ಕೇಂದ್ರ ಬಜೆಟ್ 2024-25: 1ಕೋಟಿ ಮನೆಗಳಿಗೆ ಪ್ರತಿ ತಿಂಗಳು 300 ಯೂನಿಟ್ ಉಚಿತ ವಿದ್ಯುತ್!

ನವದೆಹಲಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ 2024-25ನೇ ಸಾಲಿನ ಮಧ್ಯಂತರ ಬಜೆಟ್‌ ಮಂಡನೆ ಮಾಡಿದ್ದು, ಬಜೆಟ್ ನಲ್ಲಿ ಒಂದು ಕೋಟಿ ಮನೆಗಳಿಗೆ ಪ್ರತಿ ತಿಂಗಳು 300 ಯೂನಿಟ್ ಉಚಿತ ವಿದ್ಯುತ್ ನೀಡುವುದಾಗಿ ಘೋಷಣೆ ಮಾಡಿದ್ದಾರೆ.

ನಿರ್ಮಲಾ ಸೀತಾರಾಮನ್ 2024-25ನೇ ಸಾಲಿಗೆ ಬಜೆಟ್‌ ಭಾಷಣದಲ್ಲಿ ಗುರುವಾರ ಮನೆಯ ಮೇಲ್ಛಾವಣಿ ಮೇಲಿನ ಸೌರಶಕ್ತಿ ಫಲಕದಿಂದ 1 ಕೋಟಿ ಮನೆಗಳಿಗೆ ಪ್ರತಿ ತಿಂಗಳು 300 ಯೂನಿಟ್ ಉಚಿತ ವಿದ್ಯುತ್ ಸಿಗಲಿದೆ ಎಂದು ಘೋಷಣೆ ಮಾಡಿದರು.

ಕೋವಿಡ್‌ ಸವಾಲುಗಳ ನಡುವೆಯೂ, ಪ್ರಧಾನಮಂತ್ರಿ ಆವಾಸ್ ಯೋಜನೆ ಗ್ರಾಮೀಣ ಅನುಷ್ಠಾನ ಯಶಸ್ವಿಯಾಗಿ ಮುಂದುವರೆದಿದೆ. ನಾವು 3 ಕೋಟಿ ಮನೆ ನಿರ್ಮಾಣ ಗುರಿಯ ಸನಿಹದಲ್ಲೇ ಇದ್ದೇವೆ. ಮುಂದಿನ 5 ವರ್ಷಗಳಲ್ಲಿ 2 ಕೋಟಿ ಹೆಚ್ಚಿನ ಮನೆಗಳ ನಿರ್ಮಾಣಕ್ಕೆ ಅನುದಾನ ಒದಗಿಸಲಾಗುವುದು. ಹಾಗೆಯೇ ಒಂದು ಕೋಟಿ ಮನೆಗಳಿಗೆ ಪ್ರತಿ ತಿಂಗಳು 300 ಯೂನಿಟ್ ಉಚಿತ ವಿದ್ಯುತ್ ನೀಡಲಾಗುವುದು ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಈಗಾಗಲೇ 1 ಕೋಟಿ ಮನೆಗಳಿಗೆ ಮೇಲ್ಛಾವಣಿ ಸೌರಶಕ್ತಿ ಅಳವಡಿಸುವ ಗುರಿಯೊಂದಿಗೆ ‘ಪ್ರಧಾನಮಂತ್ರಿ ಸೂರ್ಯೋದಯ ಯೋಜನೆ’ ಘೋಷಣೆ ಮಾಡಿದ್ದಾರೆ. ಅಲ್ಲದೇ ಈ ಯೋಜನೆಗೆ ಚಾಲನೆ ನೀಡುವ ಕುರಿತು ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ.

ಯೋಜನೆ ಕುರಿತು ಈ ಹಿಂದೆ ಟ್ವೀಟ್ ಮಾಡಿದ್ದ ಪ್ರಧಾನಿ ಮೋದಿಯವರು “ನಮ್ಮ ಸರ್ಕಾರವು 1 ಕೋಟಿ ಮನೆಗಳಿಗೆ ಮೇಲ್ಛಾವಣಿಯ ಸೌರಶಕ್ತಿ ( ಸೋಲಾರ್ ರೂಫ್ ಟಾಪ್) ವ್ಯವಸ್ಥೆಯನ್ನು ಸ್ಥಾಪಿಸುವ ಗುರಿಯೊಂದಿಗೆ ಪ್ರಧಾನಮಂತ್ರಿ ಸೂರ್ಯೋದಯ ಯೋಜನೆಯನ್ನು ಪ್ರಾರಂಭಿಸಲಿದೆ” ಎಂದು ಹೇಳಿದ್ದರು.

ಕೇಂದ್ರ ಸರ್ಕಾರ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳನ್ನು ಗುರಿಯಾಗಿಸಿಕೊಂಡು ‘ಪ್ರಧಾನಮಂತ್ರಿ ಸೂರ್ಯೋದಯ ಯೋಜನೆ’ ಘೋಷಣೆ ಮಾಡಲಾಗಿದೆ. ವಿದ್ಯುತ್ ಬಿಲ್‌ಗಳನ್ನು ಕಡಿಮೆ ಮಾಡಲು ಮತ್ತು ಅವರ ವಿದ್ಯುತ್ ಅಗತ್ಯಗಳಿಗಾಗಿ ಸೌರಶಕ್ತಿ ಅವಲಂಬಿಸುವ ಮೂಲಕ ನಿಜವಾದ ಆತ್ಮನಿರ್ಭರ್ ಆಗಲು ಪ್ರತಿ ಮನೆಯವರು ಸೂರ್ಯನ ಶಕ್ತಿಯನ್ನು ಬಳಸಿಕೊಳ್ಳಬಹುದು ಎಂದು ತಿಳಿಸಿದ್ದರು.

ಈ ಯೋಜನೆಯಡಿ 1 ಕೋಟಿ ಮನೆಯ ಮೇಲ್ಛಾವಣಿ ಮೇಲೆ ಸೌರಶಕ್ತಿ ಫಲಕ ಆಳವಡಿಕೆ ಮಾಡಲಾಗುತ್ತದೆ. ಇದರಿಂದಾಗಿ ಮನೆಗಳು ಸೌರಶಕ್ತಿ ವಿದ್ಯುತ್ ಪಡೆಯುವ ಜೊತೆಗೆ ಹೆಚ್ಚಿನ ವಿದ್ಯುತ್‌ ಅನ್ನು ಮಾರಾಟ ಮಾಡಲು ಸಹ ಅವಕಾಶ ಕಲ್ಪಿಸಲಾಗುತ್ತದೆ.

Leave a Reply

Your email address will not be published. Required fields are marked *

error: Content is protected !!