ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆಗೆ ಸಿದ್ದ- ಮಾಜಿ‌ ಸಚಿವ ಸೊರಕೆ

ಉಡುಪಿ, ಫೆ.14: ಲೋಕಸಭಾ ಚುನಾವಣೆಯಲ್ಲಿ ನಾನು ದಕ್ಷಿಣ ಕನ್ನಡ ಕ್ಷೇತ್ರದಿಂದ ಸ್ಪರ್ಧೆ ನಡೆಸಬೇಕು ಎನ್ನುವ ಆಸೆ ಕಾರ್ಯಕರ್ತರು ಮತ್ತು ನಾಯಕರಿಗೆ ಇದೆ, ಈ ಕುರಿತು ಪಕ್ಷದ ಹೈಕಮಾಂಡ್ ನಿರ್ಧಾರ ಮಾಡಲಿದೆ. ಈ ತಿಂಗಳ ಅಂತ್ಯದ ಒಳಗೆ ಅಭ್ಯರ್ಥಿ ಪಟ್ಟಿ ಬಿಡುಗಡೆ ಆಗಲಿದೆ ಎಂದು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ತಿಳಿಸಿದ್ದಾರೆ.

ಉಡುಪಿ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿದರೆ ಕಾಂಗ್ರೆಸ್ ಗೆಲ್ಲಲು ಸಾಧ್ಯವಿದೆ. ದ.ಕ ದಲ್ಲಿ ಪ್ರಸ್ತುತ ಇರುವ ಲೋಕಸಭಾ ಸದಸ್ಯರ ವಿಫಲತೆಗಳು ಹಲವಾರು ಇವೆ. ನಾನು ಈ ಹಿಂದೆ ಲೊಕಸಭಾ ಸದಸ್ಯನಾಗಿದ್ದಾಗ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳನ್ನು ಪ್ರತಿನಿಧಿಸಿದ್ದೆ. ನಾನು ಮೂಲತಃ ಪುತ್ತೂರಿನವನು ಹಾಗೂ ಅಲ್ಲಿಯೇ ಎರಡು ಸಲ ಶಾಸಕನಾಗಿ ಕೂಡಾ ಕಾರ್ಯನಿರ್ವಹಿಸಿದ್ದೆ. ಆ ಜಿಲ್ಲೆಯಲ್ಲಿಯೂ ಕೂಡಾ ನಮಗೆ ಸಂಪರ್ಕ ಇದೆ. ಅಂತಿಮವಾಗಿ ಹೈಕಮಾಂಡ ಸರ್ವೆ ನಡೆಸಿ, ಸ್ಕ್ರಿನಿಂಗ್ ಕಮಿಟಿ ಸಭೆ ನಡೆಸಿ ನಿರ್ಧಾರ ಮಾಡುತ್ತಾರೆ. ಯಾರ ಹೆಸರು ಅಂತಿಮವಾಗಿಲ್ಲ. ಎಐಸಿಸಿ, ಕೆಪಿಸಿಸಿ ಸರ್ವೆ ನಡೆಸಿ ನಾಯಕರ ಅಭಿಪ್ರಾಯ ಸಂಗ್ರಹ ಕೂಡಾ ನಡೆಯಲಿದೆ. ಎರಡೂ ಜಿಲ್ಲೆಯಲ್ಲಿ ಕೆಲಸ ಮಾಡಿರುವ ಅನುಭವ ಇದೆ. ಕಾರ್ಯಕರ್ತರು, ಪಕ್ಷದ ಮುಖಂಡರು ಪ್ರೀತಿಯಿಂದ ನನ್ನ ಹೆಸರನ್ನು ಪ್ರಸ್ತಾಪ ಮಾಡಿರಬಹುದು, ಇದು ನಾವು ಸಂಪಾದನೆ ಮಾಡಿರುವ ಆಸ್ತಿ ಎಂದರು.

ಉಡುಪಿಯಲ್ಲಿ ಜಯಪ್ರಕಾಶ್ ಹೆಗ್ಡೆ ಪಕ್ಷ ಮರುಸೇರ್ಪಡೆ ವಿಚಾರಕ್ಕೆ ಪ್ರತಿಕ್ರಿಯಿಸಲು ನಿರಾಕರಿಸಿದ ವಿನಯ್ ಕುಮಾರ್ ಸೊರಕೆ ಇದು ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟ ವಿಚಾರ ಎಂದರು.

Leave a Reply

Your email address will not be published. Required fields are marked *

error: Content is protected !!