ಬಜೆಟ್​ ಅಧಿವೇಶನಕ್ಕೆ ಕೇಸರಿ ಶಾಲು ಧರಿಸಿಕೊಂಡು ಬಂದ ಬಿಜೆಪಿ ಶಾಸಕರು! ಜೈಭೀಮ್​ ಎಂದ ಕಾಂಗ್ರೆಸ್​ ನಾಯಕರು!

ಬೆಂಗಳೂರು: ರಾಜ್ಯ ವಿಧಾನಮಂಡಲ​ ಅಧಿವೇಶನ ಸೋಮವಾರ ಆರಂಭವಾಗಿದ್ದು, ರಾಜ್ಯಪಾಲ ಥಾವರ್​ ಚಂದ್​ ಗೆಹ್ಲೋಟ್​ ಅವರು ಭಾಷಣ ಮುಗಿಸುತ್ತಿದ್ದಂತೆ ಬಿಜೆಪಿ ಶಾಸಕರು ಜೈ ಶ್ರೀ ರಾಮ್​ ಎಂದು ಕೂಗಿದ್ದು, ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್​ ಶಾಸಕರು ಜೈ ಭೀಮ್​ ಎಂದು ಘೋಷಣೆ ಕೂಗಿದ ಘಟನೆ ನಡೆದಿದೆ.

ಅದಲ್ಲದೆ ಇಂದು ಬಿಜೆಪಿ ಶಾಸಕರು ಕೇಸರಿ ಶಾಲು ಧರಿಸಿ ಕಲಾಪದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಸದನ ಆರಂಭಕ್ಕೂ ಮುನ್ನವೇ ಸದನದ ಒಳಗೆ ಕೇಸರಿ ಶಾಲು ಹಾಕಿಕೊಂಡು ಬಂದ ವಿಧಾನಸಭೆ ಸದಸ್ಯರು ಹಾಗೂ ವಿಧಾನ ಪರಿಷತ್ ಸದಸ್ಯರು ಜೈ ಶ್ರೀ ರಾಮ್​ ಘೋಷಣೆ ಕೂಗಿದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಬಿಜೆಪಿಯವರು ಕೇಸರಿ ಶಾಲಾದರೂ ಹಾಕಿಕೊಳ್ಳಲಿ ಕಪ್ಪಾದರೂ ಹಾಕಿಕೊಳ್ಳಲಿ. ಕೇಸರಿ ಇವರೊಬ್ಬರ ಆಸ್ತಿಯೇ? ಎಂದು ಪ್ರಶ್ನಿಸಿದರು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಜಂಟಿ ಅಧಿವೇಶನವನ್ನು ಉದ್ದೇಶಿ ಮಾತನಾಡುತ್ತಾ, ಇಡೀ ದೇಶಕ್ಕೆ ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳು ಮಾದರಿಯಾಗಿವೆ. ಸರ್ಕಾರವು ನಡೆ ನುಡಿಗಳಗಳನ್ನು ಒಂದಾಗಿಸಿಕೊಂಡು ಕೆಲಸ ಮಾಡುತ್ತಿದೆ ಎಂದೆಲ್ಲಾ ಹಾಡಿ ಹೊಗಳಿದರು. ಆದರೆ, ರಾಜ್ಯಪಾಲರಿಂದ ಸರ್ಕಾರವು ಸುಳ್ಳು ಭಾಷಣ ಮಾಡಿಸಿದೆ ಎಂದು ವಿಪಕ್ಷ ಬಿಜೆಪಿ ಟೀಕಿಸುತ್ತಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿಕೆಶಿ, ನಾವು ರಾಜ್ಯದ ಹಿತಕ್ಕೆ ಏನು ಬೇಕೋ ಅದನ್ನು ಮಾಡುತ್ತೇವೆ ಎಂದರು. ಅಲ್ಲದೆ, ನಮ್ಮ ಗ್ಯಾರಂಟಿಗಳನ್ನೇ ಇವರು ಕಾಪಿ ಮಾಡಿದ್ದಾರೆ. ನಮ್ಮ ಗ್ಯಾರಂಟಿ ಕಾಪಿ ಮಾಡಿಯೇ ಮೋದಿ ಗ್ಯಾರಂಟಿ ಅಂತ ಮಾಡುತ್ತಿಲ್ಲವೇ? ಕರ್ನಾಟಕ ಮಾಡೆಲ್ ಅನ್ನೇ ನಾವು ಜಾರಿ ಮಾಡುತ್ತೇವೆ ಎಂದರು.ಕರ್ನಾಟಕ ಬಜೆಟ್​ ಅಧಿವೇಶನ 2024 ಇಂದಿನಿಂದ ಆರಂಭವಾಗಿದೆ. 10 ದಿನಗಳ ಕಾಲ ನಡೆಯುವ ವಿಧಾನಮಂಡಲ ಅಧಿವೇಶನದಲ್ಲಿ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫೆ.16 ರಂದು ಬಜೆಟ್​ ಮಂಡನೆ ಮಾಡಲಿದ್ದಾರೆ. ಇಂದು ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭಾಷಣ ಮಾಡಿದರು.

Leave a Reply

Your email address will not be published. Required fields are marked *

error: Content is protected !!