ಕಿದಿಯೂರು ಹೊಟೇಲ್ ಕಾರಣಿಕ ಶ್ರೀನಾಗ ಸಾನ್ನಿಧ್ಯ- ಗಂಗಾ ಆರತಿ ಕಣ್ತುಂಬಿಕೊಂಡ ಭಕ್ತರು

ಉಡುಪಿ ಜ.30: ಕಿದಿಯೂರು ಹೊಟೇಲ್ ಎದುರುಗಡೆ ವಿಶೇಷವಾಗಿ ರಚಿಸಲಾದ ವೇದಿಕೆಗಳಲ್ಲಿ ವಾರಾಣಸಿಯ ಪರಿಣತ ಅರ್ಚಕರಿಂದ ಕಾಶೀ ವಿಶ್ವನಾಥನಿಗೆ ಗಂಗಾ ನದಿ ತಟದಲ್ಲಿ ಆರತಿ ಬೆಳಗುವ ಮಾದರಿಯಲ್ಲೇ ವೈಶಿಷ್ಟ್ಯ ಪೂರ್ಣ ಸಾಮೂಹಿಕ ಗಂಗಾರತಿ ನಾಲ್ಕನೆಯ ದಿನವಾದ ಸೋಮವಾರ ಗಮನ ಸೆಳೆಯಿತು. ಭಗವತ್ ಭಕ್ತರು ಗಂಗಾ ಆರತಿ ನೋಡಿ‌ಕಣ್ತುಂಬಿಕೊಂಡರು.

ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಈಶ ವಿಟ್ಠಲದಾಸ ಸ್ವಾಮೀಜಿ ಸಕಾರಾತ್ಮಕ ಚಿಂತನೆಯ ಜತೆಗೆ ಜೀವನದ ಓಟದಲ್ಲಿ ದೇವರು ಮತ್ತು ಗುರುವಿನ ಹಿಂದೆ ಓಡಿದಾಗ ಮಾತ್ರ ‘ಪ್ರಗತಿ’ ಸಿಗುತ್ತದೆ ಎಂದು ಹೇಳಿದರು.

ಕಿದಿಯೂರು ಹೊಟೇಲ್ಸ್‌ನ ಕಾರಣಿಕ ಶ್ರೀ ನಾಗ ಸಾನ್ನಿಧ್ಯದಲ್ಲಿ ಜ.31ರಂದು ನಡೆಯಲಿರುವ ತೃತೀಯ ಅಷ್ಟಪವಿತ್ರ ನಾಗಮಂಡಲೋತ್ಸವದ ಅಂಗವಾಗಿ ಸೋಮವಾರ ಶ್ರೀವಿಶ್ವೇಶತೀರ್ಥ ವೇದಿಕೆಯಲ್ಲಿ ನಡೆದ ಧಾರ್ಮಿಕ ಸಭೆಯನ್ನು ಪಂಚ ದೀವಟಿಗೆ ಬೆಳಗಿಸಿ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

ಕಿದಿಯೂರು ನಾಗಮಂಡಲೋತ್ಸವು ಹೊಟೇಲ್ ನಮ್ಮೆಲ್ಲರನ್ನು ಒಂದು ಮಾಡಿದೆ. ನಾಗಾರಾಧನೆ, ದೈವ, ದೇವರ ಆರಾಧನೆ ನಡೆಯುತ್ತಿರಬೇಕು. ಜೀವನದ ಪ್ರತೀ ಕ್ಷಣವೂ ಸಕಾರಾತ್ಮಕ ಚಿಂತನೆಯಿಂದ ನಮ್ಮನ್ನೇ ನಾವು ಅಮೂಲ್ಯ ಆಸ್ತಿ ಎಂಬ ನೆಲೆಯಲ್ಲಿ ಬದುಕಬೇಕು. ದೇವರ ಉಪಾಸನೆ, ಧಾರ್ಮಿಕ ಚಿಂತನೆ ಹಾಗೂ ಸಕಾರಾತ್ಮಕತೆ ಮಕ್ಕಳಲ್ಲಿ ಬೆಳೆಸಬೇಕು ಎಂದರು.

ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಮಾತನಾಡಿ, ಭುವನೇಂದ್ರ ಕಿದಿಯೂರು ಅವರಿಗೆ ಸಂಪತ್ತಿನ ಅಧಿದೇವತೆಯಾಗಿರುವ ನಾಗದೇವರ ಅನುಗ್ರಹವಾಗಿದೆ. ಸಾಮಾಜಿಕ ಕಳಕಳಿ, ಸೇವೆಯ ಮೂಲಕ ಸಾರ್ಥಕ್ಯ ಕಂಡುಕೊಳ್ಳುತ್ತಿದ್ದಾರೆ ಎಂದು ಹೇಳಿದರು. ವಾಸ್ತುತಜ್ಞ ವಿ. ಸುಬ್ರಹ್ಮಣ್ಯ ಭಟ್ ಗುಂಡಿಬೈಲು ಉಪನ್ಯಾಸ ನೀಡಿ, ದಾನಗಳಲ್ಲಿ ಅನ್ನದಾನವೇ ಶ್ರೇಷ್ಠ ಮತ್ತು ಅನ್ನದಾನದಿಂದ ಮಾತ್ರ ಎಲ್ಲರನ್ನು ತೃಪ್ತಿಪಡಿಸಲು ಸಾಧ್ಯ ಎಂದರು.

ನಾಗಮಂಡಲೋತ್ಸವ ಆಯೋಜನ ಸಮಿತಿ ಗೌರವಾಧ್ಯಕ್ಷ ಡಾ| ಜಿ. ಶಂಕರ್ ಅಧ್ಯಕ್ಷತೆ ವಹಿಸಿದ್ದರು. ಕಿದಿಯೂರು ಹೊಟೇಲ್‌ನ ಎಂ.ಡಿ ಭುವನೇಂದ್ರ ಕಿದಿಯೂರು, ಆಯೋಜನ ಸಮಿತಿ ಪ್ರಧಾನ ಕಾರ್ಯದರ್ಶಿ ಯುವರಾಜ್ ಸಾಲ್ಯಾನ್ ಮಸ್ಕತ್, ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ, ನಾಗರಾಜ ಶೆಟ್ಟಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ. ಉದಯಕುಮಾರ್ ಶೆಟ್ಟಿ ನಗರಸಭೆ ವಿಪಕ್ಷ ನಾಯಕ ರಮೇಶ್ ಕಾಂಚನ್, ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ವೈದ್ಯ ಡಾ। ರವಿರಾಜ ಆಚಾರ್ಯ, ಕೊಡವೂರು ಶ್ರೀ ಸಾಯಿಬಾಬಾ ಮಂದಿರದ ಆಡಳಿತ ಟ್ರಸ್ಟಿ ದಿವಾಕರ ಶೆಟ್ಟಿ ಕಟಪಾಡಿ ವಿಶ್ವನಾಥ ಕ್ಷೇತ್ರದ ಅಧ್ಯಕ್ಷ ಬಿ.ಎನ್. ಶಂಕರ ಪೂಜಾರಿ, ಕಾರ್ತಿಕ್ ಗ್ರೂಪ್‌ನ ಆಡಳಿತ ನಿರ್ದೇಶಕ ಹರಿಯಪ್ಪ ಕೋಟ್ಯಾನ್, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ದಯಾನಂದ ಸುವರ್ಣ, ದಿನೇಶ್ ಪುತ್ರನ್, ಉಚ್ಚಿಲ ದೇವಸ್ಥಾನದ ಅರ್ಚಕರಾದ ರಾಘವೇಂದ್ರ ಉಪಾಧ್ಯಾಯ ಉಪಸ್ಥಿತರಿದ್ದರು.

ನಾಗಮಂಡಲೋತ್ಸವ ಸಮಿತಿ ಉಪಾಧ್ಯಕ್ಷ ಗಣೇಶ್ ರಾವ್ ಸ್ವಾಗತಿಸಿ, ಸತೀಶ್ ಕೊಡವೂರು ವಂದಿಸಿ, ಸತೀಶ್ ಚಂದ್ರ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!