ಸಂಸದರೇ ನಿಮಗೆ ಬಾಯಿಯಿಲ್ಲವೇ, ಮಾತನಾಡಿ, ನಮ್ಮ ಪಾಲಿನ ಹಣ ಕೇಳಿ: ಸಿಎಂ ಸಿದ್ದರಾಮಯ್ಯ
ಹೊಸದಿಲ್ಲಿ: ಬರಗಾಲವನ್ನು ಕರ್ನಾಟಕ ಸಮರ್ಥವಾಗಿ ನಿಭಾಯಿಸಿದೆ. 31 ಲಕ್ಷ ರೈತರಿಗೆ ತಲಾ 2 ಸಾವಿರ ರೂ ನೀಡಿದ್ದೇವೆ. ಕೇಂದ್ರದಿಂದ ಪರಿಹಾರ ಹಣ ಬಂದ ನಂತರವೂ ನಾವು ಮತ್ತೆ ಪರಿಹಾರ ನೀಡುತ್ತೇವೆ. ಕೇಂದ್ರದ ಪಾಲಿನ ನಮ್ಮ ಪರಿಹಾರ ಕೊಡಿ. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿಯವರೇ ನಮ್ಮ ಪಾಲಿನ ಹಣ ಕೇಳಿ. ಸಂಸದರೇ ಮಾತನಾಡಿ, ನಿಮಗೆ ಬಾಯಿಯಿಲ್ಲವೇ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು.
ದಿಲ್ಲಿಯ ಜಂತರ್ ಮಂತರ್ ನಲ್ಲಿ ಕರ್ನಾಟಕ ಸರಕಾರದಿಂದ ಬುಧವಾರ ಆಯೋಜಿಸಿರುವ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಇದು ಕಾಂಗ್ರೆಸ್ ಪಕ್ಷದಿಂದ ಬಿಜೆಪಿ ವಿರುದ್ಧದ ಚಳವಳಿ ಅಲ್ಲ. ಅದೇ ಕಾರಣಕ್ಕೆ ನಾನು ಬಿಜೆಪಿ ಜೆಡಿಎಸ್ ಸಂಸದರಿಗೆ ಪ್ರತಿಭಟನೆಯಲ್ಲಿ ಭಾಗವಹಿಸಲು ಮನವಿ ಮಾಡಿದ್ದೆ. ಇದು ಕರ್ನಾಟಕ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಕೇಂದ್ರದ ಗಮನಕ್ಕೆ ತರುವ ಪ್ರತಿಭಟನೆ ಎಂದುaà
5 ವರ್ಷಕ್ಕೊಮ್ಮೆ ಹಣಕಾಸು ಆಯೋಗದ ರಚನೆಯಾಗುತ್ತದೆ. ತೆರಿಗೆ ಹಂಚಿಕೆ ವಿಚಾರದಲ್ಲಿ ಈ ಆಯೋಗಗಳು ವರದಿ ನೀಡುತ್ತವೆ. ಈಗ 16 ನೇ ಹಣಕಾಸು ಆಯೋಗದ ರಚನೆಯಾಗಿದೆ. ಹಣಕಾಸು ಆಯೋಗವು ಸ್ವಾಯತ್ತ ಆಯೋಗ. ಅದರ ವರದಿಯಲ್ಲಿ ನಾವು ಹಸ್ತಕ್ಷೇಪ ಮಾಡುವುದಿಲ್ಲ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳುತ್ತಾರೆ. ರಾಜ್ಯ ಸಭೆಯಲ್ಲಿ ಕರ್ನಾಟಕವನ್ನು ಅವರು ಪ್ರತಿ ನಿಧಿಸುತ್ತಾರೆ. ಆದರೂ ನಮ್ಮ ತೆರಿಗೆ ಹಣದಲ್ಲಿ ಏಕೆ ಕಡಿತ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಬಡ ರಾಜ್ಯಗಳಿಗೆ ತೆರಿಗೆ ಹಣ ಹೆಚ್ಚು ಕೊಟ್ಟರೆ ನಮ್ಮ ಅಭ್ಯಂತರವಿಲ್ಲ. ಆದರೆ ಕೋಳಿ ಚಿನ್ನದ ಮೊಟ್ಟೆ ಕೊಡುತ್ತದೆ ಎಂದು ಕೋಳಿಯನ್ನೇ ಕೊಯ್ಯಿಬೇಡಿ. ತೆರಿಗೆ ಸಂಗ್ರಹದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಆದರೆ ಉತ್ತರ ಪ್ರದೇಶಕ್ಕೆ ಹೆಚ್ಚು ಅನುದಾನ ನೀಡಲಾಗುತ್ತದೆ. ಕರ್ನಾಟಕಕ್ಕೆ ಕಡಿಮೆ ತೆರಿಗೆ ಪಾಲು ನೀಡಲಾಗುತ್ತಿದೆ ಎಂದರು.
100 ರೂ ಕೊಟ್ಟರೆ ಕೇವಲ ನಮ್ಮ ಪಾಲಿಗೆ 12-13 ರೂ ಕೇಂದ್ರದಿಂದ ವಾಪಸ್ ಬರುತ್ತದೆ. ಜಿಎಸ್ ಟಿ ಬಂದಾಗ ನಷ್ಟ ಭರಿಸುವ ಆಶ್ವಾಸನೆ ನೀಡಿದರು. ಆದರೆ 2022 ಕ್ಕೆ ಅದನ್ನು ನಿಲ್ಲಿಸಿದರು.59ಸಾವಿರ ಕೋಟಿ ನಷ್ಟವಾಯಿತು. ಇದು ಅನ್ಯಾಯವಲ್ಲವೇ? ಎಂದು ಪ್ರಶ್ನಿಸಿದರು.
ಬಿಜೆಪಿ ಸಂಸದರು ನರೇಂದ್ರ ಮೋದಿ ಮುಂದೆ ʼಕೋಲೆ ಬಸವʼಗಳ ರೀತಿ ತಲೆ ಅಲ್ಲಾಡಿಸುತ್ತಾರೆ. ಅದು ಬಿಟ್ಟು ಏನನ್ನೂ ಪ್ರಶ್ನಿಸುವುದಿಲ್ಲ. ನಮ್ಮ ತೆರಿಗೆ ಹಣ ಕೇಳಿ ಎಂದು ಮನವಿ ಮಾಡಿದರೂ ಯಡಿಯೂರಪ್ಪನವ ರಾಗಲೀ ಸಂಸದರಾಗಲೀ ಮಾತನಾಡುವುದಿಲ್ಲ ಎಂದರು.