ಮಂಡ್ಯ ಹನುಮ ಧ್ವಜ ಘರ್ಷಣೆ ವಿವಾದ- ಬಿಜೆಪಿ ಪ್ರತಿಭಟನೆ, ಹಲವರು ವಶಕ್ಕೆ

ಬೆಂಗಳೂರು: ಮಂಡ್ಯದ ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ತೆರವುಗೊಳಿಸಿದ ಪ್ರಕರಣ ಖಂಡಿಸಿ ಸೋಮವಾರ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ ನಡೆಯುತ್ತಿದೆ.

ಇದರಂತೆ ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲೂ ಪ್ರತಿಪಕ್ಷ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಪ್ರತಿಭಟನೆ ವೇಳೆ ಭಾರೀ ಹೈಡ್ರಾಮಾ ಕಂಡುಬಂದಿತು. ರಾಷ್ಟ್ರಧ್ವಜಕ್ಕೆ ಸರ್ಕಾರದಿಂದ ಅಪಮಾನ ಹಾಗೂ ಹನುಮ ಧ್ವಜ ತೆರವುಗೊಳಿಸಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಲಾಗುತ್ತಿದೆ.

ಪ್ರತಿಭಟನೆ ಹಿನ್ನೆಲೆಯಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದು, ಐವರು ಇನ್ಸ್ಪೆಕ್ಟರ್‌ಗಳ ನೇತೃತ್ವದಲ್ಲಿ ಬಿಗಿ ಭದ್ರತೆ ಆಯೋಜಿಸಲಾಗಿದೆ. ಪ್ರತಿಭಟನೆಗೆ ಈಗಾಗಲೇ ಪೊಲೀಸರು ಅನುಮತಿ ನಿರಾಕರಿಸಿ ನೊಟೀಸ್ ಜಾರಿ ಮಾಡಲಾಗಿದ್ದಾರೆ. ಆದರೂ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು, ಶಾಸಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಬ್ಯಾರಿಕೇಡ್ ಮತ್ತು ಪೊಲೀಸ್ ದಿಗ್ಬಂಧನದ ನಡುವೆ ಪ್ರತಿಭಟನೆ ನಡೆಸುತ್ತಿದ್ದಾರೆ.

ಈ ವೇಳೆ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದಲ್ಲದೇ ಜೈಶ್ರೀರಾಮ್ ಘೋಷಣೆಮೊಳಗಿಸುತ್ತಾ ಪ್ರತಿಭಟನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ತಳ್ಳಾಟ, ನೂಕಾಟವೂ ನಡೆದಿದ್ದು, ನಂತರ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದಾರೆಂದು ತಿಳಿದುಬಂದಿದೆ.

ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು, ಅಶೋಕ್ ಆಗಮಿಸುವ ಮೊದಲೇ ಪ್ರತಿಭಟನೆ ಮುಗಿದುಹೋಗಿದೆ. ಅಶೋಕ್ ಆಗಮನದ ಮೊದಲೇ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆಂದು ಹೇಳಲಾಗುತ್ತಿದೆ.

ಏನಿದು ವಿವಾದ?
ಮಂಡ್ಯ ಜಿಲ್ಲೆ ಕೆರಗೋಡು ಎಂಬಲ್ಲಿ ಗ್ರಾಮಸ್ಥರು ಮತ್ತು ಹಿಂದೂ ಸಂಘಟನೆ ಕಾರ್ಯಕರ್ತರು 108 ಅಡಿ ಎತ್ತರದ ಧ್ವಜ ಸ್ತಂಭದಲ್ಲಿ ಹನುಮ ಧ್ವಜ ವನ್ನು ಹಾರಿಸಿದ್ದರು. ಈ ಧ್ವಜವನ್ನು ತೆರವುಗೊಳಿಸಿದ ಪೊಲೀಸರ ಕ್ರಮ ಈಗ ಟೀಕೆಗೆ ಒಳಗಾಗಿದ್ದು, ಪ್ರತಿಭಟನೆಯೂ ವ್ಯಕ್ತವಾಗಿದೆ.

ಅಯೋಧ್ಯೆ ರಾಮ ಮಂದಿರದಲ್ಲಿ ಬಾಲರಾಮ ಪ್ರಾಣಪ್ರತಿಷ್ಠಾ ಕಾರ್ಯಕ್ರಮದ ನಿಮಿತ್ತ ಜನವರಿ 22ರಂದು ಕೆರೆಗೋಡು ಗ್ರಾಮಸ್ಥರು ಗ್ರಾಮದ 108 ಅಡಿ ಎತ್ತರದ ಧ್ವಜಸ್ತಂಭದಲ್ಲಿ ಹನುಮ ಧ್ವಜ ಹಾರಿಸಲು ತೀರ್ಮಾನಿಸಿದರು. ಗ್ರಾಮ ಪಂಚಾಯಿತಿಗೆ ಈ ಕುರಿತು ಶ್ರೀ ಗೌರಿಶಂಕರ ಸೇವಾ ಟ್ರಸ್ಟ್ ಮೂಲಕ ಮನವಿಯನ್ನೂ ಸಲ್ಲಿಸಿದರು. ಆದರೆ, ಗ್ರಾಮ ಪಂಚಾಯಿತಿಯು “ರಾಷ್ಟ್ರ ಧ್ವಜ ಮತ್ತು ನಾಡಧ್ವಜ” ಹೊರತುಪಡಿಸಿ ಯಾವುದೇ ಧಾರ್ಮಿಕ/ ರಾಜಕೀಯ ಧ್ವಜವನ್ನು ಹಾರಿಸುವಂತಿಲ್ಲ ಎಂಬ ಒಕ್ಕಣೆಯೊಂದಿಗೆ ಜನವರಿ 19ರಂದು ಅನಮತಿ ಪತ್ರ ನೀಡಿದೆ. ಆದಾಗ್ಯೂ, ಗ್ರಾಮಸ್ಥರು ಮತ್ತು ಹಿಂದೂ ಕಾರ್ಯಕರ್ತರು ಹನುಮ ಧ್ವಜವನ್ನು ಹಾರಿಸಿದ್ದಾರೆ.

ಈ ಬೆಳವಣಿಗೆ ಬೆನ್ನಲ್ಲೆ, ಗ್ರಾಮ ಪಂಚಾಯಿತಿಯ ಅಧೀನದ ಧ್ವಜಸ್ತಂಭದಲ್ಲಿ ಹನುಮ ಧ್ವಜ ಹಾರಿಸಿದ್ದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದ್ದರು. ಈ ವಿಚಾರ ಗ್ರಾಮ ಪಂಚಾಯತ್​ ಸಾಮಾನ್ಯ ಸಭೆಯಲ್ಲಿ ಚರ್ಚೆಯಾಗಿತ್ತು. 22 ಸದಸ್ಯ ಬಲದ ಗ್ರಾಮ ಪಂಚಾಯಿತಿಯಲ್ಲಿ ಹನುಮ ಧ್ವಜ ಹಾರಾಟಕ್ಕೆ 20 ಸದಸ್ಯರು ಬೆಂಬಲ ವ್ಯಕ್ತಪಡಿಸಿದರು. ಬಳಿಕ ಗ್ರಾಮ ಪಂಚಾಯತ್​ ಸದಸ್ಯರು ನಡಾವಳಿ ರಚಿಸಿ, ವಿವಾದ ಇತ್ಯರ್ಥ ಪಡಿಸಿದ್ದರು.

ಸರ್ಕಾರಿ ಜಾಗದಲ್ಲಿ ಹನುಮ ಧ್ವಜ ಹಾರಿಸಲಾಗಿದೆ ಇದನ್ನು ತೆರವುಗೊಳಿಸಬೇಕು ಎಂದು ಮಂಡ್ಯ ಜಿಲ್ಲಾಡಳಿತವು ತಾಲೂಕು ಆಡಳಿತಕ್ಕೆ ಮೌಖಿಕ ಆದೇಶ ನೀಡಿತ್ತು. ಅದರಂತೆ ಹನುಮ ಧ್ವಜ ತೆರವು ಮಾಡಲು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವೀಣಾ ಅವರು ಅಧಿಕಾರಿಗಳೊಂದಿಗೆ ಗ್ರಾಮಕ್ಕೆ ಆಗಮಿಸಿದ್ದರು. ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ ಕಾರಣ, ಹನುಮ ಧ್ವಜ ಇಳಿಸದೇ ಅವರು ಶನಿವಾರ (ಜ.27) ರಾತ್ರಿ ಹಿಂದಿರುಗಿದ್ದರು.

ಆದರೆ, ಜನವರಿ 28ರ ನಸುಕಿನ ಜಾವ 3 ಗಂಟೆಗೆ ಗ್ರಾಮಕ್ಕೆ ಮಂಡ್ಯ ಎಸಿ ಶಿವಮೂರ್ತಿ, ತಹಶೀಲ್ದಾರ್ ಶಿವಕುಮಾರ್ ಬಿರಾದರ್ ಆಗಮಿಸಿ ಧ್ವಜ‌ ತೆರವುಗೊಳಿಸಲು ಯತ್ನಿಸಿದ್ದರು. ಸ್ಥಳಕ್ಕೆ ಪೊಲೀಸರು ಆಗಮಿಸಿದ್ದರು. ಈ ವಿಚಾರ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಿದ್ದರು. ಅಧಿಕಾರಿಗಳ ವಿರುದ್ಧ ಪ್ರತಿಭಟಿಸಿದರು. ಅಧಿಕಾರಿಗಳು ಪ್ರತಿಭಟನಾಕಾರರ ಮನವೊಲಿಸಲು ಯತ್ನಿಸಿದರಾದರೂ ಫಲ ನೀಡಲಿಲ್ಲ. ಕೂಡಲೆ ಗ್ರಾಮದಲ್ಲಿ 144 ಸೆಕ್ಷನ್​ ಜಾರಿಗೊಳಿಸಿ, ಗುಂಪು ಚದುರಿಸಲು ಲಾಠಿ ಚಾರ್ಜ್​ ಮಾಡಲಾಯಿತು. ಇಷ್ಟಾದ ಬಳಿಕ ಪೊಲೀಸರು ಹನುಮ ಧ್ವಜವನ್ನು ತೆರವುಗೊಳಿಸಿದರು.

ಇದು ಗ್ರಾಮಸ್ಥರನ್ನು ಕೆರಳಿಸಿತು. ಗ್ರಾಮಸ್ಥರು ಮತ್ತೆ ಬೀದಿಗಿಳಿದು ರಸ್ತೆಯಲ್ಲೇ ಅಡುಗೆ ಮಾಡುತ್ತ ಪ್ರತಿಭಟನೆ ನಡೆಸಲು ಮುಂದಾದರು. ಈ ಹಂತದಲ್ಲಿ ಪೊಲೀಸರು ಗ್ರಾಮಸ್ಥರು ತಂದಿದ್ದ ನೀರನ್ನು ರಸ್ತೆ ಸುರಿದು ಅವರನ್ನು ಚದುರಿಸಲು ಪ್ರಯತ್ನಿಸಿದರು. ಇದೇ ವೇಳೆ, ಗ್ರಾಮಸ್ಥರು ಶಾಸಕ ರವಿಕುಮಾರ್ ಅವರ ಫ್ಲೆಕ್ಸ್‌ಗೆ ಚಪ್ಪಲಿ ಹಾರ ಹಾಕಿ ಆಕ್ರೋಶ ಹೊರಹಾಕಿದರು. ಇಷ್ಟಾದ ಬಳಿಕ ಗ್ರಾಮಸ್ಥರು, ಹಿಂದೂ ಕಾರ್ಯಕರ್ತರು ಸಭೆ ನಡೆಸಿ ಮನೆ-ಮನೆಗೆ ಹನುಮ ಧ್ವಜ ನೀಡಿ, ಪ್ರತಿ ಮನೆಯ ಮೇಲೂ ಹನುಮ ಧ್ವಜ ಹಾರಿಸಿದರು.

Leave a Reply

Your email address will not be published. Required fields are marked *

error: Content is protected !!