ತನಿಷ್ಕ್ ಆಭರಣ ಸಂಸ್ಥೆಯ ವಿವಾದಾತ್ಮಕ ಜಾಹೀರಾತು: ಕ್ಷಮೆ ಕೋರುವಂತೆ ಸಿಬ್ಬಂದಿಗೆ ಬೆದರಿಕೆ

ಅಹಮದಾಬಾದ್: ‘ಲವ್‌ ಜಿಹಾದ್‌’ಗೆ ಪ್ರೇರಣೆ ನೀಡುತ್ತಿದೆ ಎನ್ನುವ ಆರೋಪದ ಕಾರಣಕ್ಕಾಗಿ ತನ್ನ ಜಾಹೀರಾತನ್ನು ಹಿಂಪಡೆದಿದ್ದ ತನಿಷ್ಕ್ ಆಭರಣ ಸಂಸ್ಥೆಯಿಂದ ಬಲವಂತವಾಗಿ ಕ್ಷಮೆ ಪಡೆಯಲಾಗಿದೆ.

‘ಕಛ್ ಜಿಲ್ಲೆಯ ಗಾಂಧಿಧಾಮ ಪಟ್ಟಣದ ತನಿಷ್ಕ್ ಷೋರೂಂಗೆ ಅ.12 ರಂದು ಇಬ್ಬರು ವ್ಯಕ್ತಿಗಳು ಭೇಟಿ ನೀಡಿದ್ದರು. ಅವರಲ್ಲೊಬ್ಬರಾದ ರಮೇಶ್ ಅಹಿರ್ ಅನ್ನುವವರು ಷೋರೂಂನ ಸಿಬ್ಬಂದಿಗೆ ಕ್ಷಮೆ ಕೋರುವಂತೆ ಹೇಳಿದ್ದರು’ ಎಂದು ಕಛ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಯೂರ್ ಪಟೇಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಅಹಿರ್ ಅವರು ಬೆದರಿಕೆಯೊಡ್ಡಿ ಕ್ಷಮಾಪಣೆ ಪತ್ರ ಬರೆಯುವಂತೆ ಬಲವಂತ ಮಾಡಿರುವುದು ಹಾಗೂ ಅದನ್ನು ಷೋರೂಂನ ಮುಂಬಾಗಿನಲ್ಲಿ ಅಂಟಿಸಲು ಸೂಚನೆ ನೀಡುತ್ತಿರುವ ವಿಡಿಯೊವೊಂದು ವೈರಲ್ ಆಗಿದೆ. ಷೋರೂಂನ ಸಿಬ್ಬಂದಿ ಅಹಿರ್ ನೀಡಿದ ಸೂಚನೆಯಂತೆ ಕ್ಷಮಾಪಣಾ ಪತ್ರ ಬರೆದಿದೆ. ‘ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾದ ತನಿಷ್ಕ್‌ನ ಅಭಿಯಾನವು ನಾಚಿಕೆಗೇಡಿನ ಸಂಗತಿಯಾಗಿದೆ. ಗಾಂಧಿಧಾಮದ ತನಿಷ್ಕ್ ಮಳಿಗೆಯು, ಸಮಗ್ರ ಕಛ್ ಜಿಲ್ಲೆಯ ಹಿಂದೂ ಸಮಾಜದ ಕ್ಷಮೆ ಕೋರುತ್ತದೆ’ ಎಂದು ಕ್ಷಮಾಪಣಾ ಪತ್ರದಲ್ಲಿ ಬರೆಯಲಾಗಿದೆ.

ಈ ನಡುವೆ ‘ಷೋರೂಂಗೆ ಭೇಟಿ ನೀಡಿ ಕ್ಷಮೆ ಕೋರಲು ಬಲವಂತಪಡಿಸಿದ್ದೆ’ ಎಂದು ರಮೇಶ್ ಅಹಿರ್ ಸ್ಥಳೀಯ ಮಾಧ್ಯಮವೊಂದಕ್ಕೆ ಧೃಢಪಡಿಸಿದ್ದಾರೆ.

‘ತನಿಷ್ಕ್ ಜಾಹೀರಾತು ನನ್ನ ಧಾರ್ಮಿಕ ಭಾವನೆಗಳ ವಿರುದ್ಧವಾಗಿದೆ ಎಂದು ನಾನು ಭಾವಿಸುತ್ತೇನೆ. ಇಡೀ ಕಛ್ ಜಿಲ್ಲೆಯಲ್ಲಿ ಇರುವುದು ಇದೊಂದೇ ಷೋರೂಂ. ಹಾಗಾಗಿ, ನೀವು ಕ್ಷಮೆಯಾಚಿಸಬೇಕೆಂದು ನಾನು ಅವರಿಗೆ ಹೇಳಿದೆ. ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ಷೋರೂಂ ಮೇಲೆ ದಾಳಿಯಾಗಿದೆ ಎನ್ನುವುದು ಸಂಪೂರ್ಣ ಸುಳ್ಳು. ನಾನೊಬ್ಬ ಸಾಧಾರಣ ವ್ಯಾಪಾರಿ. ವ್ಯಾಪಾರವನ್ನು ಹಾಳು ಮಾಡಲು ನಾನು ಎಂದಿಗೂ ಬಯಸುವುದಿಲ್ಲ. ನನ್ನ ಅಥವಾ ಮತ್ತೊಬ್ಬರ ಧರ್ಮಕ್ಕೆ ಅವಮಾನವಾಗಬಾರದು ಎಂಬುದನ್ನು ಮಾತ್ರ ನಾನು ಬಯಸುವೆ’ ಎಂದು ಅಹಿರ್ ಹೇಳಿದ್ದಾರೆ.

ಬೆದರಿಕೆ ಕರೆ: ‘ಆಭರಣದ ಷೋರೂಂಗೆ ಬೆದರಿಕೆ ಕರೆಗಳು ಬರುತ್ತಿರುವ ಕುರಿತು, ಅಲ್ಲಿನ ಸಿಬ್ಬಂದಿಯು ಪೊಲೀಸರಿಗೆ ಮಾಹಿತಿ ನೀಡಿದೆ. ಆದರೆ, ಅಧಿಕೃತ ದೂರು ಸಲ್ಲಿಕೆಯಾಗಿಲ್ಲ. ಷೋರೂಂನ ಸುತ್ತಲಿನ ಪ್ರದೇಶದಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದಾರೆ. ಭದ್ರತೆ ಒದಗಿಸಲಾಗಿದೆ. ಈವರೆಗೆ ಅಹಿತಕರ ಘಟನೆ ನಡೆದಿಲ್ಲ’ ಎಂದು ಎಸ್‌ಪಿ ಮಯೂರ್ ಪಟೇಲ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!