ಟ್ರೇಡಿಂಗ್ ಶೇರ್ ಖರೀದಿ ಹೆಸರಲ್ಲಿ ವ್ಯಕ್ತಿಗೆ 6 ಲಕ್ಷ ರೂ. ವಂಚನೆ
ಬ್ರಹ್ಮಾವರ ಫೆ.9(ಉಡುಪಿ ಟೈಮ್ಸ್ ವರದಿ): ಟ್ರೇಡಿಂಗ್ ಹಾಗೂ ಶೇರ್ ಖರೀದಿ ಮಾಡುವಂತೆ ತಿಳಿಸಿ ವ್ಯಕ್ತಿಯೊಬ್ಬರಿಂದ 6 ಲಕ್ಷ ರೂ. ಹಣ ಖಾತೆಗೆ ವರ್ಗಾಯಿಸಿಕೊಂಡು ವಂಚಿಸಿರುವ ಬಗ್ಗೆ ಬ್ರಹ್ಮಾವರ ಪೊಲೀಸರು ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ಬಗ್ಗೆ ವಂಚನೆಗೆ ಒಳಗಾದ ರಾಘವೇಂದ್ರ ಎಂಬವರು ಪೊಲೀಸರಿಗೆ ದೂರು ನೀಡಿದ್ದು, 2023 ರ ಆಗಸ್ಟ್ ನಲ್ಲಿ Artisan Capital Share Trading Company ಎಂಬ ಸಂಸ್ಥೆಯ ಹೆಸರಿನಲ್ಲಿ ಪರಿಚಯವಾದ ಆರೋಪಿಗಳಾದ ಆದಿತ್ಯ ಅಗರ್ ವಾಲ್ ಮತ್ತು ನಮ್ರತಾ ಪ್ರಸಾದಿನಿ ಎಂಬವರು ವಾಟ್ಸ್ ಆ್ಯಪ್ ನಲ್ಲಿ ಮೆಸೇಜ್ ಮಾಡಿ “Artisan Capital Financial Titan 806” ಎಂಬ ವಾಟ್ಸಪ್ ಗ್ರೂಪ್ ನ ಮೂಲಕ ಶೇರ್ ಟ್ರೇಡಿಂಗ್ ಮತ್ತು ಶೇರ್ ಖರೀದಿ ಮಾಡುವಂತೆ ತರಬೇತಿ ನೀಡಿ ನಂಬಿಸಿದ್ದರು. ಆ ನಂತರ ಒತ್ತಾಯ ಪೂರ್ವಕವಾಗಿ 2023 ರ ಅ.11 ರಿಂದ ಅ.18 ರವರೆಗೆ ಹಂತ ಹಂತವಾಗಿ ಆರೋಪಿಗಳ ಖಾತೆಗೆ ಒಟ್ಟು 6,00,000 ರೂ. ಹಣವನ್ನು ವರ್ಗಾಯಿಸಿಕೊಂಡು ವಂಚಿಸಿದ್ದಾರೆ ಎಂಬುದಾಗಿ ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.