ರಾಮ ಮಂದಿರ ಲೋಕಾರ್ಪಣೆ: ದೇವಸ್ಥಾನದಲ್ಲಿ ರಾಮೋತ್ಸವ ಕಾರ್ಯಕ್ರಮ
ಕಾರ್ಕಳ, ಜ.24(ಉಡುಪಿ ಟೈಮ್ಸ್ ವರದಿ): ಬೋಳ ಶ್ರೀ ಮೃತ್ಯುಂಜಯ ರುದ್ರ ಸೋಮನಾಥೇಶ್ವರ ದೇವಸ್ಥಾನದ ಆಡಳಿತ ಮಂಡಳಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ವಿಶ್ವ ಹಿಂದೂ ಪರಿಷತ್, ಬೋಳ ಘಟಕದ ಆಶ್ರಯದಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರದ ಲೋಕಾರ್ಪಣೆ ಹಾಗೂ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಪ್ರಯುಕ್ತ ಬೋಳ ಮೃತ್ಯುಂಜಯ ರುದ್ರ ಸೋಮನಾಥೇಶ್ವರ ದೇವಾಲಯ ಹಾಗೂ ಶ್ರೀ ವೀರ ಮಾರುತಿ ದೇವಸ್ಥಾನದಲ್ಲಿ ರಾಮೋತ್ಸವ ಕಾರ್ಯಕ್ರಮ ನಡೆಸಲಾಯಿತು.
ಈ ವೇಳೆ ದೇವಳದಲ್ಲಿ ಸಾಮೂಹಿಕ ರಾಮತಾರಕ ಮಂತ್ರಪಠಣೆ, ಭಜನಾ ಸಂಕೀರ್ತನೆ, ಮೃತ್ಯುಂಜಯ ರುದ್ರ ಸೋಮನಾಥೇಶ್ವರ ದೇವರಿಗೆ, ವೀರಮಾರುತಿ ದೇವರಿಗೆ ವಿಶೇಷ ಪೂಜೆ ಹಾಗೂ ಶ್ರೀ ರಾಮನ ಭಾವಚಿತ್ರಕ್ಕೆ ದೇವಳದ ಪ್ರಧಾನ ಅರ್ಚಕ ಶ್ರೀನಿವಾಸ ಭಟ್ ನೇತೃತ್ವದಲ್ಲಿ ಪೂಜೆ ಸಲ್ಲಿಸಿ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಅಯೋಧ್ಯೆಯಲ್ಲಿ ಕರಸೇವಕರಾಗಿ ಸೇವೆಗೈದ ಊರಿನ ಹಿರಿಯರಾದ ಜಗನ್ನಾಥ ಶೆಟ್ಟಿ ಕಲ್ಬೆಟ್ಟು ಹಾಗೂ ಜಯರಾಮ ಶೆಟ್ಟಿ ಪೊಸರ್ಮ ಪರಾಡಿ ಅವರನ್ನು ಹಿರಿಯ ಗಣ್ಯರ ಉಪಸ್ಥಿತಿಯಲ್ಲಿ ಗೌರವಿಸಲಾಯಿತು. ಇದೇ ವೇಳೆ ಶ್ರೀ ರಾಮ ದೇವರ ಪ್ರಾಣ ಪ್ರತಿಷ್ಠೆಯ ದೃಶ್ಯಾವಳಿಯನ್ನು ಬೃಹತ್ ಪರದೆಯ ಮೂಲಕ ನೇರಪ್ರಸಾರದ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ಹಾಗೂ ರಾತ್ರಿ ದೇವಳದಲ್ಲಿ ಮತ್ತು ಶ್ರೀ ಮಹಾಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ವಿಶೇಷ ದೀಪಾಲಂಕಾರ, ಶ್ರೀ ರಾಮತಾರಕ ಮಂತ್ರಪಠಣೆ ಹಾಗೂ ಭಜನಾ ಸಂಕೀರ್ತನೆ ನಡೆಸಲಾಯಿತು.