ಜಾಗತಿಕ ಬಂಟರ ಸಂಘಗಳ ಒಕ್ಕೂಟ: ಹೊರಾಂಗಣ ಸಭಾ ವೇದಿಕೆ ನಿರ್ಮಾಣ
ಮೂಲ್ಕಿ: ಸಾಮಾಜಿಕ ಕಳಕಳಿ ಹೊಂದಿರುವ ಐಕಳ ಹರೀಶ್ ಶೆಟ್ಟಿಯವರ ಕನಸಿನಂತೆ ಮೂಲ್ಕಿಯಲ್ಲಿ ತೆರೆದ ಸಭಾಂಗಣ ನಿರ್ಮಾಣವಾಗುತ್ತಿದ್ದು, ಈ ಸಭಾಂಗಣವಕ್ಕೆ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ದಾನಿಗಳಾದ ತೋನ್ಸೆ ಆನಂದ ಶೆಟ್ಟಿ ಹೇಳಿದರು. ಅವರು ಮುಲ್ಕಿಯ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣದಲ್ಲಿ ತೋನ್ಸೆ ಶಶಿರೇಖಾ ಆನಂದ ಶೆಟ್ಟಿ ಓಪನ್ ಏರ್ ಗಾರ್ಡನ್ ಹೆಸರಿನಲ್ಲಿ ಹೊರಾಂಗಣ ಸಭಾ ವೇದಿಕೆ ನಿರ್ಮಾಣದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ ಜಾಗತಿಕ ಬಂಟರ ಸಂಘದ ಅಧ್ಯಕ್ಷರಾಗಿ ಐಕಳ ಹರೀಶ್ ಶೆಟ್ಟಿಯವರು ಅಧಿಕಾರ ಸ್ವೀಕಾರ ಮಾಡಿದ ನಂತರ ಸಂಘದಲ್ಲಿ ಅನೇಕ ಸಮಾಜಮುಖಿ ಕಾರ್ಯಗಳ ಮೂಲಕ ಸಂಘದ ಚಿತ್ರಣವೇ ಬದಲಾಗಿದೆ, ಇದೀಗ ಮೆಹೆಂದಿ, ಮದುವೆ ಮತ್ತಿತರ ಎಲ್ಲಾ ಕಾರ್ಯಕ್ರಮಗಳಿಗೆ ಉಪಯೋಗವಾಗುವಂತ ಹ ಉತ್ತಮವಾದ ತೆರೆದ ಸಭಾಂಗಣ ನಿರ್ಮಾಣವಾಗುತ್ತಿದ್ದು ಸಂಘಕ್ಕೆ ಹೊಸ ರೂಪ ಸಿಗಲಿದೆ ಎಂದರು.
ಜಾಗತಿಕ ಬಂಟರ ಸಂಘದ ಮಹಾದಾನಿ ಕನ್ಯಾನ ಸದಾಶಿವ ಶೆಟ್ಟಿ ಮಾತನಾಡಿ ಐಕಳ ಹರೀಶ್ ಶೆಟ್ಟಿಯವರ ನಾಯಕತ್ವದಲ್ಲಿ ಸಂಘ ಹೆಮ್ಮರವಾಗಿ ಬೆಳೆದಿದೆ, ಜಾಗತಿಕ ಬಂಟರ ಸಂಘಕ್ಕೆ ಸ್ವಂತ ಕಚೇರಿಯ ಅಗತ್ಯತೆ ಇದ್ದ ಸಂದರ್ಭ ಮೂಲ್ಕಿಯಲ್ಲಿ ಸ್ವಂತ ಜಮೀನು ಖರೀಧಿಸಿ ಕಚೇರಿ ಪ್ರಾರಂಭಿಸಿದ್ದು ಇದಕ್ಕೆ ಸಹಕಾರ ನೀಡಿದ್ದೇನೆ, ಇದೀಗ ತೆರೆದ ಸಭಾಂಗಣ ನಿರ್ಮಾಣವಾಗುವುದು ಅಭಿನಂದನೀಯ ಎಂದರು.
ಜಾಗತಿಕ ಬಂಟರ ಸಂಘದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಆದ್ಯಕ್ಷತೆ ವಹಿಸಿ ಮಾತನಾಡಿ ಜಾಗತಿಕ ಬಂಟರ ಸಂಘಕ್ಕೆ ಜಮೀನಿನ ಅಗತ್ಯತೆ ಇದ್ದು ಅದನ್ನು ಕನ್ಯಾನ ಸದಾಶಿವ ಶೆಟ್ಟಿ ಖರೀದಿಸಿ ನೀಡಿದ್ದು, ಒಂದು ಸುಸಜ್ಜಿತ ಕಚೇರಿ ಬೇಕಾಗಿದ್ದು ಅದನ್ನು ಪ್ರವೀಣ್ ಭೋಜ ಶೆಟ್ಟಿ ವ್ಯವಸ್ಥೆ ಮಾಡಿ ಕೊಟ್ಟಿದ್ದಾರೆ, ಇದೀಗ ದಾನಿಗಳಾದ ತೋನ್ಸೆ ಆನಂದ ಶೆಟ್ಟಿಯವರ ಸಹಕಾರದಿಂದ ದೊಡ್ಡ ಯೋಜನೆಯೊಂದು ಕಾರ್ಯಗತಗೊಳ್ಳುತಿದೆ, ಎಲ್ಲಾ ಕಾರ್ಯಕ್ರಮಗಳಿಗೆ ಅನುಕೂಲವಾಗುವಂತಹ ಒಂದು ಅತ್ಯುತ್ತಮ ಸಭಾಭವನ ನಿರ್ಮಾಣವಾಗುತ್ತಿದೆ, ಬಂಟರ ಮಾತೃ ಸಂಘದ ನೂತನ ಕಟ್ಟಡ ಸಭಾಭವನ ಕೂಡ ನಿರ್ಮಾಣವಾಗುತ್ತಿದ್ದು ಅದಕ್ಕೂ ದಾನಿಗಳು ಸಹಕಾರ ನೀಡಬೇಕು ಎಂದರು.
ಈ ಸಂದರ್ಭ ಜಾಗತಿಕ ಬಂಟರ ಸಂಘದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಕೋಶಾಧಿಕಾರಿ ಉಳ್ತೂರು ಮೋಹನದಾಸ್ ಶೆಟ್ಟಿ, ಗಿರೀಶ್ ಶೆಟ್ಟಿ ತೆಳ್ಳಾರ್, ರವಿರಾಜ್ ಶೆಟ್ಟಿ ಜತ್ತೊಟ್ಟು, ಶರತ್ ಶೆಟ್ಟಿ ಕಿನ್ನಿಗೋಳಿ, ಕೊಲ್ಲಾಡಿ ಬಾಲಕೃಷ್ಣ ರೈ ಮತ್ತಿತರು ಉಪಸ್ಥಿತರಿದ್ದರು. ಈ ಸಂದರ್ಭ ಓಪನ್ ಏರ್ ಗಾರ್ಡನ್ ನ ದಾನಿಗಳಾದ ತೋನ್ಸೆ ಆನಂದ ಶೆಟ್ಡಿ ಅವರನ್ನು ಮುಂಬೈ ಬಂಟರ ಸಂಘದ ಟ್ರಸ್ಟಿಯಾಗಿ ಆಯ್ಕೆಯಾದ ಉಳ್ತೂರು ಮೋಹನ್ ದಾಸ್ ಶೆಟ್ಟಿಯವರನ್ನು ಗೌರವಿಸಲಾಯಿತು.