ಶಿರ್ವ: ಅಪರಿಚಿತ ವಾಹನ ಡಿಕ್ಕಿ- ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
ಶಿರ್ವ ಜ.26(ಉಡುಪಿ ಟೈಮ್ಸ್ ವರದಿ): ಅಪರಿಚಿತ ವಾಹನ ಡಿಕ್ಕಿ ಹೊಡೆದು ಬೈಕ್ ಸವಾರ ಯುವಕ ಮೃತಪಟ್ಟ ಘಟನೆ ಶಿರ್ವ ಠಾಣಾ ವ್ಯಾಪ್ತಿಯ ಬಂಟಕಲ್ಲು-ಅರಸಿಕಟ್ಟೆ ಎಂಬಲ್ಲಿ ನಡೆದಿದೆ.
ಠಾಣಾ ವ್ಯಾಪ್ತಿಯ ನಿವಾಸಿ ದರ್ಶನ್ (19) ಮೃತಪಟ್ಟ ಬೈಕ್ ಸವಾರ. ನಿನ್ನೆ ರಾತ್ರಿ ಇವರು ತನ್ನ ಬೈಕ್ನಲ್ಲಿ ಹೋಗುತ್ತಿರುವಾಗ ಬಂಟಕಲ್ಲು-ಅರಸಿಕಟ್ಟೆ ಎಂಬಲ್ಲಿ ಬಂಟಕಲ್ಲು ಕಡೆಯಿಂದ ಶಂಕರಪುರ ಕಡೆಗೆ ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದ ಅಪರಿಚಿತ ವಾಹನದ ಚಾಲಕನು ತನ್ನ ವಾಹನವನ್ನು ದರ್ಶನ್ ಹೋಗುತ್ತಿದ್ದ ಬೈಕ್ಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಬೈಕ್ ಸಮೇತ ರಸ್ತೆಗೆ ಬಿದ್ದು ಗಾಯಗೊಂಡಿದ್ದ ದರ್ಶನ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಬಗ್ಗೆ ಮಾಹಿತಿ ತಿಳಿದ ದರ್ಶನ್ ಅವರ ತಂದೆ ಆಸ್ಪತ್ರೆಗೆ ತೆರಳಿದಾಗ ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈದ್ಯರು ದರ್ಶನ್ ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ ಎಂದು ಮೃತರ ತಂದೆ ನೀಡಿದ ದೂರಿನಂತೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.