ಮುಂಬೈ ಇಂದು ಧಾರಾಕಾರ ಮಳೆ: ರೆಡ್ ಅಲರ್ಟ್ ಘೋಷಣೆ

ಮುಂಬೈ: ಮುತ್ತಿನ ನಗರಿ ಹೈದರಾಬಾದ್ ನಂತರ ಮಹಾನಗರಿ ಮುಂಬೈಯಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಇಂದು ಮಹಾರಾಷ್ಟ್ರದಾದ್ಯಂತ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ಇಡೀ ಉತ್ತರ ಕೊಂಕಣ ಪ್ರದೇಶ, ಮುಂಬೈ ಮತ್ತು ಥಾಣೆಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಮುಂಬೈಯ ಹಲವೆಡೆ ಧಾರಾಕಾರ ಮಳೆಯಿಂದಾಗಿ ಮುಂಜಾನೆಯಿಂದಲೇ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ, ಹಲವು ಪ್ರದೇಶಗಳು ಜಲಾವೃತವಾಗಿವೆ.

ಪುಣೆ ಜಿಲ್ಲೆಯ ನಿಮ್ಗೌನ್ ಕೆಟ್ಕಿ ಗ್ರಾಮದಿಂದ ಅಪಾಯದಲ್ಲಿದ್ದ 40 ಮಂದಿಯನ್ನು ರಕ್ಷಿಸಲಾಗಿದೆ. ಸದ್ಯ ಎನ್ ಡಿಆರ್ ಎಫ್ ತಂಡ ಅಲ್ಲಿ ಕಾರ್ಯನಿರತವಾಗಿದೆ. ಮತ್ತೊಂದು ಘಟನೆಯಲ್ಲಿ ಇಂದಾಪುರ್ ನಲ್ಲಿ, ವಾಹನಗಳೊಂದಿಗೆ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ ಇಬ್ಬರನ್ನು ಕಾಪಾಡಲಾಗಿದೆ.

ಭಾರೀ ಮಳೆಯಿಂದಾಗಿ ರಕ್ಷಣಾ ಕಾರ್ಯ ನಡೆಸಲು ಲಾತುರ್ ಮತ್ತು ಸೋಲಾಪುರ್ ನಲ್ಲಿ ರಾಷ್ಟ್ರೀಯ ರಕ್ಷಣಾ ಪಡೆಯ ಎರಡು ತಂಡಗಳನ್ನು ನಿಯೋಜಿಸಲಾಗಿದೆ. ಪುಣೆಯ ಭಾರಾಮತಿಯಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದೆ.

ಇಂದು ನಡೆಯಬೇಕಿದ್ದ ಆನ್ ಲೈನ್ ಮತ್ತು ಆಫ್ ಲೈನ್ ಪರೀಕ್ಷೆಯನ್ನು ಭಾರೀ ಮಳೆ ಹಿನ್ನೆಲೆಯಲ್ಲಿ ಸಾವಿತ್ರಿಭಾಯಿ ಫುಲೆ ಪುಣೆ ವಿಶ್ವವಿದ್ಯಾಲಯ ಮುಂದೂಡಿದೆ. ಸದ್ಯದಲ್ಲಿಯೇ ಪರಿಷ್ಕೃತ ದಿನ ಪ್ರಕಟಿಸಲಾಗುವುದು ಎಂದು ಹೇಳಿದೆ.

ಮಧ್ಯ ಮಹಾರಾಷ್ಟ್ರದಾದ್ಯಂತ ಮುಂದಿನ 12 ಗಂಟೆಗಳಲ್ಲಿ ಗಂಟೆಗೆ 20ರಿಂದ 30 ಕಿಲೋ ಮೀಟರ್ ವೇಗದಲ್ಲಿ 40 ಕಿಲೋ ಮೀಟರ್ ವರೆಗೆ ಗಾಳಿ ಬೀಸಬಹುದು ನಂತರ ನಿಧಾನವಾಗಿ ಕಡಿಮೆಯಾಗಬಹುದು, ಜನರು ಮನೆಯಿಂದ ಸಾಧ್ಯವಾದಷ್ಟು ಹೊರಬರದೆ ಎಚ್ಚರಿಕೆಯಿಂದಿರುವಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಮಹಾರಾಷ್ಟ್ರದಲ್ಲಿ ಭಾರೀ ಮಳೆಯಿಂದಾಗಿ ಕಲಬುರಗಿ ಜಿಲ್ಲೆಯ ಅಫ್ಜಲ್ ಪುರದ ಭೀಮಾ ನದಿಯಿಂದ ಸೊನ್ನಾ ಅಣೆಕಟ್ಟು ಮೂಲಕ 2,23,000 ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗಿದೆ ಎಂದು ಕರ್ನಾಟಕ ನೀರಾವರಿ ನಿಗಮ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!