ಬಿಜೆಪಿಗೆ ಚುನಾವಣೆ ಬಂದಾಗ ನೆನಪಾಗುವುದು ಧರ್ಮ, ಮಸೀದಿ, ಪಾಕಿಸ್ತಾನ- ತಂಗಡಗಿ

ಉಡುಪಿ, ಜ.23: ರಾಮ ಮಂದಿರ ವಿಚಾರದಲ್ಲಿ ನಾವು ಅಂತರ ಕಾಯ್ದುಕೊಂಡಿಲ್ಲ. ನಾವು ಕೂಡ ರಾಮ, ಆಂಜನೇಯರ ಭಕ್ತರೇ ಆಗಿದ್ದೇವೆ. ಆದರೆ ಬಿಜೆಪಿಯವರು ಅದನ್ನು ರಾಜಕೀಯ ಮಾಡುತ್ತಿದ್ದಾರೆ. ಅವರಿಗೆ ಧರ್ಮ ಇದ್ದರೆ ಮಾತ್ರ ರಾಜಕಾರಣ ಮಾಡಲು ಸಾಧ್ಯ. ಅಭಿವೃದ್ಧಿ, ಬಡವರ ಬಗ್ಗೆ ಯಾವುದೇ ಕಾಳಜಿ ಇಲ್ಲ ಎಂದು ರಾಜ್ಯ ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ಎಸ್.ತಂಗಡಗಿ ಹೇಳಿದ್ದಾರೆ.

ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ 10ವರ್ಷಗಳಿಂದ ಬಿಜೆಪಿ ಸರಕಾರ ಕೇಂದ್ರದಲ್ಲಿ ಆಡಳಿತ ನಡೆಸುತ್ತಿದೆ. ಅವರು ಎಷ್ಟು ರೈತರಿಗೆ ನೀರಾವರಿ ಯೋಜನೆ ಮಾಡಿಕೊಟ್ಟಿದ್ದಾರೆ. ಎಷ್ಟು ಯುವಕರಿಗೆ ಉದ್ಯೋಗ ನೀಡಿದ್ದಾರೆ. ಕರ್ನಾಟಕ ಸೇರಿದಂತೆ ದೇಶದಲ್ಲಿ ಎಷ್ಟು ಬಡವರಿಗೆ ಮನೆ ನಿರ್ಮಿಸಿಕೊಟ್ಟಿದ್ದಾರೆ ಎಂದು ಹೇಳಲಿ. ಇದನ್ನೆಲ್ಲ ಬಿಟ್ಟು ರಾಮನನ್ನು ಇಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ ಎಂದು ದೂರಿದರು.

ನಮ್ಮೆಲ್ಲರ ಮನೆಯಲ್ಲೂ ದೇವರ ಕೋಣೆ ಇದೆ. ನಾವು ಪ್ರತಿದಿನ ಪೂಜೆ ಮಾಡಿಯೇ ಹೊರಗಡೆ ಕಾಲಿಡುತ್ತೇವೆ. ಆದರೆ ಬಿಜೆಪಿಯವರು ದೇವರನ್ನು ಬೀದಿಗೆ ತಂದು ಬಿಟ್ಟಿದ್ದಾರೆ. ನಾವು ಬಿಜೆಪಿಯವರ ಹಾಗೆ ದೇವರನ್ನು ಇಟ್ಟು ರಾಜಕಾರಣ ಮಾಡುವುದಿಲ್ಲ ಎಂದು ಅವರು ಹೇಳಿದರು.

ನಾನು ನಿಶ್ಚಯವಾಗಿಯೂ ಅಯೋಧ್ಯೆ ಹೋಗುತ್ತೇನೆ. ಪ್ರತಿವರ್ಷ ನಾನು ಆಂಜನೇಯನ ಮಾಲೆ ಹಾಕುತ್ತೇನೆ. ಅದನ್ನು ಭಕ್ತಿಗಾಗಿ ಹಾಗೂ ಲೋಕ ಕಲ್ಯಾಣಕ್ಕಾಗಿ ಹಾಕುತ್ತೇನೆಯೇ ಹೊರತು ಬಿಜೆಪಿಯವರ ಹಾಗೆ ಚುನಾವಣೆ ದೃಷ್ಠಿಯಿಂದ ಅಲ್ಲ. ಇವರಿಗೆ ಚುನಾವಣೆ ಬಂದಾಗ ನೆನಪು ಆಗುವುದು ಧರ್ಮ, ಮಸೀದಿ, ಇಲ್ಲದಿದ್ದರೆ ಪಾಕಿಸ್ತಾನ. ಮತ್ತೊಬ್ಬರ ಹೆಗಲ ಮೇಲೆ ಬಂದೂಕು ಇಟ್ಟೇ ಇವರು ಎರಡು ಅವಧಿಗೆ ಆಡಳಿತ ನಡೆಸಿದ್ದಾರೆ ಎಂದು ಅವರು ಟೀಕಿಸಿದರು.

ನಿಗಮ ಮಂಡಳಿಗಳಿಗೆ ಅಧ್ಯಕ್ಷರ ಆಯ್ಕೆಯನ್ನು ಮುಖ್ಯಮಂತ್ರಿ, ರಾಜಾಧ್ಯಕ್ಷರು ಹಾಗೂ ಹೈಕಮಾಂಡ್ ಮಾಡುತ್ತಾರೆ. ಜಿಲ್ಲಾವಾರು ಸಮಾನವಾಗಿ ಹಂಚಿಕೆ ಮಾಡಲಾಗುವುದು. ಕಾಂಗ್ರೆಸ್ ಪಕ್ಷದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇರುವುದರಿಂದ ಈ ಆಯ್ಕೆ ಪ್ರಕ್ರಿಯೆ ಸ್ವಲ್ಪ ವಿಳಂಬವಾಗುಬಹುದು ಎಂದು ಸಚಿವ ತಂಗಡಗಿ ತಿಳಿಸಿದರು.

ಕಳೆದ ಬಾರಿಯಂತೆ ಈ ಬಾರಿಯು ಯಕ್ಷಗಾನ ಸಮ್ಮೇಳನ ನಡೆಸುವ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಯಕ್ಷಗಾನ ಅಕಾಡೆಮಿ ಅಧ್ಯಕ್ಷರು ಹಾಗೂ ಸದಸ್ಯರ ನೇಮಕಕ್ಕೆ ಸಂಬಂಧಿಸಿ ಎರಡು ಮೂರು ಸುತ್ತಿನ ಮಾತುಕತೆ ನಡೆಸಲಾಗಿದೆ. ಆದಷ್ಟು ಬೇಗ ನೇಮಕ ಮಾಡಲಾಗುವುದು. ಅದರ ಬಳಿಕ ಅವರಿಗೆ ಜವಾಬ್ದಾರಿ ಕೊಟ್ಟ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದರು.

ಅನುದಾನ ತಾರತಮ್ಯ ಇಲ್ಲ

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಅನುದಾನ ನೀಡುವ ಬಗ್ಗೆ ಉಡುಪಿ ಜಿಲ್ಲೆಗೆ ತಾರತಮ್ಯ ಎಸಗಿರುವ ಕುರಿತ ಆರೋಪದ ಬಗ್ಗೆ ಉತ್ತರಿಸಿದ ಸಚಿವರು, ಅಂತಹ ಕೆಲಸ ಬಿಜೆಪಿಯವರು ಮಾತ್ರ ಮಾಡುತ್ತಾರೆಯೇ ಹೊರತು ನಾವು ಮಾಡಲ್ಲ. ನಾವು ಎಲ್ಲರನ್ನೂ ಸಾಮಾನವಾಗಿ ಕಾಣುತ್ತೇವೆ. ಸಮ ಪಾಲು, ಸಮ ಬಾಳು ಇದ್ದರೆ ಅದು ಕಾಂಗ್ರೆಸ್ ನಲ್ಲಿ ಮಾತ್ರ. ಬಿಜೆಪಿಯವರ ಸಬ್ ಕಾ ಸಾತ್, ಸಬ್ ಕಾ ವಿಕಾಸ್ ಕೇವಲ ಮಾತಿನಲ್ಲಿದೆ. ಯಾರಿಗೂ ಸಾಥ್ ಇಲ್ಲ, ವಿಕಾಸ್ ಕೂಡ ಇಲ್ಲ ಎಂದು ಟೀಕಿಸಿದರು.

ಅನುದಾನದಲ್ಲಿ ತಾರತಮ್ಯ ಮಾಡಿರುವ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ಯಾವುದೇ ಕಾರ್ಯಕ್ರಮದ ಬಗ್ಗೆ ಜಿಲ್ಲೆಯಿಂದ ಪ್ರಸ್ತಾವನೆ ಬಂದರೆ ಅದಕ್ಕೆ ಅದುನಾನ ಕೊಡುತ್ತೇವೆ. ಈ ಬಾರಿಯ ಬಜೆಟ್ ನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಹೆಚ್ಚಿನ ಅನುದಾನ 40-50ಕೋಟಿ ರೂ. ಕೇಳಿದ್ದೇವೆ. ನಮ್ಮಲ್ಲಿ ಅನುದಾನದ ಕೊರತೆ ಇಲ್ಲ. ಬಿಜೆಪಿಯವರ ಕಣ್ಣಿಗೆ ಮಾತ್ರ ಕೊರತೆ ಕಾಣುತ್ತಿದೆ. ಗ್ಯಾರಂಟಿ ಬಗ್ಗೆ ವಿರೋಧ ಮಾಡುತ್ತಿದ್ದವರು ಈಗ ಮೋದಿ ಗ್ಯಾರಂಟಿ ಹೇಳಿ ನಮ್ಮ ಗ್ಯಾರಂಟಿಯನ್ನು ಕಾಪಿ ಮಾಡುತ್ತಿದ್ದಾರೆ ಎಂದು ಸಚಿವರು ವ್ಯಂಗ್ಯವಾಡಿದರು.

ಕಾರ್ಕಳ ಪರಶುರಾಮ ಥೀಮ್ ಪಾರ್ಕ್ ಅವ್ಯವಹಾರದ ಕುರಿತ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಅವ್ಯವಹಾರದ ಕುರಿತು ಪ್ರವಾಸೋದ್ಯಮ ಇಲಾಖೆಯಿಂದ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದರು.

ಶಾಸ್ತ್ರೀಯ ಭಾಷಾ ಅನುದಾನಕ್ಕೆ ಮನವಿ

ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರೆತು 15ವರ್ಷಗಳಾಗಿವೆ. ಶಾಸ್ತ್ರೀಯ ಸ್ಥಾನಮಾನ ಸಿಕ್ಕಿದ ತಮಿಳುನಾಡಿಗೆ ಕೇಂದ್ರ ಸರಕಾರದಿಂದ ವಿಶೇಷ ಅನುದಾನ ದೊರೆತಿದೆ. ಆದರೆ ಈ ಬಗ್ಗೆ ಕರ್ನಾಟಕ ಸಂಸದರು ರಾಜ್ಯದ ಪರವಾಗಿ ಮೋದಿಯವರಿಗೆ ಒಂದು ಪತ್ರ ಕೂಡಲ ಬರೆದಿಲ್ಲ ಎಂದು ಸಚಿವ ಶಿವರಾಜ್ ತಂಗಡಗಿ ಆರೋಪಿಸಿದರು.

ನಾನು ಈ ತಿಂಗಳ ಅಂತ್ಯಕ್ಕೆ ದೆಹಲಿಗೆ ತೆರಳಿ ಕೇಂದ್ರ ಸಂಸ್ಕೃತಿ ಸಚಿವರನ್ನು ಭೇಟಿ ಮಾಡಿ ಅನುದಾನ ನೀಡುವಂತೆ ಮನವಿ ಮಾಡುತ್ತೇನೆ. ರಾಜ್ಯದ 26 ಮಂದಿ ಸಂಸದರು ಮೋದಿ ಜೊತೆ ಮಾತನಾಡಲು ಹೆದರುತ್ತಾರೆ. ಇನ್ನು ಅನುದಾನ ಎಲ್ಲಿಂದ ಕೇಳುತ್ತಾರೆ. ಇಲ್ಲಿ ಬಂದು ಕೇವಲ ಮಾಧ್ಯಮದವರ ಮುಂದೆ ಮಾತ್ರ ಮಾತನಾಡುವ ಇವರಿಗೆ ಮೋದಿ ಎದುರು ಮಾತನಾಡುವ ಧೈರ್ಯ ಇಲ್ಲ. ಇವರಿಗೆ ಕರ್ನಾಟಕ ಹಾಗೂ ಕನ್ನಡದ ಅಭಿಮಾನ ಇದ್ದರೆ ಅನುದಾನ ಕೊಡುವ ಕೆಲಸ ಮಾಡಲಿ ಎಂದರು.

Leave a Reply

Your email address will not be published. Required fields are marked *

error: Content is protected !!