ಕೇಂದ್ರ ಬಜೆಟ್ 2024-25: ಆಯವ್ಯಯ ಮಂಡನೆ ಮುಕ್ತಾಯ, ಸರ್ಕಾರದ ಆರ್ಥಿಕ ಸ್ಥಿತಿಗತಿ ಕುರಿತು ಶ್ವೇತಪತ್ರ ಹೊರಡಿಸುತ್ತೇವೆ- ನಿರ್ಮಲಾ
ನವದೆಹಲಿ: ಲೋಕಸಭೆಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2024-25ನೇ ಸಾಲಿನ ಕೇಂದ್ರ ಬಜೆಟ್ ಮಂಡನೆ ಮುಕ್ತಾಯಗೊಳಿಸಿದ್ದು, ಸರ್ಕಾರದ ಆರ್ಥಿಕ ಸ್ಥಿತಿಗತಿ ಕುರಿತು ಸಂಸತ್ತಿನಲ್ಲಿ ಶ್ವೇತಪತ್ರ ಹೊರಡಿಸುತ್ತೇವೆಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೇಳಿದ್ದಾರೆ.
ಲೋಕಸಭೆಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2024-25ನೇ ಸಾಲಿನ ಕೇಂದ್ರ ಬಜೆಟ್ ನ್ನು ಇಂದು ಮಂಡನೆ ಮಾಡಿದ್ದು, ಈ ಮೂಲಕ ಮೊರಾರ್ಜಿ ದೇಸಾಯಿ ಬಳಿಕ ಸತತ 6 ಬಾರಿ ಕೇಂದ್ರ ಬಜೆಟ್ ಮಂಡಿಸಿದ ವಿತ್ತ ಮಂತ್ರಿಯಾಗಿ ದಾಖಲೆ ಬರೆದಿದ್ದಾರೆ. ಅಲ್ಲದೆ, 2019ರಿಂದ ಈವರೆಗೆ ಪೂರ್ಣಾವಧಿ ವಿತ್ತ ಮಂತ್ರಿಯಾಗಿ ಕೆಲಸ ಮಾಡಿದ ದೇಶದ ಮೊದಲ ಮಹಿಳೆ ಎಂಬ ಖ್ಯಾತಿಗೂ ಪಾತ್ರರಾಗಿದ್ದಾರೆ.
ಸತತ ಐದು ಬಜೆಟ್‌ಗಳನ್ನು ಮಂಡಿಸಿರುವ ಮನಮೋಹನ್ ಸಿಂಗ್, ಅರುಣ್ ಜೇಟ್ಲಿ, ಪಿ.ಚಿದಂಬರಂ ಹಾಗೂ ಯಶವಂತ್ ಸಿನ್ಹಾ ಅವರ ದಾಖಲೆಗಳನ್ನೂ ನಿರ್ಮಲಾ ಸೀತಾರಾಮನ್ ಅವರು ಮುರಿದಿದ್ದಾರೆ. ಇದು ಮೋದಿ ಸರ್ಕಾರದ 2ನೇ ಅವಧಿಯ ಕೊನೆಯ ಬಜೆಟ್ ಆಗಿದ್ದು, ಚುನಾವಣೆಗೂ ಮುನ್ನ ಮಂಡಿಸಲಿರುವ ಬಜೆಟ್ ಆಗಿರುವುದರಿಂದ ಇದು ಪೂರ್ಣ ಪ್ರಮಾಣದ ಬಜೆಟ್ ಆಗಿರದೆ ಮಧ್ಯಂತರ ಬಜೆಟ್ ಆಗಿದೆ.
ಲೋಕಸಭೆ ಮತ್ತು ರಾಜ್ಯಸಭೆಯ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣ ಮಾಡುವ ಮೂಲಕ ಸಂಸತ್ತಿನ ಬಜೆಟ್ ಅಧಿವೇಶನ ನಿನ್ನೆ ಪ್ರಾರಂಭವಾಯಿತು.ರಾಷ್ಟ್ರಪತಿ ಭಾಷಣದಲ್ಲಿ, 2023 ದೇಶಕ್ಕೆ ಐತಿಹಾಸಿಕ ವರ್ಷವಾಗಿದೆ. ದೇಶವು ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯ ವೇಗವನ್ನು ಮುಂದುವರೆಸಿದೆ ಎಂದು ಹೇಳಿದ್ದರು.
ಈ ಏಪ್ರಿಲ್‌ನಲ್ಲಿ ಪ್ರಾರಂಭವಾಗುವ 2024-25 ರ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆಯು ಶೇ.7 ರ ಸಮೀಪಕ್ಕೆ ಬರುವ ನಿರೀಕ್ಷೆಯಿದೆ ಎಂದು ಹಣಕಾಸು ಸಚಿವಾಲಯವು ಪರಿಶೀಲನಾ ವರದಿಯಲ್ಲಿ ತಿಳಿಸಿದೆ. ಭಾರತದ ಆರ್ಥಿಕತೆಯು 2022-23ರಲ್ಲಿ ಶೇ.7.2 ಮತ್ತು 2021-22ರಲ್ಲಿ ಶೇ.8.7ರಷ್ಟು ಬೆಳವಣಿಗೆ ಕಂಡಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ 2023-24 ರಲ್ಲಿ ಭಾರತದ ಆರ್ಥಿಕತೆಯು ಶೇ.7.3 ಬೆಳವಣಿಗೆ ನಿರೀಕ್ಷಿಸಲಾಗಿದೆ. ಇದು ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿದೆ.