ಬ್ರಹ್ಮಾವರ: ಯುವಕನ ಮೃತ್ಯು- ಸಂಶಯ ವ್ಯಕ್ತಪಡಿಸಿ ಸಹೋದರನಿಂದ ದೂರು
ಬ್ರಹ್ಮಾವರ ಜ.26(ಉಡುಪಿ ಟೈಮ್ಸ್ ವರದಿ): ಯುವಕನೋರ್ವನ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಸಂಶಯ ವ್ಯಕ್ತಪಡಿ ಮೃತರ ಅಣ್ಣ ಬ್ರಹ್ಮಾವರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಯಡ್ತಾಡಿಯ ಸಂತೋಷ (28) ಮೃತಪಟ್ಟವರು. ಕೂಲಿ ಕೆಲಸ ಮಾಡಿಕೊಂಡಿದ್ದ ಸಂತೋಷ್ ಅವರು ಹೆಚ್ಚಿನ ಸಮಯ ಮನೆಯಿಂದ ಹೊರೆಗೆ ಇದ್ದು, ಅಪರೂಪಕ್ಕೆ ಮನೆಗೆ ಬಂದು ಹೋಗುತ್ತಿದ್ದರು. ಅದೇ ರೀತಿ 2024 ನೇ ಜನವರಿ ತಿಂಗಳ ಮೊದಲ ವಾರದಲ್ಲಿ ಮನೆಗೆ ಬಂದು ನಂತರ ಕೂಲಿ ಕೆಲಸದ ಸಲುವಾಗಿ ಶಿರ್ವದ ಮಂಚಕಲ್ ಕಡೆಗೆ ಹೋಗಿದ್ದರು.
ಈ ನಡುವೆ ಜ.25 ರಂದು ಬೆಳಿಗ್ಗೆ ಸಂತೋಷರವರು ತಾಯಿ ಮೊಬೈಲ್ಗೆ ಬೇರೊಬ್ಬರ ಮೊಬೈಲ್ನಿಂದ ಕರೆ ಮಾಡಿ ಮಾತನಾಡಿದ್ದರು. ಅಲ್ಲದೆ ಅದೇ ದಿನ ರಾತ್ರಿ 7ಗಂಟೆಗೆ ಪುನಃ ಅದೇ ನಂಬರಿನಿಂದ ಮಾಡಿದ ವ್ಯಕ್ತಿ ಸಂತೋಷ್ ಅವರು ಅನಾರೋಗ್ಯದಿಂದ ಇದ್ದು ಮೃತಪಟ್ಟಿರುವುದಾಗಿ ತಿಳಿಸಿದ್ದಾನೆ.
ಆ ಬಳಿಕ ಪರಿಚಯದ ವಿಜಯ ಎಂಬಾತ ಕರೆ ಮಾಡಿ ಶಿರ್ವ ಮಂಚಕಲ್ ನಲ್ಲಿ ಸಂತೋಷ್ ಮೃತಪಟ್ಟಿರುವ ವಿಷಯ ತಿಳಿಸಿ ಮೃತದೇಹವನ್ನು ಮನೆಗೆ ತರುವುದಾಗಿ ಹೇಳಿದ್ದಾನೆ. ಈ ವೇಳೆ ಸಂತೋಷ್ ಅವರ ಅಣ್ಣ ಮಂಜುನಾಥ ಅವರು ತಾವೇ ಅಲ್ಲಿಗೆ ಬರುವುದಾಗಿ ತಿಳಿಸಿದರೂ ಕೇಳದೆ ಸಂತೋಷನ ಮೃತದೇಹವನ್ನು ಬಟ್ಟೆಯಲ್ಲಿ ಮುಚ್ಚಿದ ಸ್ಥಿತಿಯಲ್ಲಿ ಮನೆಗೆ ಬಂದು ತರಾತುರಿಯಲ್ಲಿ, ಗಡಿಬಿಡಿಯಲ್ಲಿ ಮೃತದೇಹವನ್ನು ಮನೆಯ ಒಳಗೆ ತಂದು ಮಲಗಿಸಿದ ಸ್ಥಿತಿಯಲ್ಲಿ ಇಟ್ಟು, ಮನೆಯವರಿಗೆ ಸಂತೋಷನ ಮರಣದ ಬಗ್ಗೆ ಯಾವುದೇ ಮಾಹಿತಿ ನೀಡದೇ ಬಂದ ಅಂಬುಲೆನ್ಸ್ ನಲ್ಲಿ ವಾಪಾಸ್ಸು ಹೋಗಿರುತ್ತಾರೆ. ಸಂತೋಷನು ಯಾವುದೋ ಕಾರಣದಿಂದ ಮೃತಪಟ್ಟಿದ್ದು, ಆತನ ಮರಣದ ಬಗ್ಗೆ ಸಂಶಯವಿರುವುದಾಗಿ ಮಂಜುನಾಥ ಅವರು ನೀಡಿದ ದೂರಿನಂತೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.