‘ಬಾವುಟ ಹಾರಿಸೋಕೆ ನನ್ನ ವಿರೋಧ ಇಲ್ಲ, ಚುನಾವಣೆ ಹತ್ತಿರ ಬಂದಾಗ ಜನರಿಗೆ ಕುಮ್ಮಕ್ಕು ನೀಡಲು ಬಿಜೆಪಿ ಯತ್ನ’: ಸಿಎಂ ಸಿದ್ದರಾಮಯ್ಯ
ಮಂಡ್ಯ: ಜಿಲ್ಲೆಯ ಕೆರಗೋಡು ಗ್ರಾಮದ ಸರ್ಕಾರಿ ಜಾಗದಲ್ಲಿ ಅಳವಡಿಸಲಾಗಿದ್ದ ಹನುಮ ಧ್ವಜ ಕೆಳಗಿಳಿಸಿ, ರಾಷ್ಟ್ರಧ್ವಜ ಹಾರಿಸಿದ ತಾಲೂಕು ಅಧಿಕಾರಿಗಳ ಕ್ರಮ ಭಾರೀ ವಿವಾದಕ್ಕೆ ಕಾರಣವಾಗಿದ್ದು, ಮಂಡ್ಯದಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.
ಪರಿಸ್ಥಿತಿ ಉದ್ವಿಗ್ನಗೊಂಡಿರುವ ಹಿನ್ನೆಲೆಯಲ್ಲಿ ಕೆರಗೋಡಿ ಗ್ರಾಮದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಈ ಮಧ್ಯೆ ಘಟನೆ ಖಂಡಿಸಿ ಇಂದು ಕೆರಗೋಡಿ ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಬಿಜೆಪಿ ಪ್ರತಿಭಟನೆ ನಡೆಸುತ್ತಿದ್ದು, ಪೊಲೀಸರು ಹಲವರನ್ನು ಬಂಧಿಸಿದ್ದಾರೆ.
ಮಂಡ್ಯ ಪ್ರತಿಭಟನೆ ಬಗ್ಗೆ ಇಂದು ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಇಲ್ಲಿ ನನ್ನ ಪ್ರಶ್ನೆಯೆಂದರೆ ಬಿಜೆಪಿ ಜೆಡಿಎಸ್ ನವರನ್ನು ಜನರನ್ನು ಏಕೆ ಪ್ರಚೋದಿಸುತ್ತಿದ್ದಾರೆ ಯಾವ ಹಿತಕ್ಕಾಗಿ ಹೀಗೆ ಮಾಡುತ್ತಿದ್ದಾರೆ. ಯಾವ ಉದ್ದೇಶಕ್ಕೆ ಜನರನ್ನು ಪ್ರಚೋದಿಸುತ್ತಿದ್ದಾರೆ ಎಂದು ಕೇಳಿದರು.
ರಾಷ್ಟ್ರಧ್ವಜ, ತ್ರಿವರ್ಣ ಧ್ವಜ ಹಾರಿಸಲು ಅನುಮತಿ: ಚುನಾವಣೆ ಹತ್ತಿರ ಬರುತ್ತಿರುವಾಗ ಅನಗತ್ಯವಾಗಿ ಬಿಜೆಪಿಯವರು ಪ್ರತಿಭಟನೆ ಮಾಡುತ್ತಿದ್ದಾರೆ. ನಮಗೆ ಯಾವ ಅಜೆಂಡಾಕ್ಕೂ ವಿರೋಧ ಇಲ್ಲ. ಬಿಜೆಪಿಯವರೇ ಇದನ್ನೆಲ್ಲಾ ಅನಗತ್ಯವಾಗಿ ಸೃಷ್ಟಿ ಮಾಡುತ್ತಿರುವುದು. ರಾಷ್ಟ್ರಧ್ವಜ ಮತ್ತು ಕನ್ನಡ ಬಾವುಟ ಹಾರಿಸೋದಾಗಿ ಅನುಮತಿ ಪಡೆದುಕೊಂಡಿದ್ದರು. ಯಾವುದಕ್ಕೆ ಅನುಮತಿ ಪಡೆದುಕೊಂಡಿದ್ದಾರೋ ಆ ಬಾವುಟ ಹಾರಿಸಬೇಕು ಅಲ್ಲವೇ ಎಂದು ಸಿಎಂ ಪ್ರಶ್ನೆ ಮಾಡಿದರು.
ಬಿಜೆಪಿಯವರೇ ಪ್ರಚೋದನೆ ಮಾಡುತ್ತಿದ್ದು, ಇವರು ಯಾಕೆ ಪ್ರತಿಭಟನೆ ಮಾಡುತ್ತಿದ್ದಾರೆ, ಪಡೆದುಕೊಂಡಿರುವ ಅನುಮತಿ ಪ್ರಕಾರ ನಡೆದುಕೊಂಡಿದ್ದರೆ ಜಿಲ್ಲಾಡಳಿಯ ಮಧ್ಯ ಪ್ರವೇಶ ಮಾಡುತ್ತಿರಲಿಲ್ಲ ಎಂದು ಸಿಎಂ ಹೇಳಿದರು.
ಸಿದ್ದರಾಮಯ್ಯ ಹಿಂದೂ ವಿರೋಧಿ ಎಂಬ ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದ ಸಿಎಂ, ಅವರಿಗೆ ನನ್ನ ಮೇಲೆ ಬೇರೆ ಏನು ಇಲ್ಲವಲ್ಲ ಹೇಳೋದಕ್ಕೆ ಅದಕ್ಕೆ ಹಿಂದೂ ವಿರೋಧಿ ಎಂದು ಹೇಳುತ್ತಿದ್ದಾರೆ, ನಾನು ಎಲ್ಲಾ ಜನರನ್ನು ಪ್ರೀತಿಸುವವನು ಎಂದರು.
ಸಹಬಾಳ್ವೆ ಮತ್ತು ಸಹಿಷ್ಣುತೆ: I am a Hindu but I love all people, From all religions. ಜಾತ್ಯತೀತತೆ ಎಂದರೆ ಸಹಬಾಳ್ವೆ ಮತ್ತು ಸಹಿಷ್ಣುತೆಯಲ್ಲಿ ಎಂದರ್ಥ. ನಾನು ಸಹಬಾಳ್ವೆ ಮತ್ತು ಸಹಿಷ್ಣುತೆಯಲ್ಲಿ ನಂಬಿಕೆ ಇಟ್ಟುಕೊಂಡಿದ್ದೇನೆ ಎಂದು ಹೇಳಿದರು.