ಸಿಲಿಂಡರ್ ಗ್ಯಾಸ್ ಸ್ಪೋಟ ಪ್ರಕರಣ: ಉಡುಪಿ ಮೂಲದ ಇಬ್ಬರು ಮೃತ್ಯು
ಬೆಳಗಾವಿ: ನಗರದ ಬಸವನಗಲ್ಲಿಯ ಅಪಾರ್ಟ್ ಮೆಂಟ್ ನಲ್ಲಿ ರವಿವಾರ ಮಧ್ಯಾಹ್ನ ಸಿಲಿಂಡರ್ ಗ್ಯಾಸ್ ಸ್ಪೋಟಗೊಂಡ ಪ್ರಕರಣದಲ್ಲಿ ಗಾಯಗೊಂಡವರ ಪೈಕಿ ಇಬ್ಬರು ಮೃತಪಟ್ಟಿದ್ದು, ಮತ್ತಿಬ್ಬರ ಸ್ಥಿತಿ ಗಂಭೀರವಾಗಿದ್ದು ಚಿಕಿತ್ಸೆ ಮುಂದುವರಿದೆಂದು ತಿಳಿದುಬಂದಿದೆ.
ಉಡುಪಿ ಮೂಲದ ಕಾಮಾಕ್ಷಿ ಭಟ್ ಹಾಗೂ ಹೇಮಂತ್ ಭಟ್ ಮೃತಪಟ್ಟಿದ್ದಾರೆ. ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, ಗಾಯಗೊಂಡ ಮತ್ತೊಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಸವನಗಲ್ಲಿಯ ಅಪಾರ್ಟ್ ಮೆಂಟ್ ನಲ್ಲಿ ಈ ಕುಟುಂಬ ವಾಸಿಸುತ್ತಿತ್ತು. ರವಿವಾರ ಮಧ್ಯಾಹ್ನ ಸಿಲಿಂಡರ್ ಗ್ಯಾಸ್ ಸೋರಿಕೆಯಾಗಿ ಸ್ಪೋಟಗೊಂಡಿದೆ. ಸ್ಪೋಟದಿಂದ ಒಂದೇ ಕುಟುಂಬದ ಐವರು ಗಾಯಗೊಂಡಿದ್ದರು. ಸ್ಥಳೀಯರು ಹಾಗೂ ಪೊಲೀಸರು ಸೇರಿ ಈ ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಹೆಚ್ಚಿನ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ರವಿವಾರ ಮಧ್ಯರಾತ್ರಿ ಇಬ್ಬರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.