗಿಂತ ಅತಿ ಹೆಚ್ಚಿನ ಪ್ರಮಾಣದ ಕುಸಿತವಾಗಿದೆ. “ಬಿಜೆಪಿ ಸರ್ಕಾರದ ಮತ್ತೊಂದು ಘನ ಸಾಧನೆ. ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಕೂಡ ಕೋವಿಡ್ ಅನ್ನು ಭಾರತಕ್ಕಿಂತ ಉತ್ತಮವಾಗಿ ನಿಭಾಯಿಸಿದೆ” ಎಂದು ಗಾಂಧಿ ಚಾರ್ಟ್ ನೊಂದಿಗೆ ಟ್ವೀಟ್ ಮಾಡಿದ್ದಾರೆ.

ಈ ವರ್ಷದ ತಲಾವಾರು ಜಿಡಿಪಿಗೆ ಸಂಬಂಧಿಸಿದಂತೆ ಬಾಂಗ್ಲಾದೇಶ ಭಾರತವನ್ನು ಹಿಂದಿಕ್ಕುತ್ತದೆ ಎಂದು ತೋರಿಸುತ್ತಿರುವ ಐಎಂಎಫ್ ಬೆಳವಣಿಗೆಯ ಅಂದಾಜಿನ ಬಗ್ಗೆ  ಮಾಜಿ ಕಾಂಗ್ರೆಸ್ ಮುಖ್ಯಸ್ಥ ರಾಹುಲ್ ಗಾಂಧಿ  ಇದು ಬಿಜೆಪಿಯ ಆರು ವರ್ಷಗಳ “ದ್ವೇಷ ತುಂಬಿದ” “ಸಾಂಸ್ಕೃತಿಕ ರಾಷ್ಟ್ರೀಯತೆ ” ಹೇರುವ  ಒಂದು ಘನ ಸಾಧನೆ ಎಂದು ಬಣ್ಣಿಸಿದ್ದಾರೆ.

ಕೊರೋನಾವೈರಸ್  ಸಾಂಕ್ರಾಮಿಕ ರೋಗದಿಂದ ತೀವ್ರವಾಗಿ ತತ್ತರಿಸಿರುವ ಭಾರತೀಯ ಆರ್ಥಿಕತೆಯು ಈ ವರ್ಷ ಶೇಕಡಾ 10.3 ರಷ್ಟು ಭಾರಿ ಪ್ರಮಾಣದಲ್ಲಿ ಸಂಕುಚಿತಗೊಳ್ಳುವ ನಿರೀಕ್ಷೆಯಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ ಮಂಗಳವಾರ ತಿಳಿಸಿದೆ.

ಆದಾಗ್ಯೂ, ಭಾರತವು 2021 ರಲ್ಲಿ ಶೇಕಡಾ 8.8 ರಷ್ಟು ಬೆಳವಣಿಗೆಯ ದರವನ್ನು ಮುಟ್ಟುವ  ಸಾಧ್ಯತೆಯಿದೆ, ಹೀಗಾಗಿ ವೇಗವಾಗಿ ಬೆಳೆಯುತ್ತಿರುವ ಉದಯೋನ್ಮುಖ ಆರ್ಥಿಕತೆಯ ಸ್ಥಾನವನ್ನು ರಾಷ್ಟ್ರವು  ಮರಳಿ ಪಡೆಯುತ್ತದೆ ಎಂದಿದೆ. ಚೀನಾದ ನಿರೀಕ್ಷಿತ ಬೆಳವಣಿಗೆಯ ದರವನ್ನು ಶೇಕಡಾ 8.2 ರಷ್ಟಿದೆ ಎಂದು ಐಎಂಎಫ್ ತನ್ನ ಇತ್ತೀಚಿನ ‘ವಿಶ್ವ ಆರ್ಥಿಕ ಔಟ್ ಲುಕ್ ನಲ್ಲಿ ತಿಳಿಸಿದೆ. 
 

Leave a Reply

Your email address will not be published. Required fields are marked *

error: Content is protected !!