ಕಾಪು: ಫೆ.20 ರಂದು ಆನಂದ ಲಹರಿ ಮಹಾ ಸತ್ಸಂಗ
ಕಾಪು, ಫೆ. 11: ವಿಶ್ವ ಆರೋಗ್ಯ ಸಂಸ್ಥೆಯಿಂದ ಮಾನ್ಯತೆ ಪಡೆದಿರುವ ಆರ್ಟ್ ಆಫ್ ಲಿವಿಂಗ್ನ ಸಂಸ್ಥಾಪಕ ಶ್ರೀ ರವಿಶಂಕರ್ ಗುರೂಜಿ ಅವರಿಂದ ಕಾಪು ಸಮುದ್ರ ಕಿನಾರೆಯ ಮಂಥನ್ ರೆಸಾರ್ಟ್ ಬಳಿ ಆನಂದ ಲಹರಿ ಮಹಾಸತ್ಸಂಗ ಫೆ. 20ರಂದು ಸಂಜೆ 4.30ರಿಂದ 8ರ ವರೆಗೆ ನಡೆಯಲಿದೆ ಎಂದು ಆಯೋಜಕ, ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಮನುಷ್ಯನ ಸಂಪೂರ್ಣ ವ್ಯಕ್ತಿತ್ವವನ್ನು ವಿಕಸನಗೊಳಿಸುವಲ್ಲಿ ಸಫಲವಾಗಿರುವ ಜೀವನ ಕಲೆ ಹಾಗೂ ಸುದರ್ಶನ ಕ್ರಿಯಾಯೋಗದ ಸ್ಥಾಪಕ ರವಿಶಂಕರ್ ಗುರೂಜಿ ಉಡುಪಿ ಜಿಲ್ಲೆಯಲ್ಲಿ ಹಮ್ಮಿಕೊಂಡಿರುವ ಪ್ರಥಮ ಮಹಾಸತ್ಸಂಗ ಇದಾಗಿದ್ದು ಜ್ಞಾನ, ಧ್ಯಾನ ಹಾಗೂ ಗಾನದ ಸವಿಯನ್ನು ನೀಡಲಿದ್ದಾರೆ. 15 ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದ್ದು
ಆಗಮಿಸಿದವರಿಗೆ ಪ್ರಸಾದ ನೀಡಲಾಗುವುದು ಎಂದರು. ಆರ್ಟ್ ಆಫ್ ಲಿವಿಂಗ್ನ ಶಿಕ್ಷಕ ಕೆ.ವಿ. ಶೆಣೈ ಮಾತನಾಡಿ, ಆರ್ಟ್ ಆಫ್ ಲೀವಿಂಗ್ ಸಂಸ್ಥೆಯ ಮೂಲಕ ಉಡುಪಿ ಜಿಲ್ಲೆಯಲ್ಲಿ 23 ಶಿಕ್ಷಕರು ಹಾಗೂ ದ.ಕ.ದಲ್ಲಿ 65 ಶಿಕ್ಷಕರು ಸುದರ್ಶನ ಕ್ರಿಯಾಯೋಗ ನಡೆಸುತ್ತಿದ್ದಾರೆ. ಸಮಾಜದ ಸ್ವಾಸ್ಥವನ್ನು ಕಾಪಾಡುವುದರ ಜತೆಗೆ ಆರೋಗ್ಯ, ಶಿಕ್ಷಣ ಮತ್ತು ವೈದ್ಯಕೀಯ ಸೇವೆಗಳನ್ನು ಒದಗಿಸುವುದು ಮುಖ್ಯ ಧೈಯ ಎಂದು ಹೇಳಿದರು.
ಆರ್ಟ್ ಆಫ್ ಲಿವಿಂಗ್ ಆಡಳಿತ ಮಂಡಳಿ ಸದಸ್ಯ ದಿನೇಶ್ ಕಾಮತ್, ರಾಜ್ಯ ಸಂಯೋಜಕ ವಸಂತ್ ಕುಮಾರ್, ಶಿಕ್ಷಕರಾದ. రాధా ಶೆಣೈ, ಪ್ರಶಾಂತ್ ಪೈ, ವಿಮಲಾಕ್ಷಿ ದಿವಾಕರ್, ಶೈಲಜಾ, ಕಾರ್ಯಕ್ರಮ ಸಂಯೋಜಕರಾದ ಹರೀಶ್ ಪಿ. ಶೆಟ್ಟಿ ಗುರ್ಮೆ, ಸತೀಶ್ ಪಿ. ಶೆಟ್ಟಿ ಗುರ್ಮೆ ಉಪಸ್ಥಿತರಿದ್ದರು.