ಉಡುಪಿ ಶಾಸಕರು ಪ್ರಚೋದನಕಾರಿ ಹೇಳಿಕೆ ನೀಡುವುದು ಬಿಟ್ಟು ಕ್ಷೇತ್ರದ ಅಭಿವೃದ್ಧಿ ಕುರಿತು ಚಿಂತನೆ ನಡೆಸಲಿ -ಕಾಂಚನ್
ಉಡುಪಿ: ಪ್ರತಿಯೊಬ್ಬರ ಮನೆಗಳಲ್ಲಿ ಹನುಮ ಧ್ವಜವನ್ನು ಹಾಕುವುದರ ಮೂಲಕ ರಾಜ್ಯದ ಕಾಂಗ್ರೆಸ್ ಸರಕಾರದ ವಿರುದ್ದ ಪ್ರತಿಭಟಿಸಿ ಎಂಬುದಾಗಿ ಜನರನ್ನು ಪ್ರಚೋದಿಸುವ ಕೆಲಸ ಮಾಡುತ್ತಿರುವ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಅವರು ಮೊದಲು ತಮ್ಮನ್ನು ಜನ ಆಯ್ಕೆ ಮಾಡಿರುವ ಉದ್ದೇಶವನ್ನು ತಿಳಿದು ಮಾತನಾಡುವ ಕೆಲಸ ಮಾಡಲಿ.
ಕೇವಲ ಜನರನ್ನು ತನ್ನ ಪ್ರಚೋದನಕಾರಿ ಹೇಳಿಕೆಗಳ ಮೂಲಕ ಉದ್ರೇಕಿಸುವ ಕೆಲಸವನ್ನು ಬಿಟ್ಟು ಉಡುಪಿ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಕುರಿತು ಚಿಂತನೆ ನಡೆಸಿ ಅದನ್ನು ಕಾರ್ಯಗತಗೊಳಿಸಲು ಶ್ರಮಿಸಲಿ ಎಂದು ಉಡುಪಿ ನಗರಸಭಾ ವಿಪಕ್ಷ ನಾಯಕ ಹಾಗೂ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್ ಅವರು ಸಲಹೆ ನೀಡಿದ್ದಾರೆ.
ಉಡುಪಿಯಲ್ಲಿ ಯಾವುದೇ ವಿಚಾರಗಳು ಮುನ್ನಲೆ ಬಂದ ಕೂಡಲೇ ತನ್ನ ಪ್ರಚೋದನಾಕಾರಿ ಹೇಳಿಕೆಗಳ ಮೂಲಕ ಜನರನ್ನು ಉದ್ರೇಕ ಪಡಿಸುವ ಕೆಲಸವನ್ನು ಯಶ್ಪಾಲ್ ಸುವರ್ಣ ಅವರ ಮಾಡುತ್ತಿರುವುದು ಇದು ಮೊದಲೇನಲ್ಲ. ಈ ಹಿಂದೆ ಹಿಜಾಬ್ ವಿಚಾರ ಬಂದಾಗ, ಪ್ಯಾರಾಮೆಡಿಕಲ್ ಕಾಲೇಜಿನ ವೀಡಿಯೋ ಪ್ರಕರಣ, ಅಯೋಧ್ಯೆಯ ರಾಮ ಮಂದಿರ ಪ್ರತಿಷ್ಠಾಪವನೆ ವಿಚಾರದಲ್ಲಿ ಕೂಡ ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ರಜೆ ಪಡೆದುಕೊಳ್ಳಿ ಎಂಬ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವ ಮೂಲಕ ಜನರಲ್ಲಿ ಗೊಂದಲ ಮೂಡಿಸುವ ಕೆಲಸವನ್ನು ಮಾಡಿರುತ್ತಾರೆ. ಆದರೆ, ತಾವು ನಡೆಸಿಕೊಂಡು ಬರುವಂತಹ ಸಂಸ್ಥೆಗಳಾದ ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ಹಾಗೂ ದಕ್ಷಿಣ ಕನ್ನಡ ಮೀನುಗಾರಿಕಾ ಫೆಡರೇಷನ್ನ ಉದ್ಯೋಗಿಗಳಿಗೆ ರಜೆಯನ್ನು ಘೋಷಿಸಲಿಲ್ಲ.
ಈಗ ಮಂಡ್ಯದಲ್ಲಿ ನಡೆದ ಹನುಮ ಧ್ವಜ ತೆರವು ಪ್ರಕರಣವನ್ನು ಮುಂದಿಟ್ಟುಕೊಂಡು ಬಿಜೆಪಿಗರು ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ರಾಷ್ಟ್ರ ಧ್ವಜಕ್ಕೆ ಪರವಾನಿಗೆ ಪಡೆದು ಧ್ವಜಸ್ತಂಭ ನಿರ್ಮಿಸಿ ಬಳಿಕ ಅದರಲ್ಲಿ ಹನುಮ ಧ್ವಜ ಹಾರಿಸುವುದು ಕಾನೂನಿನ ಪ್ರಕಾರ ತಪ್ಪು ಎನ್ನುವ ಕನಿಷ್ಠ ಜ್ಞಾನ ಬಿಜೆಪಿಗರಿಗೆ ಇಲ್ಲದಿರುವುದು ನಾಚೀಕೆಗೇಡು. ಹನುಮ ಧ್ವಜವಾಗಲಿ ಕೇಸರಿ ಧ್ವಜವಾಗಲಿ ಹಾರಿಸುವುದು ತಪ್ಪಲ್ಲ ಆದರೆ ಅದಕ್ಕೆ ಪ್ರತ್ಯೇಕ ಧ್ವಜಸ್ತಂಭ ನಿರ್ಮಿಸಿ ಹಾರಿಸುವುದನ್ನು ಬಿಟ್ಟು ರಾಷ್ಟ್ರಧ್ವಜವನ್ನು ಹಾರಿಸುವ ಸ್ತಂಭದಲ್ಲಿ ಹಾರಿಸಿದರೆ ಎಷ್ಟು ಸರಿ?
ಕಾಂಗ್ರೆಸ್ ಪಕ್ಷವು ಎಲ್ಲಾ ಧರ್ಮವನ್ನು ಸಮಾನವಾಗಿ ಕಾಣುವ ಪಕ್ಷ. ಹಿಂದೂ ಧರ್ಮದ ಮೇಲೆ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ರೀತಿಯ ದ್ವೇಷವಿಲ್ಲ. ನಾವೂ ಕೂಡ ಈಶ್ವರ, ಕೃಷ್ಣ, ರಾಮ, ಸೀತೆ, ಹನುಮಂತ, ದುರ್ಗೆ ಸೇರಿದಂತೆ ಎಲ್ಲಾ ದೇವರನ್ನು ಆರಾಧಿಸುತ್ತೇವೆ ಆದರೆ ಯಾವತ್ತೂ ದೇವರನ್ನು ನಮ್ಮ ರಾಜಕೀಯಕ್ಕಾಗಿ ಉಪಯೋಗಿಸಿಲ್ಲ.
ಕೇವಲ ಜನರನ್ನು ಪ್ರಚೋದಿಸಿ ರಾಜ್ಯದಲ್ಲಿ ಅಶಾಂತಿ ಸೃಷ್ಟಿಸುವ ಉದ್ದೇಶದಿಂದ ಇಂತಹ ಕೆಲಸಕ್ಕೆ ಬಾರದ ವಿಚಾರದಲ್ಲಿ ಬಿಜೆಪಿಗರು ನಿಶ್ಸೀಮರು ಎಂದು ರಾಜ್ಯದ ಜನತೆ ಅರ್ಥ ಮಾಡಿಕೊಂಡಿದ್ದಾರೆ.
ರಾಜಕಾರಣದಲ್ಲಿ ಧರ್ಮ ಇರಬೇಕು ಹೊರತು ಧರ್ಮದಲ್ಲಿ ಯಾವತ್ತೂ ರಾಜಕಾರಣವನ್ನು ಎಳೆದು ತರಬಾರದು ಹಾಗೂ ರಾಜಕಾರಣಕ್ಕಾಗಿ ಯಾವತ್ತೂ ಧರ್ಮವನ್ನು ಉಪಯೋಗಿಸಬಾರದು.
ಜಿಲ್ಲೆಯಲ್ಲಿ ಐದು ಮಂದಿ ಬಿಜೆಪಿ ಶಾಸಕರಿದ್ದು ಉಡುಪಿಯಲ್ಲಿ ಆಗಬೇಕಾದ ಅಭಿವೃದ್ಧಿ ಕಾರ್ಯಗಳು ಸಾಕಷ್ಟಿದೆ.
ಡಿಸೆಂಬರ್ ತಿಂಗಳಲ್ಲಿ ಇಂದ್ರಾಳಿ ರೈಲು ಮೇಲ್ಸೇತುವೆ ಕಾಮಾಗಾರಿ ಪೂರ್ಣಗೊಳಿಸುವುದಾಗಿ ಸ್ವತಃ ಶಾಸಕ ಯಶ್ಪಾಲ್ ಸುವರ್ಣ ಅವರೇ ಮಾಧ್ಯಮ ಹೇಳಿಕೆ ನೀಡಿದ್ದು ಈ ವರೆಗೆ ಅದರ ಸುದ್ದಿಯೇ ಇಲ್ಲ ಮತ್ತು ಸಂತೆಕಟ್ಟೆ ಅಂಡರ್ ಪಾಸ್ ಕಾಮಗಾರಿ ನಿಂತು ಹೋಗಿದ್ದು ಸಾರ್ವಜನಿಕರು ಬಹಳಷ್ಟು ಕಷ್ಟ ಅನುಭವಿಸುತ್ತಿದ್ದು ವಾಹನ ಸಂಚಾರಕ್ಕೆ ಬಹಳ ತೊಂದರೆಯಾಗುತ್ತಿದೆ. ಮಳೆಗಾಲದ ಸಂದರ್ಭದಲ್ಲಿ ಸಂತೆಕಟ್ಟೆ ಅಂಡರ್ ಪಾಸ್ನ ಸ್ಥಳದಲ್ಲಿ ಭೂ ಕುಸಿತವಾಗಿ ಸ್ಥಳೀಯರು ಭಯದಿಂದ ಬದುಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಮೊದಲು ಸ್ಥಳೀಯ ಸಂಸದರೊಂದಿಗೆ ಕೂತು ಚರ್ಚಿಸಿ ಸೂಕ್ತ ಪರಿಹಾರ ನೀಡಿ. ಇಂತಹ ಹತ್ತು ಹಲವು ಸಮಸ್ಯೆಗಳು ಉಡುಪಿ ಕ್ಷೇತ್ರದಲ್ಲಿದ್ದು ಅದರ ಕುರಿತು ಶಾಸಕರು ಹೆಚ್ಚಿನ ಮುತುವರ್ಜಿ ವಹಿಸಿ ಅದಕ್ಕೆ ಪರಿಹಾರ ಕಂಡುಕೊಳ್ಳುವ ಕೆಲಸ ಮಾಡಲಿ ಎಂದು ಉಡುಪಿ ನಗರಸಭಾ ವಿಪಕ್ಷ ನಾಯಕ ಹಾಗೂ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.