ಕೇಂದ್ರದ ಇಪ್ಪತ್ತು ಲಕ್ಷ ಕೋಟಿ ಪ್ಯಾಕೇಜ್ ಎಲ್ಲಿ ಹೋಗಿದೆ: ಬಿ.ಕೆ. ಹರಿಪ್ರಸಾದ್ ಪ್ರಶ್ನೆ
ಉಡುಪಿ (ಉಡುಪಿ ಟೈಮ್ಸ್ ವರದಿ): ಈ ಮೊದಲು ಬಿಜೆಪಿ ಪಕ್ಷ ಅಗತ್ಯ ವಸ್ತುಗಳ ಬೆಲೆ ಏರಿಕೆಯಾದಾಗ ಕಾಂಗ್ರೆಸ್ ನ್ನು ದೂರುತ್ತಿದ್ದರು, ನಂತರ ಅವರು ಆಡಳಿತಕ್ಕೆ ಬಂದಾಗ ನೆಹರು ಆಡಳಿತದ ಬಗ್ಗೆ ದೂರಿದರು, ಈಗ ದೇವರ ಮೇಲೆ ದೂರು ಇಡುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯರಾದ ಬಿ. ಕೆ. ಹರಿಪ್ರಸಾದ್ ಲೇವಡಿ ಮಾಡಿದರು.
ಉಡುಪಿ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಚುನಾವಣೆ ಸಮಯದಲ್ಲಿ ಸಂಘ ಪರಿವಾರದ ಪ್ರೇರಿತ ಭಾರತೀಯ ಜನತಾ ಪಾರ್ಟಿ ಮತದಾರ ಪಟ್ಟಿಯಲ್ಲಿ ಮತದಾರರ ಕ್ಷೇತ್ರವನ್ನ ಬದಲಿಸಿ ನೀಡಿದೆ. ಇದಕ್ಕೆ ಜಿಲ್ಲಾಡಳಿತ ಸಹಾಯ ಮಾಡಿದೆ, ಇದರಿಂದ ಮತದಾರರಿಗೆ ಮೋಸ ಆಗಿದೆ ಎಂದು ಹರಿಪ್ರಸಾದ್ ಗಂಭೀರ ಆರೋಪ ಮಾಡಿದರು. ಕೇಂದ್ರದ ಇಪ್ಪತ್ತು ಲಕ್ಷ ಕೋಟಿ ಪ್ಯಾಕೇಜ್ ಎಲ್ಲಿ ಹೋಗಿದೆ ಗೊತ್ತಿಲ್ಲ, ಕೋವಿಡ್ ನಿಂದ ರೈತರು ಮೀನುಗಾರರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ, ಸರಕಾರ ಇನ್ನೂ ಕೂಡ ಪರಿಹಾರ ವಿತರಿಸಿಲ್ಲ ಎಂದರು.
ರೈತರ ಹೊಸ ಕಾಯ್ದೆಯಿಂದ ರೈತರಿಗೆ ತೊಂದರೆ ಆಗಿದೆ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ನೇತ್ರತ್ವದಲ್ಲಿ ಈ ಕಾಯ್ದೆಯ ವಿರುದ್ಧ ರೈತರಿಂದ ಸಹಿ ಸಂಗ್ರಹಿಸುವ ಅಭಿಯಾನ ನಡೆಯುತ್ತದೆ ಎಂದು ಅವರು ತಿಳಿಸಿದರು.ರೈತರ ಹಿತ ಕಾಪಾಡುವುದರಲ್ಲಿ ಕೇಂದ್ರ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದರು.
ಆರ್ ಆರ್ ನಗರದ ಚುನಾವಣೆಯ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಹರಿಪ್ರಸಾದ್, ಮುಖ್ಯಮಂತ್ರಿ ಯಡಿಯೂರಪ್ಪ ರವರು ಒಂದು ರೀತಿ ಶರಶಯನದಲ್ಲಿ ಮಲಗಿದ್ದ ಭೀಷ್ಮನಂತೆ, ಚುನಾವಣೆ ನಂತರ ಅವರ ಅಧಿಕಾರ ಮುಗಿಯುತ್ತದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಜಿಲಾಧ್ಯಕ್ಷ ಅಶೋಕ್ ಕೊಡವೂರು, ಕಾಪು ಮಾಜಿ ಶಾಸಕ ವಿನಯ್ ಕುಮಾರ್ ಸೊರಕೆ, ಬೈಂದೂರು ಮಾಜಿ ಶಾಸಕ ಗೋಪಾಲ್ ಪೂಜಾರಿ, ಎಂ. ಎ ಗಫೂರ್ ಉಪಸ್ಥಿತರಿದ್ದರು.