ಅಂಬಲಪಾಡಿ ಯಕ್ಷಗಾನ ಮಂಡಳಿಯ 66ನೇ ವಾರ್ಷಿಕೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ
ಉಡುಪಿ: ಶ್ರೀಲಕ್ಷ್ಮೀ ಜನಾರ್ದನ ಯಕ್ಷಗಾನ ಕಲಾಮಂಡಳಿ ಅಂಬಲಪಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ಸಹಯೋಗದೊಂದಿಗೆ ಅಂಬಲಪಾಡಿ ಕಂಬ್ಳಕಟ್ಟ ಶ್ರೀಜನಾರ್ದನ ಮಂಟಪದಲ್ಲಿ ಶನಿವಾರ 66ನೇ ವಾರ್ಷಿಕೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಜರಗಿತು.
ಉಡುಪಿಯ ಶಾಸಕರಾದ ಯಶಪಾಲ್ ಸುವರ್ಣ ಪ್ರಶಸ್ತಿ ಪ್ರದಾನ ಮಾಡಿ, 66 ವರ್ಷಗಳಿಂದ ನಮ್ಮ ಕರಾವಳಿ ಕರ್ನಾಟಕದ ಅಪೂರ್ವ ಕಲೆಯಕ್ಷಗಾನವನ್ನು ಉಳಿಸಿ ಬೆಳೆಸುವಲ್ಲಿ ಅಂಬಲಪಾಡಿ ಸಂಘದ ಕೊಡುಗೆ ಬಹಳ ಮಹತ್ತ್ವದ, ಹಿರಿಯ ಸಾಧಕರನ್ನು ವೇದಿಕೆಯಲ್ಲಿ ಅಭಿನಂದಿಸಲು ಸಿಕ್ಕಿದ ಅವಕಾಶ ನನ್ನ ಸೌಭಾಗ್ಯ, ಉಳಿದ ಸಂಘಟನೆಗಳಿಗೆ ಅಂಬಲಪಾಡಿ ಮಂಡಳಿಯ ಆದರ್ಶವಾಗಿದೆ ಎಂಬುದಾಗಿ ನುಡಿದರು. ನಿ.ಬೀ ಅಣ್ಣಾಜಿ ಬಲ್ಲಾಳ ಸ್ಮರಣಾರ್ಥ ಶ್ರೀ ರಾಜರಾಜೇಶ್ವರೀ ದೇವರ ಅನುಗ್ರಹದೊಂದಿಗೆ ಡಾ. ವಿಜಯ ಬಲ್ಲಾಳ ಪ್ರಾಯೋಜಕತ್ವದ, ಬೆಳ್ಳಿಯ ಫಲಕದೊಂದಿಗೆ ನಿಡಂಬೂರುಶ್ರೀ ಪ್ರಶಸ್ತಿಯನ್ನು ನಿವೃತ್ತ ಮುಖ್ಯೋಪಾಧ್ಯಾಯರು, ನಿಡಂಬೂರಿನ ಗಣ್ಯ ಸಾಧಕರೂ ಆದಂತಹ ಜಯಕರ ಶೆಟ್ಟಿಯವರಿಗೂ, ಹತ್ತು ಸಾವಿರ ರೂಪಾಯಿ ನಗದನ್ನೊಳಗೊಂಡ ನಿಡಂಬೂರು ಬೀಡು ಬಲ್ಲಾಳ ಪ್ರಶಸ್ತಿಯನ್ನು ಮೂರು ದಶಕಗಳಿಂದ ಬೆಂಗಳೂರಿನಲ್ಲಿ ಯಕ್ಷಗಾನದ ಪ್ರವರ್ಧಮಾನಕ್ಕಾಗಿ ಸೇವೆ ಸಲ್ಲಿಸುತ್ತಿರುವ ಶ್ರೀ ಕರ್ನಾಟಕ ಕಲಾದರ್ಶಿನಿ ತಂಡಕ್ಕೆ ನೀಡಿ ಗೌರವಿಸಲಾಯಿತು.
ನಿಡಂಬೂರು ಬೀಡು ಬಲ್ಲಾಳ ಪ್ರಶಸ್ತಿಯನ್ನು ಕಲಾದರ್ಶಿನಿ ಸಂಸ್ಥೆಯ ಅಧ್ಯಕ್ಷರಾದ ಶ್ರೀನಿವಾಸ ಸಾಸ್ತಾನ ಅವರು ಸ್ವೀಕರಿಸಿದರು. ತಲಾ 8 ಸಾವಿರ ನಗದು ಮತ್ತು ಪ್ರಶಸ್ತಿಫಲಕಗಳನ್ನೊಳಗೊಂಡ ಕಿದಿಯೂರು ಜನಾರ್ದನ ಆಚಾರ್ಯ ಪ್ರಶಸ್ತಿಯನ್ನು ರಾಮಕೃಷ್ಣ ಮಂದಾರ್ತಿ, ಕಪ್ಪೆಟ್ಟು ಬಾಬು ಶೆಟ್ಟಿಗಾರ್ ಪ್ರಶಸ್ತಿಯನ್ನು ಕೃಷ್ಣಸ್ವಾಮಿ ಜೋಯಿಸ್ ಬ್ರಹ್ಮಾವರ ಹಾಗೂ ಕುತ್ಪಾಡಿ ಆನಂದ ಗಾಣಿಗ ಪ್ರಶಸ್ತಿಯನ್ನು ನಾಗಪ್ಪ ಹೊಳೆಮೊಗೆ ಇವರಿಗೆ ಪ್ರದಾನ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಸಮೂಹ ಉಡುಪಿ ರಂಗ ಪ್ರಯೋಗಗಳು ಸಂಶೋಧನಾತ್ಮಕ ಪ್ರಬಂಧವನ್ನ ಮಂಡಿಸಿ ಡಾಕ್ಟರೇಟ್ ಪದವಿಯನ್ನು ಇತ್ತೀಚೆಗೆ ಪಡೆದ ಭ್ರಮರಿ ಶಿವಪ್ರಕಾಶ್ ಇವರನ್ನು ಅಭಿನಂದಿಸಲಾಯಿತು . ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ.ನಿ.ಬೀ ವಿಜಯ ಬಲ್ಲಾಳರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಅಂಬಲಪಾಡಿ ಸ್ಕ್ಯಾನಿಂಗ್ ಸೆಂಟರ್ನ ಮಾಲಕರಾದ ಡಾ.ನವೀನ್ ಬಲ್ಲಾಳ ಉಪಸ್ಥಿತರಿದ್ದರು. ಮಂಡಳಿಯ ಅಧ್ಯಕ್ಷ ಕೆ. ಅಜಿತ್ ಕುಮಾರ್ ಸ್ವಾಗತಿಸಿದರು. ಹಿರಿಯ ಸದಸ್ಯರಾದ ಮುರಲಿ ಕಡೆಕಾರ್ ಸಮ್ಮಾನಿತರ ಪರಿಚಯವನ್ನು ಮಾಡಿ, ಅಭಿನಂದನಾ ಮಾತುಗಳನ್ನಾಡಿದರು. ಕೋಶಾಧಿಕಾರಿ ಎ. ನಟರಾಜ ಉಪಾಧ್ಯಾಯ ನಿರ್ವಹಣೆಗೈದ ಕಾರ್ಯಕ್ರಮದ ಕೊನೆಯಲ್ಲಿ ಪ್ರಶಾಂತ್ ಕುಮಾರ್ ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮದ ಬಳಿಕ ಕೋಟ ನರಸಿಂಹ ತುಂಗರ ನಿರ್ದೇಶನದಲ್ಲಿ ಮಂಡಳಿಯ ಬಾಲ ಕಲಾವಿದರಿಂದ ಶಶಿಪ್ರಭಾ ಪರಿಣಯ ಹಾಗೂ ಕೆ.ಜೆ.ಗಣೇಶ್ ನಿರ್ದೇಶನದಲ್ಲಿ ಮಂಡಳಿಯ ಸದಸ್ಯರಿಂದ ಬಭ್ರುವಾಹನ ಕಾಳಗ ಯಕ್ಷಗಾನ ಸೊಗಸಾಗಿ ಪ್ರಸ್ತುತ ಗೊಂಡಿತು.