ಉಸಿರು ನಿಲ್ಲಿಸಿದ ಹೆಸರಾಂತ ಉಡುಪಿಯ ಟೈಗರ್ ರಾಜ್…
ಉಡುಪಿ: (ಉಡುಪಿ ಟೈಮ್ಸ್ ವರದಿ) ಅಲ್ಪಕಾಲದ ಅಸೌಖ್ಯದಿಂದ ಇದ್ದ ಕಾಡಬೆಟ್ಟು ಹುಲಿವೇಷ ತಂಡದ ಮುಖ್ಯಸ್ಥರಾದ ಅಶೋಕ್ರಾಜ್ ಕಾಡಬೆಟ್ಟು(56) ಇಂದು ನಿಧನರಾಗಿದ್ದಾರೆ.
ಕಳೆದ ನವರಾತ್ರಿಯಂದು ಬೆಂಗಳೂರಿಗೆ ಹುಲಿವೇಷದ ಪ್ರದರ್ಶನ ನೀಡಲು ಹೋಗಿದ್ದ ಸಂದರ್ಭದಲ್ಲಿ ಕುಸಿದು ಬಿದ್ದಿದ್ದ ಅಶೋಕ್ ರಾಜ್ ಅವರು ಚಿಕಿತ್ಸೆಗಾಗಿ ಬೆಂಗಳೂರು, ಮಣಿಪಾಲ, ಉಡುಪಿಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೆ ಉಡುಪಿಯ ಆದರ್ಶ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು ಎಂದು ಕುಟುಂಬ ಮೂಲಗಳು ತಿಳಿಸಿವೆ.
“ಟೈಗರ್ ಅಶೋಕ್” ಎಂದೇ ಹೆಸರುವಾಸಿಯಾಗಿರುವ ಅಶೋಕ್ ರಾಜ್ ಕಾಡುಬೆಟ್ಟು ಅವರು ಹುಲಿವೇಷಧಾರಿ ಹುಲಿಕುಣಿತದಲ್ಲಿ ತನ್ನದೇ ಆದ ಚಾಪು ಮೂಡಿಸಿದ್ದರು. ಇವರು ಕಳೆದ 36 ವರ್ಷಗಳಿಂದ ಉಡುಪಿ ಶ್ರೀಕೃಷ್ಣ ಜನ್ಮಾಷ್ಟಮಿಗೆ ಉಡುಪಿಯಲ್ಲಿ ಸಾಂಪ್ರದಾಯಿಕ ಹುಲಿವೇಷ ಧರಿಸಿ ಜನರನ್ನು ರಂಜಿಸುತ್ತಿದ್ದರು. ಅಲ್ಲದೆ 28 ವರ್ಷಗಳಿಂದ ಹುಲಿವೇಷ ತಂಡ ರಚಿಸಿ ಹುಲಿ ವೇಷದ ರಂಗನ್ನು ಎಲ್ಲೆಡೆ ಪಸರಿಸುವಂತೆ ಮಾಡಿದ್ದರು.
ಉಡುಪಿಯಲ್ಲಿ ಹಲವಾರು ಹುಲಿವೇಷಧಾರಿಗಳಿಗೆ ತರಬೇತಿ ನೀಡಿದ್ದ ಇವರು ಹಲವಾರು ಪ್ರತಿಭೆಗಳನ್ನು ಬೆಳಕಿಗೆ ತಂದು ಗುರು ಸ್ಥಾನ ಹೊಂದಿದ್ದರು. ಕಳೆದ ವರ್ಷ ಮಣಿಪಾಲದ ಮಾಹೆಯಲ್ಲಿ ಜಾನಪದ ಕಲೆಯಲ್ಲಿ ಹುಲಿವೇಷ ಕುಣಿತ ಹೆಜ್ಜೆ ಹಾಗೂ ನಲಿಕೆಯ ಅಧ್ಯಯನದ ದಾಖಲೀಕರಣಕ್ಕೆ ಇವರದೇ ತಂಡ ಆಯ್ಕೆಯಾಗಿತ್ತು ಎನ್ನುವುದು ಗಮನಾರ್ಹ.
ಅಲ್ಲದೆ ಇಪ್ಪತ್ತೈದು ವರುಷ ಹಿಂದೆ ಉಡುಪಿಯ ರಾಜಾಂಗಣದಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಬಿಬಿಸಿ ವಾಹಿನಿಯ ತಂಡಕ್ಕೆ ಪ್ರೊಫೆಸರ್ ಎಸ್ ಎ. ಕೃಷ್ಣಯ್ಯರವರ ಮೂಲಕ ಉಡುಪಿಯಲ್ಲಿ ಹುಲಿ ಕುಣಿತದ ಚಿತ್ರಿಕರಣ ನಡೆದಾಗಲೂ ಅಶೋಕ್ ರಾಜ್ ಅವರ ತಂಡ ಆಯ್ಕೆಯಾಗಿತ್ತು.
ಹುಲಿವೇಷ ಕುಣಿತದಲ್ಲಿ ಜನಮನಗೆದ್ದ ಅಶೋಕ್ ಕಾಡುಬೆಟ್ಡು ಅವರ ಅಂತ್ಯಸಂಸ್ಕಾರ ನಾಳೆ ನಡೆಯಲಿದೆ ಎಂದು ತಿಳಿದುಬಂದಿದೆ.
ಮೃತರು ತಾಯಿ, ಪತ್ನಿ, ಸಹೋದರ, ಇಬ್ಬರು ಪುತ್ರಿ ಹಾಗೂ ಓರ್ವ ಪುತ್ರರನ್ನು ಅಗಲಿದ್ದಾರೆ.