ನದಿಗೆ ಬಿದ್ದ ಕಾರು: ಯುವತಿ ಸಹಿತ ಮೂವರ ದುರ್ಮರಣ, ಇಬ್ಬರಿಗಾಗಿ ಶೋಧ

ಶಿರಸಿ: ಕಾರಿನ ನಿಯಂತ್ರಣ ತಪ್ಪಿ ಉಂಚಳ್ಳಿ ಜಲತಾಪ ವೀಕ್ಷಣೆಗೆ ಹೋಗಿ ವಾಪಾಸ್ ಬರುತ್ತಿದ್ದಾಗ ಕಾರು ನದಿಗೆ ಬಿದ್ದ ಘಟನೆ ಉತ್ತರ ಕನ್ನಡದ ಸಿದ್ದಾಪುರ ತಾಲೂಕಿನಲ್ಲಿ ನಡೆದಿದೆ. ಕಾರಿನಲ್ಲಿ ಒಟ್ಟೂ ಐವರಿದ್ದ ಶಂಕೆಯಿದ್ದು ಇಬ್ಬರು ಯುವಕರು ಹಾಗೂ ಓರ್ವ ಯುವತಿ ಸೇರಿ ಒಟ್ಟೂ ಮೂವರ ಶವ ದೊರೆತಿದ್ದು ಇನ್ನಿಬ್ಬರಿಗಾಗಿ ಶೋಧಕಾರ್ಯ ಮುಂದುವರಿದಿದೆ.

ಕಾರಿನ ನಿಯಂತ್ರಣ ತಪ್ಪಿ ಕಾರಿನ ಸಮೇತ ತುಂಬಿ ಹರಿಯುತ್ತಿರುವ ಹೊಳೆಗೆ ಬಿದ್ದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಬುಧವಾರ ಸಂಜೆಯ ವೇಳೆಗೆ ದುರ್ಘಟನೆ ನಡೆದಿದ್ದು, ಗುರವಾರ ಮಧ್ಯಾಹ್ನ ಬೆಳಕಿಗೆ ಬಂದಿದೆ. ಕಾರಿಗೆ ಧಾರವಾಡದ ನೊಂದಣಿ ಸಂಖ್ಯೆಯಿದ್ದು, ಇವರು ಹುಬ್ಬಳ್ಳಿಯವರು ಎನ್ನಲಾಗಿದೆ.

ಮೂರು ಶವಗಳು ದೊರೆತಿದ್ದು ಮೂವರೂ 25 ವರ್ಷದ ಒಳಗಿನವರಾಗಿದ್ದು, ಸಿದ್ದಾಪುರದ ಉಂಚಳ್ಳಿ ಜಲತಾಪಕ್ಕೆ ಪ್ರವಾಸಕ್ಕೆ ತೆರಳಿದ್ದರು ಎನ್ನಲಾಗಿದೆ.‌ಪ್ರವಾಸದಿಂದ ಹಿಂತಿರುಗಿ ಬರುವಾಗ ಕೋಡ್ನಗದ್ದೆ ಸಮೀಪದ ತಿರುವಿನಲ್ಲಿ ಆಯತಪ್ಪಿ ಕೋಡ್ನಗದ್ದೆ ಹೊಳೆಗೆ ಕಾರು ಬಿದ್ದಿದ್ದು, ನೀರಿನ ರಭಸಕ್ಕೆ 100 ಮೀ.ನಷ್ಟು ದೂರ ಕಾರು ತೆಲಿಕೊಂಡು ಹೋಗಿದೆ. ಗುರವಾರ ಸ್ಥಳೀಯರು ಹೊಳೆಯಲ್ಲಿ ಕಾರನ್ನು ಗಮನಿಸಿದ್ದು, ಕಾರಿನಿಂದ ಮೂವರ ಮೃತದೇಹವನ್ನು ಹೊರತೆಗೆಯಲಾಗಿದೆ. ಸ್ಥಳಕ್ಕೆ ಸಿದ್ದಾಪುರ ಪೊಲೀಸರು ಆಗಮಿಸಿದ್ದು, ಹೆಚ್ಚಿನ ವಿವರ ತಿಳಿದು ಬರಬೇಕಿದೆ.

Leave a Reply

Your email address will not be published. Required fields are marked *

error: Content is protected !!