ಪಕ್ಷ ಬಯಸಿದರೆ ಚುನಾವಣೆಗೆ ನಿಲ್ಲಲು ಸಿದ್ಧ: ನಾನು ಅರ್ಹ ಎಂದು ಕಂಡರೆ ಪಕ್ಷ ಟಿಕೆಟ್ ಕೊಡುತ್ತದೆ- ಪ್ರಮೋದ್ ಮಧ್ವರಾಜ್
ಉಡುಪಿ ಜ.30 : ಪಕ್ಷ ಬಯಸಿದರೆ ಚುನಾವಣೆಗೆ ನಿಲ್ಲಲು ಸಿದ್ಧ. ನಾನು ಅರ್ಹ ಎಂದು ಕಂಡರೆ ಪಕ್ಷ ನನಗೆ ಟಿಕೆಟ್ ಕೊಡುತ್ತದೆ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ತಮ್ಮ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.
ಈ ವಿಚಾರವಾಗಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾರ್ಯಕರ್ತರು ಮತ್ತು ಜನರ ಅಭಿಪ್ರಾಯ ನನ್ನ ಕಡೆಗೆ ಇದೆ ಎಂಬ ಮಾಹಿತಿ ಇದೆ. ಟಿಕೆಟ್ ಗೆ ಎಲ್ಲರಿಗೂ ಪ್ರಯತ್ನ ಮಾಡುವ ಹಕ್ಕು ಇದೆ. ನಾನು ಆಕಾಂಕ್ಷಿ ಎಂದು ನಾಯಕರ ಬಳಿ ಹೇಳಿದ್ದೇನೆ. ಪಕ್ಷ ಬಯಸಿದರೆ ನಾನು ಚುನಾವಣೆಗೆ ನಿಲ್ಲಲು ಸಿದ್ಧ. ಪಕ್ಷ ಯಾರಿಗೆ ಟಿಕೆಟ್ ಕೊಟ್ಟರೂ ನಾನು ಸಂಪೂರ್ಣವಾಗಿ ಬೆಂಬಲಿಸುತ್ತೇನೆ. ಪಕ್ಷಕ್ಕೆ ನಾನು ಅರ್ಹ ಎಂದು ಕಂಡರೆ ನನಗೆ ಟಿಕೆಟ್ ಕೊಡುತ್ತದೆ. ಇಲ್ಲವಾದಲ್ಲಿ ಬೇರೆಯವರು ಅರ್ಹರು ಇದ್ದರೆ ಅವರಿಗೆ ಟಿಕೆಟ್ ಕೊಡುತ್ತದೆ ಎಂದರು.
ಚುನಾವಣೆಯಲ್ಲಿ ಎದುರಾಳಿಯನ್ನು ಲಘುವಾಗಿ ಪರಿಗಣಿಸುವುದು ಸರಿಯಲ್ಲ ಎಂದ ಅವರು, ಗುಜರಾತ್ ನಿಂದ ಪಶ್ಚಿಮ ಬಂಗಾಳದವರೆಗೆ ಒಬ್ಬನೇ ಒಬ್ಬ ಮೀನುಗಾರ ಸಂಸದ ಇಲ್ಲ. ದೇಶದ ಮೀನುಗಾರರ ಸಮಸ್ಯೆಯನ್ನು ಕೇಂದ್ರ ಸರ್ಕಾರದ ಮುಂದೆ ಸಂಸತ್ ನಲ್ಲಿ ಮಾತನಾಡಲಿಕ್ಕೆ ಯೋಗ್ಯ ವ್ಯಕ್ತಿ ಬೇಕು ಎಂಬುದು ಮೀನುಗಾರರಿಗೆ ಮನವರಿಕೆ ಆಗಿದೆ. ಮಾಧ್ಯಮಗಳ ಮೂಲಕ ಈ ವಿಚಾರ ನನ್ನ ಗಮನಕ್ಕೆ ಬಂದಿದೆ. ಆರು ತಿಂಗಳಿಂದ ನಾನು ಪ್ರವಾಸ ಮಾಡುತ್ತಿದ್ದೇನೆ.
ರಾಜ್ಯದ 24 ಜಿಲ್ಲೆಯಲ್ಲಿ ಮೀನುಗಾರ ಮುಖಂಡರ ಸಭೆ ಮಾಡಿದ್ದೇನೆ. ಉಡುಪಿ ಚಿಕ್ಕಮಗಳೂರಿನಲ್ಲಿ 6000 ಬಿಜೆಪಿಯ ಕಾರ್ಯಕರ್ತರು ಮುಖಂಡರನ್ನು ಭೇಟಿ ಮಾಡಿದ್ದೇನೆ ಎಂದು ಹೇಳಿದರು.
ಹಾಗೂ ಮೊಗವೀರ ಮಹಾಜನ ಸಂಘದಲ್ಲಿ 12 ವರ್ಷ ಅಧ್ಯಕ್ಷನಾಗಿದ್ದೆ. ಕರ್ನಾಟಕ ಕರಾವಳಿ ಕ್ರಿಯಾ ಸಮಿತಿ ನ್ಯಾಷನಲ್ ಫಿಶ್ ವರ್ಕರ್ಸ್ ಫಾರಂ ನಲ್ಲಿ ಕೆಲಸ ಮಾಡಿದ್ದೇನೆ ಒಳನಾಡು ಮೀನುಗಾರಿಕಾ ನೀತಿಯನ್ನು ಕೂಡ ನಾನು ರೂಪಿಸಿದ್ದಾಗಿದೆ. ಮೀನುಗಾರಿಕೆಗೆ ನಾನು ತಂದೆ ತಾಯಿ ನೀಡಿರುವ ಸೇವೆ ಪರಿಗಣಿಸಬಹುದು. ಮೀನುಗಾರರ ಸಮಸ್ಯೆಯನ್ನು ಸರ್ಕಾರಗಳ ಮುಂದೆ ಸಮರ್ಥವಾಗಿ ಮಂಡಿಸುವ ಅನುಭವ ಜನಪ್ರತಿನಿಧಿ ಆದವರಿಗೆ ಬೇಕಾಗುತ್ತದೆ. ಮೀನುಗಾರರು ವಿಶ್ವಾಸ ಇಟ್ಟು ಇಡೀ ರಾಜ್ಯದಿಂದ ಬೇಡಿಕೆ ಬರುತ್ತಿದೆ ಆದ್ದರಿಂದ ಬಿಜೆಪಿ ಹಿಂದುಳಿದ ವರ್ಗಕ್ಕೆ ನ್ಯಾಯ ಒದಗಿಸಿ ಕೊಡುತ್ತದೆ ಎಂಬ ವಿಶ್ವಾಸ ಇದೆ ಎಂದು ಹೇಳಿದರು.
ಇದೇ ವೇಳೆ ಮಂಡ್ಯದಲ್ಲಿ ಹನುಮಧ್ವಜ ಕೆಳಗಿಳಿಸಿದ ಪ್ರಕರಣ ಅತ್ಯಂತ ಖಂಡನಿಯ ಎಂದ ಅವರು, ಹನುಮ ಧ್ವಜ ಮತ್ತು ಹಿಂದೂ ಧರ್ಮದ ಸಂಕೇತದ ಧ್ವಜಗಳು ಅಭಿಮಾನ ಭಕ್ತಿಯಿಂದ ಜನ ಹಾಕುತ್ತಾರೆ. ಅದಕ್ಕೆ ಅವಮಾನ ಮಾಡುವ ಕೆಲಸ ಯಾರು ಮಾಡಬಾರದು ಅವಮಾನ ಮಾಡಿದರೆ ಅದು ಖಂಡನೀಯ ಎಂದರು.