ನವದೆಹಲಿ: ಕಾಂಗ್ರೆಸ್’ಗೆ ಸೆಡ್ಡು, ರಾಜ್ಯ ಬಿಜೆಪಿ ಸಂಸದರಿಂದ ಧರಣಿ- ವ್ಯಾಪಕ ಆಕ್ರೋಶ!
ನವದೆಹಲಿ: ಅನುದಾನ ಹಂಚಿಕೆಯಲ್ಲಿ ಕೇಂದ್ರ ಸರ್ಕಾರದಿಂದ ನಿರಂತರವಾಗಿ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಆರೋಪಿಸಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ರಾಷ್ಟ್ರ ರಾಜಧಾನಿಯ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಸುತ್ತಿರುವಾಗ ಅತ್ತ ಸಂಸತ್ ಭವನದ ಗಾಂಧಿ ಪ್ರತಿಮೆ ಎದುರು ರಾಜ್ಯದ ಬಿಜೆಪಿ ಸಂಸದರು ಧರಣಿ ನಡೆಸಿದರು. ಪರಿಶಿಷ್ಟ ಸಮುದಾಯದ ಅನುದಾನ ಮತ್ತಿತರ ಹಣ ದುರ್ಬಳಕೆ ಕುರಿತು ಭಿತ್ತಿಪತ್ರ ಹಿಡಿದು ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮೋದಿ ಸರ್ಕಾರ ಒಂದು ದಶಕದಲ್ಲಿ ಕರ್ನಾಟಕಕ್ಕೆ ಅನುದಾನವನ್ನು ಶೇ. 240ರಷ್ಟು ಹೆಚ್ಚಿಸಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ನೀಡಲಾಗಿದ್ದ ರೂ. 81, 000 ಕೋಟಿಯಿಂದ ಎನ್ ಡಿಎ ಅವಧಿಯಲ್ಲಿ ರೂ. 2.82 ಲಕ್ಷ ಕೋಟಿಗೆ ಏರಿಕೆಯಾಗಿದೆ. ಕಾಂಗ್ರೆಸ್“ದೆಹಲಿ ಚಲೋ” ರಾಜ್ಯದ ಕಲ್ಯಾಣಕ್ಕಿಂತ ಸ್ವಹಿತಾಸಕ್ತಿಗೆ ಆದ್ಯತೆ ನೀಡುತ್ತದೆ ಎಂದು ಸಂಸದರು ಕಿಡಿಕಾರಿದರು.
ಇದೇ ವೇಳೆ ಮಾತನಾಡಿದ ಸಂಸದ ಲೇಹರ್ ಸಿಂಗ್, ‘ಕಾಂಗ್ರೆಸ್ ಭ್ರಷ್ಟಾಚಾರದಲ್ಲಿ ತೊಡಗಿದ್ದು, ಸರಿಯಾಗಿ ಆಡಳಿತ ನಡೆಸುತ್ತಿಲ್ಲ,ಆಂತರಿಕ ಕಲಹದಿಂದ ಇಲ್ಲಿಗೆ ಬಂದಿದ್ದಾರೆ, ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಲು ಬಯಸಿದ್ದರು . ಆದರೆ, ಅದು ಸಾಧ್ಯವಾಗದೆ ಆಂತರಿಕ ಸಂಘರ್ಷದಿಂದ ಸೋನಿಯಾ ಮತ್ತು ರಾಹುಲ್ ವಿರುದ್ಧವಾಗಿ ಅವರು ಇಲ್ಲಿಗೆ ಬಂದಿದ್ದಾರೆ ಎಂದು ಹೇಳಿದರು.