‘ಮೋದಿ ಮತ್ತೆ ಪ್ರಧಾನಿಯಾಗಬೇಕು, ಬಿಜೆಪಿಗೆ ಮತ್ತಷ್ಟು ಬಲ ಬರಬೇಕು’: ಜಗದೀಶ್ ಶೆಟ್ಟರ್
ನವದೆಹಲಿ: ಕಳೆದ 10 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಈ ದೇಶದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳು ಆಗಿವೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗ ಬೇಕು. ಅವರ ಕೈ ಬಲಪಡಿಸಬೇಕು, ಬಿಜೆಪಿಯ ಶಕ್ತಿ ಮತ್ತಷ್ಟು ಹೆಚ್ಚಬೇಕು, ಈ ನಿಟ್ಟಿನಲ್ಲಿ ಇಂದು ಮತ್ತೆ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದೇನೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಇಂದು ದೆಹಲಿಯಲ್ಲಿ ಬಿಜೆಪಿಯ ರಾಷ್ಟ್ರ ನಾಯಕರನ್ನು ಭೇಟಿ ಮಾಡಿ ಪಕ್ಷಕ್ಕೆ ಸೇರ್ಪಡೆಯಾಗುವ ಕುರಿತು ಮಾತುಕತೆ ನಡೆಸಿದ ನಂತರ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ, ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರ ಸಮ್ಮುಖದಲ್ಲಿ ಅಧಿಕೃತವಾಗಿ ಸೇರ್ಪಡೆಯಾದರು. ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದೊಂದು ವರ್ಷದಲ್ಲಿ ಸಾಕಷ್ಟು ಬೆಳವಣಿಗೆಗಳಾಗಿವೆ. ಬಿಜೆಪಿ ನಾಯಕರು ನನ್ನ ಜೊತೆ ಸತತ ಸಂಪರ್ಕದಲ್ಲಿದ್ದ ರು. ನೀವು ಬಿಜೆಪಿಗೆ ಮತ್ತೆ ಬನ್ನಿ, ಪಕ್ಷದ ಬಲ ಹೆಚ್ಚುತ್ತದೆ, ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಎನ್ನುತ್ತಿದ್ದರು. ಪಕ್ಷದ ಹೈಕಮಾಂಡ್ ಅವರನ್ನು ಇಂದು ಭೇಟಿ ಮಾಡಿದಾಗ ಗೌರವಯುತವಾಗಿ ಬರಮಾಡಿಕೊಂಡರು. ಹೀಗಾಗಿ ಸ್ವ ಇಚ್ಛೆಯಿಂದ ಮತ್ತೆ ಬಿಜೆಪಿಗೆ ಸೇರುತ್ತಿದ್ದೇನೆ ಎಂದರು.ಕಾಂಗ್ರೆಸ್ ನಾಯಕರು ನನ್ನನ್ನು ಚೆನ್ನಾಗಿ ನಡೆಸಿಕೊಂಡಿದ್ದಾರೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್ ಅವರಿಗೆ ಧನ್ಯವಾದಗಳು ಎಂದರು.
ಇಮೇಲ್ ಮೂಲಕ ರಾಜೀನಾಮೆ ಪತ್ರ: ಕಾಂಗ್ರೆಸ್ ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ, ರಾಜ್ಯಾಧ್ಯಕ್ಷರಿಗೆ ಪತ್ರವನ್ನು ಕಳಿಸಿದ್ದೇನೆ. ಇನ್ನು ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಪತ್ರವನ್ನು ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ಇಮೇಲ್ ಮೂಲಕ ಕಳಿಸಿದ್ದೇನೆ ಎಂದು ಶೆಟ್ಟರ್ ತಿಳಿಸಿದರು.