ದಕ್ಷಿಣ ಭಾರತಕ್ಕೆ ಪ್ರತ್ಯೇಕ ದೇಶ: ಸಂಸದ ಡಿ.ಕೆ ಸುರೇಶ್ ಹೇಳಿಕೆ- ತೀವ್ರ ಆಕ್ಷೇಪ ವ್ಯಕ್ತ

ಬೆಂಗಳೂರು: ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್‌ ಮಂಡನೆಗೆ ಪ್ರತಿಕ್ರಿಯಿಸುವ ಭರದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಂಸದ ಡಿ.ಕೆ.ಸುರೇಶ್ ನಿನ್ನೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ದಕ್ಷಿಣ ಭಾರತದ ಆದಾಯ ಮತ್ತು ಸಂಪನ್ಮೂಲಗಳನ್ನು ಉತ್ತರ ಭಾರತದ ಅಭಿವೃದ್ಧಿಗೆ ಬಳಸಿಕೊಳ್ಳಲಾಗುತ್ತಿದ್ದು, ದಕ್ಷಿಣ ಭಾರತಕ್ಕೆ ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿದೆ, ಇದು ಹೀಗೆಯೇ ಮುಂದುವರಿದರೆ ಪ್ರತ್ಯೇಕ ದೇಶಕ್ಕೆ ಆಗ್ರಹಿಸಬೇಕಾಗುತ್ತದೆ ಎಂದು ಹೇಳಿದ್ದರು. 

ಸುರೇಶ ವಿರುದ್ಧ ಬಿಜೆಪಿ ವಾಗ್ದಾಳಿ: ಡಿ.ಕೆ ಸುರೇಶ್ ಹೇಳಿಕೆಗೆ ಬಿಜೆಪಿ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಂಸದ ಡಿಕೆ ಸುರೇಶ್ ಅವರು ದೇಶದ ವಿಭಜನೆಯ ಬಗ್ಗೆ ಮಾತನಾಡಿದ್ದಾರೆ, ಇದು ಕಾಂಗ್ರೆಸ್ ನಾಯಕರ ಭಾರತ್ ತೋಡೋ, ಭಾರತ್ ಜೋಡೋ ಅಲ್ಲ ಎಂದು ರಾಹುಲ್ ಗಾಂಧಿಯವರು ಪ್ರಸ್ತುತ ಮಾಡುತ್ತಿರುವ ಭಾರತ್ ಜೋಡೋ ನ್ಯಾಯ್ ಯಾತ್ರೆಯನ್ನು ಉದಾಹರಣೆಯಾಗಿಟ್ಟು ಟೀಕಿಸಿದ್ದಾರೆ.

ಜವಾಬ್ದಾರಿ ಅರಿತು ಮಾತನಾಡಬೇಕು: ಸಂಸದ ಡಿ.ಕೆ.ಸುರೇಶ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು, ಡಿ.ಕೆ.ಸುರೇಶ ಅವರು ಸಂಸದರಾಗಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ಜವಾಬ್ದಾರಿ ಅರಿತು ಮಾತನಾಡಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಜ್ಯ ಸರ್ಕಾರವು ಸಂವಿಧಾನದ 75ನೇ ವರ್ಷದ ರಥಯಾತ್ರೆ ಆಚರಣೆ ಮಾಡುತ್ತಿರುವ ಸಂದರ್ಭದಲ್ಲಿ ಸಂಸದರು ಈ ರೀತಿ ಹೇಳಿಕೆ ಕೊಟ್ಟಿರುವುದು ಖಂಡನೀಯ ಎಂದರು. ಯಾವುದೇ ಒಬ್ಬ ಜನಪ್ರತಿನಿಧಿಯು ತಮ್ಮ ಸ್ಥಾನವನ್ನು ಅಲಂಕರಿಸಿದ ಸಂದರ್ಭದಲ್ಲಿ ಸಂವಿಧಾನವನ್ನು ಮುಂದಿಟ್ಟುಕೊಂಡು ಭಾರತದ ಅಖಂಡತೆ ಮತ್ತು ಸಾರ್ವಭೌಮತ್ವವನ್ನು ಕಾಪಾಡುವುದಾಗಿ ಪ್ರತಿಜ್ಞೆ ಮಾಡುತ್ತಾರೆ. ಆದರೆ ಡಿ.ಕೆ.ಸುರೇಶ ಅವರು ಎಲ್ಲೋ ಒಂದು ಕಡೆ ಇದನ್ನು ಮರೆತಿರುವಂತಿದೆ ಎಂದರು.

ಇವರು ಯಾವ ಅಭಿವೃದ್ಧಿ, ಯಾವ ಅನುದಾನದ ಮಾತನಾಡುತ್ತಿದ್ದಾರೆ? ಹಿಂದೆ ಯುಪಿಎ ಸರ್ಕಾರ ಅಧಿಕಾರದಲ್ಲಿ ದ್ದಾಗ ಕರ್ನಾಟಕ ರಾಜ್ಯಕ್ಕೆ ಕೇಂದ್ರದಿಂದ 2004-14ರವರೆಗೆ 60 ಸಾವಿರ ಕೋಟಿ ಕೊಟ್ಟಿದ್ದರು. 2014ರಿಂದ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ 2,36,000 ಕೋಟಿ ಅನುದಾನವನ್ನು ಕೊಟ್ಟಿದ್ದಾರೆ. ಇದನ್ನು ಸಂಸದ ಸುರೇಶ ಅವರು ಇದನ್ನು ಗಮನಿಸಬೇಕು ಎಂದು ಹೇಳಿದರು.

ತೆರಿಗೆ ಹಂಚಿಕೆ ಮೂಲಕ ರಾಜ್ಯಕ್ಕೆ ಯುಪಿಎ ಸರ್ಕಾರದ ಅವಧಿಯಲ್ಲಿ 81 ಸಾವಿರ ಕೋಟಿ ರೂಪಾಯಿ ಬಂದಿತ್ತು. ಆದರೆ ಮೋದಿ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ 2,82,000 ಕೋಟಿ ರೂ.ಹಣವನ್ನು ಕೊಡಲಾಗಿದೆ. ಹಾಗಾಗಿ ಅಂಕಿಅಂಶ ಅರ್ಥ ಮಾಡಿಕೊಳ್ಳದೇ ಜವಾಬ್ದಾರಿಯುತ ಸಂಸದರು ಬೇಜವಾಬ್ದಾರಿಯುತವಾಗಿ ನಡೆದುಕೊಂಡಿದ್ದಾರೆ. ಇದು ದುರದೃಷ್ಟಕರ ಎಂದು ಟೀಕಿಸಿದರು.

ಹೇಳಿಕೆಗೆ ಪ್ರತಿಕ್ರಿಯಿಸಿದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ಕಾಂಗ್ರೆಸ್ ಪಕ್ಷವು ಒಡೆದು ಆಳುವ ಇತಿಹಾಸ ಹೊಂದಿದ್ದು, ಅದರ ಸಂಸದ ಡಿಕೆ ಸುರೇಶ ಈಗ ಉತ್ತರ ಮತ್ತು ದಕ್ಷಿಣವನ್ನು ವಿಭಜಿಸುವ ನಾಟಕವಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಒಂದೆಡೆ, ಅವರ ನಾಯಕ ರಾಹುಲ್ ಗಾಂಧಿ ಅವರು ತಮ್ಮ ‘ಜೋಡೋ’ ಯಾತ್ರೆಗಳ ಮೂಲಕ ದೇಶವನ್ನು ‘ಒಗ್ಗೂಡಿಸಲು’ ಪ್ರಯತ್ನಿಸುತ್ತಿದ್ದಾರೆ, ಮತ್ತೊಂದೆಡೆ, ರಾಷ್ಟ್ರವನ್ನು ಒಡೆಯುವ ಮಾತನಾಡುವ ಸಂಸದ ನಮ್ಮಲ್ಲಿ ದ್ದಾರೆ. ಕಾಂಗ್ರೆಸ್‌ನ ಒಡೆದು ಆಳುವ ಕಲ್ಪನೆ ವಸಾಹತುಶಾಹಿಗಳು ಅನುಸರಿಸಿದ್ದಕ್ಕಿಂತ ಕೆಟ್ಟದಾಗಿದೆ” ಎಂದು ತೇಜಸ್ವಿ ಸೂರ್ಯ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

 ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನಾಯಕರು ತಮ್ಮ ಏಕೈಕ ಸಂಸದರ ರಕ್ಷಣೆಗೆ ಧಾವಿಸಿದರು, ಸುರೇಶ್ ಅವರು ದಕ್ಷಿಣ ಭಾರತದ ಜನರ ಸಮಸ್ಯೆಗಳ ಬಗ್ಗೆ ಮಾತನಾಡಿದ್ದಾರೆ ಎಂದು ಹೇಳಿದರು. ಶಿವಕುಮಾರ್ ಮಾತನಾಡಿ, ನಾನು ಅಖಂಡ ಭಾರತದ ಪ್ರಜೆ. ಆದಾಯದಲ್ಲಿ ನ್ಯಾಯಯುತ ಪಾಲು ಸಿಗದೆ ಜನರ ನಿರಾಸೆಗೆ ಸುರೇಶ್ ಕನ್ನಡಿ ಹಿಡಿದಿದ್ದಾರೆ.

ನಾವೆಲ್ಲರೂ ಭಾರತಮಾತೆಯ ಮಕ್ಕಳು ಮತ್ತು ನಾವು ಒಟ್ಟಿಗೆ ಇರಬೇಕಾಗಿದೆ. ಹಿಂದಿ ರಾಜ್ಯಗಳಿಗೆ ನೀಡುವ ಆದ್ಯತೆ ಮತ್ತು ಪ್ರಾಮುಖ್ಯತೆ ದಕ್ಷಿಣ ಭಾರತಕ್ಕೂ ಬೇಕು ಎಂಬುದನ್ನು ಸುರೇಶ್ ಹೇಳಿದ್ದಾರೆ ಎಂದರು.ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ‘ಕರ್ನಾಟಕ 25 ಬಿಜೆಪಿ ಸಂಸದರನ್ನು ಆಯ್ಕೆ ಮಾಡಿದೆ,ಎಲ್ಲಾ ಸಂಸದರು ಕರ್ನಾಟಕಕ್ಕೆ ಏನು ಮಾಡಿದ್ದಾರೆ ನಮ್ಮ ಬಿಜೆಪಿ ಸಂಸದರು ಈಗಲಾದರೂ ಸಂಸತ್ ಭವನದ ಮುಂದೆ ಪ್ರತಿಭಟನೆ ನಡೆಸುತ್ತಾರೆ ಯೇ? ಭಾರತವನ್ನು ವಿಭಜಿಸುವ ವಿಚಾರವನ್ನು ಪ್ರಸ್ತಾಪಿಸದೆ, ದಕ್ಷಿಣಕ್ಕೆ ಕೇಂದ್ರದ ಹಂಚಿಕೆಯಲ್ಲಿನ ಅಸಮತೋಲ ನವನ್ನು ಪರಿಹರಿಸಬೇಕಾಗಿದೆ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!