ಬಿಜೆಪಿಯವರ ತಲೆಯಲ್ಲಿ ಏನಿಲ್ಲ… ಏನಿಲ್ಲ… ಪ್ರತಿಪಕ್ಷಗಳಿಗೆ ಸಿದ್ದರಾಮಯ್ಯ ತಿರುಗೇಟು

ಬೆಂಗಳೂರು: ಬಿಜೆಪಿಯವರ ತಲೆಯಲ್ಲಿ ಏನಿಲ್ಲ.. ಏನೂ ಇಲ್ಲ. ಅವರು ಸಂಸದರಾಗುವುದಕ್ಕೆ ನಾಲಾಯಕ್ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಬಜೆಟ್ ಬಗ್ಗೆ ಏನಿಲ್ಲ… ಏನಿಲ್ಲ… ಎಂದು ಟೀಕಿಸಿದ ಪ್ರತಿಪಕ್ಷಗಳಿಗೆ ಶುಕ್ರವಾರ ತಿರುಗೇಟು ನೀಡಿದ್ದಾರೆ.

ಇಂದು ವಿಧಾನಸಭೆಯಲ್ಲಿ 2024-25ನೇ ಸಾಲಿನ ಬಜೆಟ್ ಮಂಡಿಸಿದ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಿಎಂ, ಈ ಬಾರಿ 3,71, 383 ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಲಾಗಿದೆ. ಇದು ಕಳೆದ ಬಜೆಟ್​​ಗಿಂತ 46,630 ಕೋಟಿ ರೂ. ಹೆಚ್ಚು ಗಾತ್ರದ ಬಜೆಟ್ ಎಂದರು.

ಗ್ಯಾರಂಟಿಗಳಿಂದ ರಾಜ್ಯ ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ಹೇಳುತ್ತಿದ್ದಾರೆ. ಬಿಟ್ಟಿ ಗ್ಯಾರಂಟಿ ಕೊಟ್ಟಿದ್ದರಿಂದ ಆರ್ಥಿಕ ದಿವಾಳಿ ಅಂತಿದ್ದಾರೆ. ಆದರೆ ಅಭಿವೃದ್ಧಿ ಕೆಲಸಗಳಿಗೂ ನಾವು ಅನುದಾವನ್ನು ಕೊಟ್ಟಿದ್ದೇವೆ. ಬರ ಹಿನ್ನೆಲೆಯಲ್ಲಿ ಕೇಂದ್ರದ ಬಳಿ 18,171 ಕೋಟಿ ರೂ. ಕೇಳಿದ್ದೇವೆ. ಇದುವರೆಗೂ ಕೇಂದ್ರದಿಂದ ಒಂದು ರೂ. ಸಹ ಬಂದಿಲ್ಲ. ಇದುವರೆಗೂ ಒಂದು ಮೀಟಿಂಗ್​ ಕೂಡ ಮಾಡಿಲ್ಲ. ರಾಜ್ಯದಲ್ಲಿ ಬಿಜೆಪಿಯವರು ಬಾಯಿಗೆ ಬಂದಂತೆ ಮಾತನಾಡುತ್ತಾರೆ ಎಂದು ಕಿಡಿಕಾರಿದರು.

ಕೇಂದ್ರ ಸರ್ಕಾರ ರಾಜ್ಯಕ್ಕೆ ಇಲ್ಲಿವರೆಗೆ 1 ರೂಪಾಯಿ ಕೊಟ್ಟಿಲ್ಲ. ನಾವು ಸುಳ್ಳು ಹೇಳಿದ್ರೆ ರಾಜ್ಯಪಾಲರು ಓದುತ್ತಿದ್ದರಾ? ಬಜೆಟ್​ ಕೇಳುವುದಕ್ಕೆ ಆಗದೇ ವಿಲವಿಲ ಒದ್ದಾಡಿ ಎದ್ದೋದ್ರು. ಕೋಲೆ ಬಸವನ ತರ ತಲೆ ಅಲ್ಲಾಡಿಸುತ್ತಾರೆ. ಆದ್ರೆ, ಅಲ್ಲಿ ಕೇಳಲ್ಲ. ಕರ್ನಾಟಕಕ್ಕೆ ಅನ್ಯಾಯ ಆಗಿದೆ ಎಂದು ಕೇಂದ್ರಕ್ಕೆ ಕೇಳಲ್ಲ. ಪಾರ್ಲಿಮೆಂಟ್​ನಲ್ಲಿ ಯಾವತ್ತಾದರೂ ಮಾತನಾಡಿದ್ದಾರಾ? ಇವರು ಸಂಸದರಾಗುವುದಕ್ಕೆ ನಾಲಾಯಕ್ ಎಂದು ಬಿಜೆಪಿ ಸಂಸದರ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಕೇಂದ್ರ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂಪಾಯಿ ಘೋಷಣೆ ಮಾಡಿತ್ತು. ಆದರೆ, ಇವತ್ತಿನವರೆಗೂ ಒಂದು ರೂಪಾಯಿ ಕೊಟ್ಟಿಲ್ಲ. ಬೊಮ್ಮಾಯಿ ಬಜೆಟ್​​ ಭಾಷಣ ಬೇಕಾದರೆ ತೆಗೆದು ನೋಡಿ. ಬಿಜೆಪಿ ನಾಯಕರು ರಾಜ್ಯದ ಜನತೆಗೆ ದ್ರೋಹ ಮಾಡುತ್ತಿದ್ದಾರೆ. 2023-24ರಲ್ಲಿ ಅಪ್ಪರ್ ಭದ್ರಾ ಯೋಜನೆಗೆ 5300 ಕೋಟಿ ಕೊಡುತ್ತೇವೆ ಎಂದು ಹೇಳಿದವರು ಇವರೇ. ಮೋದಿಗೆ ದೀರ್ಘದಂಡ ನಮಸ್ಕಾರ ಹಾಕಿದವರು ಇವರೇ. ಬಜೆಟ್ ಭಾಷಣದಲ್ಲಿ ಸೀತಾರಾಮನ್ ಹೇಳಿದ್ದಾರೆ ನೀವು ನೋಡಬಹುದು. ಇದು ಕರ್ನಾಟಕದ ಜನರಿಗೆ ಮಾಡುವ ದ್ರೋಹ ಅಲ್ವಾ ಎಂದು ಸಿಎಂ ಪ್ರಶ್ನಿಸಿದರು.

ಮೋದಿ ನಮ್ಮ ಗ್ಯಾರಂಟಿ ಕದ್ದಿದ್ದಾರೆ

ನಾವು ಬೇರೆಯವರಿಗೆ ಹಣ ಕೊಡಬೇಡಿ ಎಂದು ಹೇಳುವುದಿಲ್ಲ. ನಮ್ಮನ್ನು ಉಪವಾಸ ಇರಿಸಬೇಡಿ ಎಂದು ಕೇಂದ್ರಕ್ಕೆ ಕೇಳುತ್ತಿದ್ದೇವೆ. ಈ ಅನ್ಯಾಯವನ್ನು ಪ್ರಶ್ನಿಸಿದರೆ ಬಿಜೆಪಿಯವರು ವಿರೋಧಿಸುತ್ತಾರೆ. ಬಿಜೆಪಿ ನಾಯಕರು 1 ದಿನವಾದರೂ ರಾಜ್ಯದ ಪಾಲು ಕೇಳಿದ್ದಾರಾ? ರಾಜ್ಯದ ಬಿಜೆಪಿ ಸಂಸದರು, ಶಾಸಕರು ಕೇಂದ್ರವನ್ನು ಕೇಳಿದ್ದಾರಾ? ನಮ್ಮ ಗ್ಯಾರಂಟಿಯಿಂದ ಪ್ರತಿ ಕುಟುಂಬಕ್ಕೆ ವರ್ಷಕ್ಕೆ 50 ರಿಂದ 55 ‌ಸಾವಿರ ರೂಪಾಯಿ ಸಿಗುತ್ತೆ. ಉಚಿತ ಬಸ್ ನಿಂದ 155 ಕೋಟಿ‌ ಮಹಿಳೆಯರು ಪ್ರಯಾಣ ಮಾಡಿದ್ದಾರೆ. ಅನ್ನಭಾಗ್ಯ ಕೊಟ್ರೆ ಇದು ಬಿಟ್ಟಿ ಭಾಗ್ಯನಾ? 200 ಯೂನಿಟ್ ಒಳಗೆ ವಿದ್ಯುತ್ ಬಳಸುವವರಿಗೆ ಫ್ರೀ ಕೊಟ್ರೆ ಅದು ಬಿಟ್ಟಿನಾ? 1 ಕೋಟಿ 17 ಲಕ್ಷ ಯಜಮಾನಿಯರಿಗೆ ತಿಂಗಳಿಗೆ 2 ಸಾವಿರ ಕೊಟ್ರೆ ಅದು ಬಿಟ್ಟಿ ಭಾಗ್ಯನಾ? ಬಡವರಿಗೆಲ್ಲ ಬಿಜೆಪಿ ಅವಮಾನ ಮಾಡುತ್ತಿದೆ. ಗ್ಯಾರಂಟಿ ಅನ್ನೋ ಪದವನ್ನೇ ಬಿಜೆಪಿ‌ ಕದ್ದಿದೆ. ಮೋದಿ ಗ್ಯಾರಂಟಿ ಮೋದಿ ಗ್ಯಾರಂಟಿ ಅಂತಾರೆ. ನಮ್ಮನ್ನ ನಕಲು ಮಾಡಿದ್ದಾರೆ. ಈಗ ನಮ್ಮನ್ನೇ ಬಿಟ್ಟಿ ಗ್ಯಾರಂಟಿ ಅಂತ ಕರೆಯುತ್ತಿದ್ದಾರೆ. ಇವರ ಮೋದಿ‌ ಗ್ಯಾರೆಂಟಿಗೆ ಏನು ಹೇಳ್ಬೇಕು ಎಂದು ಲೇವಡಿ ಮಾಡಿದರು.

Leave a Reply

Your email address will not be published. Required fields are marked *

error: Content is protected !!