ಜಯಕರ ಶೆಟ್ಟಿಯವರಿಗೆ ನಿಡಂಬೂರುಶ್ರೀ ಪ್ರಶಸ್ತಿ
ಉಡುಪಿ: ಧರ್ಮದರ್ಶಿ ಡಾ.ನಿ.ಬೀ. ವಿಜಯ ಬಲ್ಲಾಳರು ನಿಡಂಬೂರು ಬೀಡಿನ ಶ್ರೀರಾಜರಾಜೇಶ್ವರೀ ದೇವರ ಅನುಗ್ರಹಪೂರ್ವಕ ನೀಡುವ ನಿಡಂಬೂರುಶ್ರೀ ಪ್ರಶಸ್ತಿಗೆ ನಿವೃತ್ತ ಅಧ್ಯಾಪಕ ಜಯಕರ ಶೆಟ್ಟಿ ಆಯ್ಕೆಯಾಗಿದ್ದಾರೆ.
ಆದಿಉಡುಪಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 36 ವರ್ಷಗಳ ಕಾಲ ಅಧ್ಯಾಪಕರಾಗಿ, ಮುಖ್ಯೋಪಾಧ್ಯಾಯರಾಗಿ ಸೇವೆಸಲ್ಲಿಸಿದ ಜಯಕರ ಶೆಟ್ಟಿಯವರು ಸಾವಿರಾರು ವಿದ್ಯಾರ್ಥಿಗಳ ಬದುಕನ್ನು ರೂಪಿಸಿದವರು. ದೈವ ದೇವಸ್ಥಾನಗಳ ಭಕ್ತರಾಗಿ ನಿರಂತರ ಸೇವೆಸಲ್ಲಿಸುತ್ತಾ ಬಂದವರು. ಉತ್ತಮ ಕೃಷಿಕರಾಗಿಯೂ ಮಾನಿತರು. ಇವರಿಗೆ ಫೆ. 03, 2024 ಶನಿವಾರ ಕಂಬ್ಳಕಟ್ಟದ ಶ್ರೀ ಜನಾರ್ದನ ಮಂಟಪದಲ್ಲಿ ನಡೆಯುವ ಶ್ರೀ ಲಕ್ಷ್ಮಿ ಜನಾರ್ದನ ಯಕ್ಷಗಾನ ಕಲಾಮಂಡಳಿಯ 66ನೇ ವಾರ್ಷಿಕೋತ್ಸವದಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಧರ್ಮದರ್ಶಿ ಡಾ. ನಿ. ಬೀ. ವಿಜಯ ಬಲ್ಲಾಳರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.