ಉಡುಪಿ: ರಿಕ್ಷಾಗಳಿಗೆ ಹಾನಿಗೈಯುತ್ತಿದ್ದ ದುಷ್ಕರ್ಮಿಯ ಹಿಡಿದ ಸಾರ್ವಜನಿಕರು
ಉಡುಪಿ: ಮನೆ ಸಮೀಪ ನಿಲ್ಲಿಸಿದ್ದ ರಿಕ್ಷಾದ ಬಿಡಿಭಾಗಗಳನ್ನ ಹಾನಿ ಮಾಡುತ್ತಿದ್ದ ವ್ಯಕ್ತಿಯನ್ನ ಸಾರ್ವಜನಿಕರು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಉಡುಪಿ ಪಾಡಿಗಾರಿನ ಎಸ್ ಟಿ ಕಾಲನಿಯಲ್ಲಿ ನಡೆದಿದೆ.
ಗೋಪಾಲಕೃಷ್ಣ ಸಾಮಗ ಎಂಬವರ ಜಾಗದಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿರುವ ಬಾದಾಮಿ ಮೂಲದ ವಲಸೆ ಕಾರ್ಮಿಕ ಕುಟುಂಬದ ಅಭಿಷೇಕ್ ಎಂಬ ವ್ಯಕ್ತಿ ಸದ್ಯ ಕೃತ್ಯ ನಡೆಸುವಾಗಲೇ ಸಿಕ್ಕಿಬಿದ್ದಿದ್ದಾನೆ.
ಕಳೆದ ಮೂರು ತಿಂಗಳಿಂದ ಈ ಕಾಲನಿಯಲ್ಲಿ ನಿಲ್ಲಿಸಿದ್ದ ರಿಕ್ಷಾದ ಬಿಡಿಭಾಗಗಳು ಹಾನಿಯಾಗುತ್ತಿತ್ತು. ಈ ಬಗ್ಗೆ ಎಷ್ಟೇ ಗಮನ ನೀಡಿದರೂ ಆತನ ಹಿಡಿಯಲು ಸಾಧ್ಯವಾಗುತ್ತಿರಲಿಲ್ಲ.
ಆದರೆ ಕಳೆದ ರಾತ್ರಿ ಕಾದು ಕುಳಿತಿದ್ದ ಆಟೋ ಚಾಲಕರು ಹಾಗೂ ಕಾಲನಿ ನಿವಾಸಿಗಳ ಕೈಗೆ ಈತ ಸಿಕ್ಕಿಬಿದ್ದಿದ್ದಾನೆ. ಸ್ಥಳೀಯ ಮನೆಯೊಂದರ ಮಹಡಿ ಮೇಲೆ ಅಡಗಿ ಕುಳಿತಿದ್ದ ರಿಕ್ಷಾ ಚಾಲಕರ ಕಣ್ಣೆದುರೇ ಆತ ಕೈಯಿಂದ ನಂಬರ್ ಪ್ಲೇಟ್ ಹಾನಿ ಮಾಡಿ ಹೋಗುತ್ತಿದ್ದಾಗಲೇ ಸಿಕ್ಕಿಬಿದ್ದಿದ್ದಾನೆ. ಕೂಡಲೇ ಆತನನ್ನ ಹಿಡಿಯಲಾಯಿತು.
ಕಳೆದ ಮೂರು ತಿಂಗಳಿನಿಂದ ಸಾವಿರಾರು ರೂಪಾಯಿ ನಷ್ಟವನ್ನ ಎದುರಿಸಿದ ಆಟೊ ಚಾಲಕರು ಹಾಗೂ ತಮ್ಮ ಕಾಲನಿಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದ ಕಾರಣ ಆರೋಪಿಯ ಮೇಲೆ ಆಕ್ರೋಶ ವ್ಯಕ್ತವಾಗಿ ಪೊಲೀಸರಿಗೆ ಒಪ್ಪಿಸಿ ದೂರು ನೀಡಿದ್ದಾರೆ. ಆಟೊ ಚಾಲಕರ ನಷ್ಟವನ್ನ ಆರೋಪಿಯ ಪರ ಸಂಬಂಧಿಕರು ಬರಿಸಿದ್ದು ಮತ್ತೊಮ್ಮೆ ಕೃತ್ಯ ನಡೆಸದಂತೆ ಮುಚ್ಚಳಿಕೆ ಬರೆಸಿ ಕಳುಹಿಸಿದ್ದಾರೆ ನಗರ ಠಾಣಾ ಪೊಲೀಸರು.