ರಾಜ್ಯದಲ್ಲಿ ಹುಕ್ಕಾ ಬಾರ್ ನಿಷೇಧಿಸಿ ಆದೇಶ ಹೊರಡಿಸಿದ ಆರೋಗ್ಯ ಇಲಾಖೆ!
ಬೆಂಗಳೂರು: ಯುವ ಜನತೆಯನ್ನು ಹಾದಿ ತಪ್ಪಿಸುತ್ತದೆ. ಧೂಮಪಾನಕ್ಕೆ ಪರೋಕ್ಷವಾಗಿ ಪ್ರಚೋದಿಸುತ್ತದೆ ಎಂಬ ಕಾರಣಕ್ಕೆ ರಾಜ್ಯದಲ್ಲಿ ಹುಕ್ಕಾ ಬಾರ್ ನಿಷೇಧಿಸಿ ರಾಜ್ಯ ಆರೋಗ್ಯ ಮತ್ತು ಕುಟಂಬ ಕಲ್ಯಾಣ ಇಲಾಖೆ ಆದೇಶ ಹೊರಡಿಸಿದೆ.
ಹುಕ್ಕಾ, ತಂಬಾಕು ಅಥವಾ ನಿಕೋಟಿನ್ ಒಳಗೊಂಡ ನಿಕೋಟಿನ್ ರಹಿತ ತಂಬಾಕು ರಹಿತ, ಸ್ವಾದ ಭರಿತ ಮೇಲಾಸಿಸ್, ಶಿಶಾ ಹಾಗೂ ಇದೇ ಮಾದರಿಯ ಇನಿತ್ತರ ಹೆಸರುಗಳಿಂದ ಕರೆಯಲ್ಪಡುವ ಹುಕ್ಕಾ ಉತ್ಪನ್ನ ಮಾರಾಟ, ಸೇವನೆ, ಜಾಹೀರಾತು, ಪ್ರಚೋದನೆ, ಸಂಗ್ರಹಣೆಯನ್ನು ನಿಷೇಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಕಳೆದ ಐದಾರು ವರ್ಷಗಳಿಂದ ಹುಕ್ಕಾಬಾರ್ಗಳನ್ನು ನಿಷೇಧಿಸುವಂತೆ ಆಗ್ರಹಿಸಲಾಗುತ್ತಿತ್ತು. ಈ ಸಂಬಂಧ ಅರ್ಜಿ ಸಮಿತಿಯ ಶಿಫಾರಸಿನಂತೆ ತಕ್ಷಣದಿಂದಲೇ ನಿಷೇಧಿಸಿ ಆರೋಗ್ಯ ಇಲಾಖೆ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ. ಅಧಿಕೃತವಾಗಿ ಕರ್ನಾಟಕದಲ್ಲಿ ಹುಕ್ಕಾ ಉತ್ಪನ್ನ ಹಾಗೂ ಮಾರಾಟ ನಿಷೇಧಿಸಲಾಗಿದೆ. ಇದನ್ನು ಉಲ್ಲಂಘಿಸಿದರೆ COTPA 2003, 2015 ಕಾಯ್ದೆ ಅನ್ವಯ ಕ್ರಮಕೈಗೊಳ್ಳುವುದಾಗಿ ಆದೇಶದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
ಹುಕ್ಕಾ ಬಾರ್ಗಳು ಯುವ ಜನತೆ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿವೆ. ಯುವಕರು ತಂಬಾಕು ಬಳಸುವ ಹುಕ್ಕಾಗೆ ಬಲಿಯಾಗುತ್ತಿದ್ದಾರೆ. ಹುಕ್ಕಾ ಬಾರ್ ನಲ್ಲಿ ಪೈಪ್ ಸಲಕರಣೆ ಮೂಲಕ ಬಾಯಿಂದ ಸೇವನೆ ಮಾಡುವ ಉತ್ಪನ್ನವಾಗಿದೆ. ಬಾಯಿಂದ ಸೇವನೆ ಮಾಡುವುದರಿಂದ ಸಾಂಕ್ರಾಮಿಕ ಕಾಯಿಲೆಗಳಾದ ಕ್ಷಯರೋಗ, ಹೆಪಟೈಟಿಸ್ ಮತ್ತಿತರ ಕಾಯಿಲೆಗಳು ಹರಡುವ ಆತಂಕವಿರುವುದರಿಂದ ಹುಕ್ಕಾ ಬಾರ್ ಗಳನ್ನು ನಿಷೇಧಿಸಲಾಗಿದೆ.