ಯಕ್ಷಗಾನ ಕಲಾವಿದ ಪೆರುವಾಯಿ ನಾರಾಯಣ ಶೆಟ್ಟಿ ನಿಧನ

ಬಂಟ್ವಾಳ: ತೆಂಕುತಿಟ್ಟಿನ ಪರಂಪರೆಯ ಪ್ರಾತಿನಿಧಿಕ ಯಕ್ಷಗಾನ ಕಲಾವಿದ ಪೆರುವಾಯಿ ನಾರಾಯಣ ಶೆಟ್ಟಿ (82) ಇಂದು ಬಂಟ್ವಾಳ ತಾಲೂಕಿನ ಪೆರುವಾಯಿಯಲ್ಲಿ ನಿಧನರಾದರು.

ಅಳಿಕೆ ರಾಮಯ್ಯ ರೈಯವರಲ್ಲಿ ಯಕ್ಷಗಾನ ಅಭ್ಯಾಸ ಮಾಡಿ 12ರ ಹರೆಯದಲ್ಲಿ ಯಕ್ಷಗಾನ ರಂಗ ಪ್ರವೇಶಿಸಿದ ಇವರು ಇರಾ, ಧರ್ಮಸ್ಥಳ, ಕಟೀಲು, ಬಪ್ಪನಾಡು, ಕದ್ರಿ, ಪುತ್ತೂರು ಮೇಳಗಳಲ್ಲಿ ಸುಮಾರು ಆರು ದಶಕಗಳ ಕಲಾಸೇವೆಗೈದಿರುತ್ತಾರೆ. ರಕ್ತಬೀಜ, ಹಿರಣ್ಯಕಶಿಪು, ಕಂಸ, ಋತುಪರ್ಣ, ಹನುಮಂತ ಮೊದಲಾದ ಪೌರಾಣಿಕ ಪಾತ್ರಗಳಲ್ಲಿ ಸಿದ್ಧಿ-ಪ್ರಸಿದ್ಧಿ ಪಡೆದಿದ್ದರು. ತುಳು ಪ್ರಸಂಗದಲ್ಲಿಯೂ ತಮ್ಮದೇ ಆದ ಛಾಪನ್ನು ಮೂಡಿಸಿದವರು. ತಾಳ ಮದ್ದಲೆ, ಅರ್ಥಧಾರಿಯಾಗಿಯೂ ಭಾಗವಹಿಸುತ್ತಿದ್ದರು.

ಇವರು ಪತ್ನಿ, ಮೂವರು ಪುತ್ರರು, ಇಬ್ಬರು ಪುತ್ರಿಯರನ್ನು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. 2009ರಲ್ಲಿ ಯಕ್ಷಗಾನ ಕಲಾರಂಗವು ಇವರಿಗೆ ಪ್ರಶಸ್ತಿ ನೀಡಿ ಗೌರವಿಸಿತ್ತು. ಇವರ ನಿಧನಕ್ಕೆ ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ಸೂಚಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!