ಕಾಸರಗೋಡು ಚಿನ್ನ ಅವರಿಗೆ ಶಾರದಾ ಕೃಷ್ಣ ಪುರಸ್ಕಾರ- ವಿಶ್ವ ಸಂಸ್ಕೃತಿ ಪ್ರತಿಷ್ಠಾನ ಸಂಸ್ಕೃತಿ ಉತ್ಸವ ಉದ್ಘಾಟನೆ

ಉಡುಪಿ, ಜ.23: ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ವತಿಯಿಂದ ಎಂಜಿಎಂ ಕಾಲೇಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಎಂಜಿಎಂ ಕಾಲೇಜು ಮುದ್ದಣ ಮಂಟಪದಲ್ಲಿ ಆಯೋಜಿಸಲಾದ ಸಂಸ್ಕೃತಿ ಉತ್ಸವವನ್ನು ಮಂಗಳವಾರ ಎಂಜಿಎಂ ಕಾಲೇಜು ಪ್ರಾಂಶುಪಾಲ ಪ್ರೊ. ಲಕ್ಷ್ಮೀನಾರಾಯಣ ಕಾರಂತ್ ಉದ್ಘಾಟಿಸಿದರು. ಅನಂತರ ಮಾತನಾಡಿದ ಅವರು ಸಂಸ್ಕೃತಿ ವಿಶ್ವ ಪ್ರತಿಷ್ಠಾನವು ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸಿ ಕೆಲಸ ಮಾಡುತ್ತಿರುವ ಕಾರ್ಯ ಶ್ಲಾಘನೀಯ. ಸಮಾಜಮುಖಿ, ಜನಪರ ನೆಲೆಯಲ್ಲಿ ಜೀವನದಲ್ಲಿ ಸಾಧನೆ ಮಾಡಿದರೆ ಅದು ನಿಜವಾದ ಅತ್ಮತೃಪ್ತಿ ಎಂದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕಾಸರಗೋಡು ಚಿನ್ನ ಅವರು ಮಾತನಾಡಿ, ನನ್ನ ರಂಗ, ಸಾಹಿತ್ಯ ಸಾಧನೆ ಹಿಂದಿನ ಬಹುಪಾಲು ಶ್ರೇಯಸ್ಸು ಉಡುಪಿ ಮಣ್ಣಿಗೆ ಸಲ್ಲಬೇಕು ಎಂದರು‌. ಹುಟ್ಟಿದ ನೆಲ‌ ಕಾಸರಗೋಡು ಕನ್ನಡಕ್ಕಾಗಿ ಹೋರಾಡುವ ಭಾವ ಬೆಳೆಸಿತು. ಭಾಷಾವಾರು ‌ಪ್ರಾಂತ್ಯ ವೇಳೆ ಅಧಿಕಾರಿಗಳ‌‌ ತಪ್ಪಿನಿಂದ ಕಾಸರಗೋಡು ಕೇರಳ ಸೇರ್ಪಡೆಯಾಗಬೇಕಾಯಿತು ಎಂದು ಕಳವಳ ವ್ಯಕ್ತಪಡಿಸಿದ ಅವರು ಕಾಸರಗೋಡು ಮಣ್ಣು ಈಗಲು ಕನ್ನಡದ ಮಣ್ಣು ಎಂದು ಪ್ರತಿಪಾದಿಸಿದರು.

ಹಿರಿಯ ಸಾಹಿತಿ ಎ.ಎಸ್.ಎನ್ ಹೆಬ್ಬಾರ್ ಅಧ್ಯಕ್ಷತೆ ವಹಿಸಿದ್ದರು.ಶ್ರೀ ರಾಘವೇಂದ್ರ ಚಾರಿಟೇಬಲ್ ಟ್ರಸ್ಟ್ ವಿಶ್ವಸ್ಥ ಎಂ. ಸೂರ್ಯನಾರಾಯಣ ಅಡಿಗ, ಸಂಸ್ಕೃತಿ ಭವನ ನಿರ್ಮಾಣ ಸಮಿತಿ ಅಧ್ಯಕ್ಷ ಸದಾನಂದ ಶೆಣೈ, ಉದ್ಯಮಿ ಸುಗುಣ ಶಂಕರ್ ಸುವರ್ಣ, ಪ್ರತಿಷ್ಠಾನದ ಗೌರವ ಅಧ್ಯಕ್ಷ ವಿಶ್ವನಾಥ್ ಶೆಣೈ, ಅಧ್ಯಕ್ಷ ಪ್ರೊ.ಶಂಕರ್, ಶಾರದಾಕೃಷ್ಣ ಪುರಸ್ಕಾರ ಸಮಿತಿ ಸಂಚಾಲಕ ವಿವೇಕಾನಂದ ಎನ್. ಉಪಸ್ಥಿತರಿದ್ದರು.

ಗಡಿನಾಡ ಕನ್ನಡ ಕಲಾವಿದ ಕಾಸರಗೋಡು ಚಿನ್ನಾ ಅವರಿಗೆ ರಾಘವೇಂದ್ರ ಚಾರಿಟಬಲ್ ಟ್ರಸ್ಟ್ ಪ್ರಾಯೋಜಿತ ಶಾರದಾ ಕೃಷ್ಣ ಪುರಸ್ಕಾರ ನೀಡಿ ಗೌರವಿಸಲಾಯಿತು. ಮಂಗಳೂರು ರಾಮಕೃಷ್ಣ ಕಾಲೇಜಿನ ಪ್ರಾಂಶುಪಾಲ ಪ್ರೊ. ಎಂ. ಬಾಲಕೃಷ್ಣ ಶೆಟ್ಟಿ ಅಭಿನಂದನಾ ಭಾಷಣ ಮಾಡಿದರು. ವಿಘ್ನೇಶ್ವರ್ ಅಡಿಗ ಸ್ವಾಗತಿಸಿ, ಪ್ರತಿಷ್ಠಾನದ ಸಂಚಾಲಕ ರವಿರಾಜ್ ಎಚ್ ಪಿ ಪ್ರಸ್ತಾವನೆಗೈದರು. ರಾಮಾಂಜಿ ಸಮ್ಮಾನ ಪತ್ರ ವಾಚಿಸಿದರು. ಪೂರ್ಣಿಮಾ‌ ಜನಾರ್ದನ್ ನಿರೂಪಿಸಿದರು

Leave a Reply

Your email address will not be published. Required fields are marked *

error: Content is protected !!