ಶ್ರೀರಾಮ್ ಫೈನಾನ್’ನ ಸಾಮಾಜಿಕ ಬದ್ಧತೆಯ ಕಾರ್ಯ ಶ್ಲಾಘನೀಯ: ಕೆ.ಉದಯಕುಮಾರ್ ಶೆಟ್ಟಿ

ಉಡುಪಿ ಫೆ.3(ಉಡುಪಿ ಟೈಮ್ಸ್ ವರದಿ): ಶ್ರೀರಾಮ್ ಫೈನಾನ್ಸ್ ಲಿಮಿಟೆಡ್ ಉಡುಪಿ ಇವರ ವತಿಯಿಂದ 11 ನೇ ವರ್ಷದ ವಿದ್ಯಾರ್ಥಿ ನಿಧಿ ವಿತರಣಾ ಕಾರ್ಯಕ್ರಮ ಬನ್ನಂಜೆ ಶ್ರೀನಾರಾಯಣಗುರು ಶಿವಗಿರಿ ಸಭಾಭವನದಲ್ಲಿ ಇಂದು ನಡೆಯಿತು.

ಕಾರ್ಯಕ್ರಮವನ್ನು ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ. ಉದಯಕುಮಾರ್ ಶೆಟ್ಟಿ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಒಂದು ಸಂಸ್ಥೆಯು ಲಾಭದಾಯಕವಾಗಿ ಬೆಳೆದು ಸಮಾಜದ ಸುಖಕಷ್ಟಗಳಿಗೆ ಸ್ಪಂದಿಸುವ ಕಾಯಗಳನ್ನು ಮಾಡುತ್ತ ಬಂದರೆ ಆ ಸಂಸ್ಥೆ ನೂರಾರು ವರ್ಷಗಳ ಕಾಲ ಬದುಕುತ್ತದೆ. ಸಮಾಜದಲ್ಲಿನ ದುಡಿಯುವ ವರ್ಗಕ್ಕೆ ಸಾಲ ಸೌಲಭ್ಯದ ಜೊತೆ ಉದ್ಯೋಗ ಕಲ್ಪಿಸಿದ ಸಂಸ್ಥೆ ಎಪ್ಪತ್ತು ವರ್ಷದಿಂದ ಬಡ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಸ್ಕಾಲರ್ ಶಿಪ್ ನೀಡುತ್ತಾ ಬಂದಿರುವುದು ಉತ್ತಮ ಕಾರ್ಯ. ಈ ನಿಟ್ಟಿನಲ್ಲಿ ಶ್ರೀರಾಮ್ ಫೈನಾನ್ಸ್ ಸಂಸ್ಥೆಯ ಸಾಮಾಜಿಕ ಬದ್ದತೆ ಶ್ಲಾಘನೀಯವಾದದ್ದು ಎಂದರು.

ಹಾಗೂ ನಿರಂತರವಾಗಿ ಪ್ರಯತ್ನ ಪಟ್ಟಾಗ ಗೆಲುವು ನಮಗೆ ಹತ್ತಿರವಾಗುತ್ತದೆ. ಹಾಗೇ ನಾವು ಪ್ರಯತ್ನ ಪಡುವುದನ್ನೇ ದೂರ ಮಾಡಿದಾಗ ಗೆಲುವು ಕೂಡಾ ನಮ್ಮಿಂದ ದೂರಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಈ ವೇಳೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀರಾಮ್ ಫೈನಾನ್ಸ್ ಝೋನಲ್ ಬಿಸಿನೆಸ್ ಹೆಡ್ ಶರಶ್ಚಂದ್ರ ಭಟ್ ಕಾಕುಂಜೆ ಅವರು ಮಾತನಾಡಿ, ಸಾರಿಗೆ ಕ್ಷೇತ್ರದಲ್ಲಿ ದುಡಿಯುತ್ತಿರುವವರಿಗೆ ಸುಲಭ ಸಾಲ ಸೌಲಭ್ಯ ಒದಗಿಸುವುದು. ಅವರೂ ಸ್ವಾವಲಂಭಿ ಜೀವನ ನಡೆಸುವಂತಾಗಬೇಕು. ಗ್ರಾಮೀಣ ಪ್ರದೇಶದಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಉತ್ತಮ ಉದ್ಯೋಗ ಸಿಗಬೇಕು ಎಂಬ ಮಹತ್ತರವಾದ ಉದ್ದೇಶದಿಂದ ಶ್ರೀರಾಮ್ ಫೈನಾನ್ಸ್ ಆರಂಭಗೊಂಡಿತ್ತು. ಇಂದು ಸಂಸ್ಥೆ ದೇಶದಲ್ಲಿ 76 ಲಕ್ಷ ಗ್ರಾಹಕರನ್ನು ಹಾಗೂ 300ಕ್ಕೂ ಅಧಿಕ ಶಾಖೆಗಳನ್ನು ಹೊಂದಿದ್ದು, 70,000 ಸಾವಿರ ಸಿಬ್ಬಂದಿ ವರ್ಗದವರು ಈ ಸಂಸ್ಥೆಯಲ್ಲಿ ಉದ್ಯೋಗ ಪಡೆದುಕೊಂಡಿದ್ದಾರೆ ಹಾಗೂ ಶ್ರೀರಾಮ್ ಫೈನಾನ್ಸ್ 2.5 ಲಕ್ಷ ಕೋ. ವಹಿವಾಟು ಹೊಂದಿದೆ. ಬಹಳಷ್ಟು ವಿದ್ಯಾರ್ಥಿಗಳು ನಮ್ಮಲ್ಲಿ ಸ್ಕಾಲರ್ಶಿಪ್ ಪಡೆದು ವಿದ್ಯಾಭ್ಯಾಸ ಹೊಂದಿ ಉತ್ತಮ ಉದ್ಯೋಗ ಪಡೆದುಕೊಂಡಿದ್ದಾರೆ. ವಾಣಿಜ್ಯ ಬ್ಯಾಂಕ್ ನಲ್ಲಿ ಸಿಗುವ ಎಲ್ಲಾ ರೀತಿಯ ಲೋನ್‍ಗಳನ್ನು ನಾವು ಕೊಡುತ್ತಿದ್ದೇವೆ ಎಂದು ಮಾಹಿತಿ ನೀಡಿದರು. ಜೊತೆಗೆ ಇಲ್ಲಿ ಸ್ಕಾಲರ್ಶಿಪ್ ಪಡೆಯುವ ವಿದ್ಯಾರ್ಥಿಗಳು ದೇಶ ಕಟ್ಟುವ ಕಾರ್ಯಕ್ಕೆ ಉತ್ತಮ ಕೊಡುಗೆಗಳನ್ನು ನೀಡಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ರಾಧಾ ಗ್ರೂಪ್ ಆಫ್ ಕಂಪೆನಿಯ ಮ್ಯಾನೇಜಿಂಗ್ ಡೈರೆಕ್ಟರ್ ಮನೋಹರ ಶೆಟ್ಟಿ, ಉದ್ಯಮಿ ದಿನೇಶ್ ಪುತ್ರನ್, ಉಡುಪಿ ಸ್ನೇಹ ಟ್ಯೂಟೆರಿಯಲ್ ಕಾಲೇಜಿನ ಮುಖ್ಯಸ್ಥ ಉಮೇಶ್ ನಾಯ್ಕ್, ಬನ್ನಂಜೆ ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಮಾಧವ ಬನ್ನಂಜೆ, ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯ ಅಧ್ಯಕ್ಷ ಮತ್ತು ವಕೀಲ ಪ್ರವೀಣ್ ಪೂಜಾರಿ, ಶ್ರೀರಾಮ್ ಫೈನಾನ್ಸ್ ಲಿಮಿಟೆಡ್ ನ ಸದಾಶಿವ ಅಮೀನ್, ನಾಗರಾಜ್ ಬಿ., ಉಡುಪಿ ವಿಭಾಗದ ಆರ್ ಬಿಎಚ್ ಗಣಪತಿ ನಾಯ್ಕ್, ಸುರೇಶ್ ಎಸ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!