ಲೋಕಸಭಾ ಚುನಾವಣೆವರೆಗೆ ಭಿನ್ನಮತ, ಅಪಸ್ವರಗಳಿಗೆ ಬ್ರೇಕ್ ಯತ್ನಾಳ್
ಉಡುಪಿ: ಪಕ್ಷದ ರಾಜ್ಯ ನಾಯಕರ ವಿರುದ್ಧ ನೀಡುತಿದ್ದ ಹೇಳಿಕೆ, ಭಿನ್ನಮತ, ಅಪಸ್ವರಗಳಿಗೆ ಮುಂದಿನ ಲೋಕಸಭಾ ಚುನಾವಣೆವರೆಗೆ ಬ್ರೇಕ್ ಹಾಕಿದ್ದೇನೆ. ನಾನು ಸೈಲೆಂಟ್ ಆಗಿಲ್ಲ. ಪಕ್ಷದ ವರಿಷ್ಠರು ಕರೆದಾಗ ನನ್ನ ಭಾವನೆಗಳನ್ನು ಹೇಳು ತ್ತೇನೆ ಎಂದು ಬಿಜೆಪಿಯ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ.
ಉಡುಪಿಯಲ್ಲಿ ನಡೆದಿರುವ ಪುತ್ತಿಗೆ ಪರ್ಯಾಯ ಮೊದಲ ದಿನದ ಸಂಜೆ ದರ್ಬಾರ್ನಲ್ಲಿ ಭಾಗವಹಿಸಲು ಆಗಮಿಸಿದ ಯತ್ನಾಳ್ ಸುದ್ದಿಗಾರರೊಂದಿಗೆ ಮಾತನಾಡುತಿದ್ದರು.
ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿಯಾಗುವುದು ನಮ್ಮೆಲ್ಲರ ಗರಿ. ಇಂಡಿಯಾ ಅಲೆಯೆನ್ಸ್ ಕೈಗೆ ದೇಶ ಸಿಕ್ಕರೆ ಹೇಗೆ ಎಂಬ ಆತಂಕ ಇದೆ. ಹೀಗಾಗಿ ಭಿನ್ನಮತ ಮತ್ತು ಅಪಸ್ವರಗಳಿಗೆ ಲೋಕಸಭಾ ಚುನಾವಣೆವರೆಗೆ ಬ್ರೇಕ್ ಹಾಕಿದ್ದೇನೆ ಎಂದವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಲೋಕಸಭಾ ಚುನಾವಣೆಯಲ್ಲಿ ಪಕ್ಷದ್ರೋಹ ಮಾಡದೆ ಒಗ್ಗಟ್ಟಾಗಿ ಕೆಲಸ ಮಾಡಲು ನಿರ್ಧರಿಸಿದ್ದೇನೆ. ಲೋಕಸಭಾ ಚುನಾ ವಣೆ ಮುಗಿಯುವವರೆಗೆ ಯಾವುದೇ ತಗಾದೆ ಇಲ್ಲ. ಮೇಲಿನವರೇ ಎಲ್ಲಾ ರಿಪೇರಿ ಮಾಡಿದರೆ ಸರಿಯಾಗುತ್ತೆ. ಚೆನ್ನಾಗಿ ರಿಪೇರಿ ಮಾಡ್ತಾರೆ ಎಂಬ ವಿಶ್ವಾಸವಿದೆ ಎಂದರು.
ಆದರೆ ನಾನು ಯಾವುದೇ ಸ್ಥಾನದ ಆಕಾಂಕ್ಷಿಯಲ್ಲ. ಪಕ್ಷ ಸಿದ್ದಾಂತದ ಹಿತದೃಷ್ಟಿಯಿಂದ ನಾನು ಮಾತನಾಡ್ತೇನೆ. ವಂಶವಾದ, ಭ್ರಷ್ಟಾಚಾರ, ಸಿದ್ದಾಂತ ತಪ್ಪಿದರೆ ಮಾತ್ರ ನಾನು ಮಾತನಾಡೋದು. ಡೆಲ್ಲಿಗೆ ಹೋದಾಗಲೂ ನಾನು ಯಾವುದೇ ಬೇಡಿಕೆ ಇಟ್ಟಿಲ್ಲ ಎಂದು ಪಕ್ಷದ ‘ಭಿನ್ನಮತೀಯ ನಾಯಕ’ ಎಂದೇ ಕರೆಯಲ್ಪಡುವ ಯತ್ನಾಳ್ ನುಡಿದರು.
ನನಗೆ ಕೇಂದ್ರಕ್ಕೆ ಹೋಗುವ ಯೋಚನೆ ಇಲ್ಲ. ರಾಜ್ಯ ರಾಜಕಾರಣದಿಂದ ರೋಸಿ ಹೋಗಿಲ್ಲ. ಬಹಳ ಸೂಕ್ಷ್ಮವಾಗಿ ಎಲ್ಲವನ್ನೂ ನಾನು ಯೋಜನೆ ಮಾಡಿದ್ದೇನೆ. ನನಗೆ ಅಧಿಕಾರ ಕೊಡಿ ಎಂದು ನಾನು ಯಡಿಯೂರಪ್ಪ, ಬೊಮ್ಮಾಯಿ, ಕೇಂದ್ರ ನಾಯಕರ ಕಾಲು ಹಿಡಿಲಿಲ್ಲ. ನನ್ನನ್ನು ವಿಪಕ್ಷ ನಾಯಕ ಮಾಡಬೇಕು ಎಂದು ಬಹಳಷ್ಟು ಶಾಸಕರು ಹೇಳಿದ್ದರು. ಆದರೆ ಕೇಂದ್ರ, ಚುನಾವಣಾ ಉದ್ದೇಶದಿಂದ ಕೆಲವು ನಿರ್ಧಾರಗಳನ್ನು ಮಾಡಿದೆ. ಅದನ್ನು ಒಪ್ಪಿಕೊಂಡು ನಾನು ಸುಮ್ಮನಿದ್ದೇನೆ ಎಂದು ತನ್ನ ‘ಸೈಲೆಂಟ್’ಗೆ ಸಮಜಾಯಿಷಿ ನೀಡಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಯತ್ನಾಳ್, ಜ.22ರಂದು ರಜೆ ಘೋಷಿಸದ ರಾಜ್ಯ ಸರ್ಕಾರ, ಹಿಂದೂಗಳ ಭಾವನೆಗೆ ಅಪಮಾನ ಮಾಡಿದೆ. ರಾಜ್ಯದಲ್ಲಿ ಹಿಂದುಗಳ ಭಾವನೆಗೆ ಅಪಮಾನ ಮಾಡುವ ಸರಕಾರವಿದೆ. ಹಿಂದೂಗಳನ್ನು ಅಪಮಾನ ಮಾಡಿ ಮುಸ್ಲಿಂ ಮತ ಗಳಿಸುವ ಸರ್ಕಾರ ಇದು ಎಂದರು.
ದೇಶದ ಪ್ರತಿಯೊಬ್ಬನ ಮನಸಲ್ಲಿ ರಾಮಮಂದಿರದ ಸಂಭ್ರಮವಿದೆ. ನಂಬಿಕೆಗೆ ಅಪಮಾನ ಮಾಡುವುದು ಒಂದು ಸಂಘಟನೆಯ ನಾಶದ ಸಂಕೇತ. ಸಿದ್ದರಾಮಯ್ಯ ನಿಜವಾದ ಜಾತ್ಯಾತೀತರಾದರೆ ಆ ದಿನ ರಜೆ ಘೋಷಿಸಲಿ. ರಜೆ ಕೊಡುವ ಸದ್ಬುದ್ದಿಯನ್ನು ಪ್ರಭು ಶ್ರೀರಾಮಚಂದ್ರ ನೀಡಲಿ ಎಂದು ಹೇಳಿದರು.
ರಾಮ ಮಂದಿರಕ್ಕೆ ಪೇಜಾವರಶ್ರೀಗಳೇ ಅಡಿಪಾಯ ಹಾಕಿದವರು. ಪೇಜಾವರಶ್ರೀಗಳ ನೇತೃತ್ವದಲ್ಲಿ ದೇಶದಲ್ಲಿ ಹಿಂದುತ್ವ ಜಾಗೃತವಾಯ್ತು. ಅಡ್ವಾಣಿ ಅಯೋಧ್ಯಾ ರಥ ಪ್ರಾರಂಭಿಸಲು ಇದುವೇ ಪ್ರೇರಣೆ. ಅಯೋಧ್ಯೆ ಪ್ರತಿಷ್ಠೆ ಮೋದಿಯಿಂದ ಆಗಬೇಕಂಬ ಸಂಕಲ್ಪ ಇತ್ತು ಎಂದು ಅಡ್ವಾಣಿ ಯವರೇ ಹೇಳಿದ್ದಾರೆ. ಇಡೀ ದೇಶ ಜಾಗೃತವಾಗಲು ಕಾರಣ ಉಡುಪಿ ಪೇಜಾವರ ಮಠ ಎಂದು ಯತ್ನಾಳ್ ನುಡಿದರು.
ರಾಜಕೀಯ ವಿರೋಧಿಗಳಿಗೆ ದರ್ಬಾರ್ ಸಭೆಯಲ್ಲಿ ಚುಚ್ಚಿದ ಯತ್ನಾಳ್
ನನ್ನ ಬಗ್ಗೆ ಇಲ್ಲಿಂದ ಡೆಲ್ಲಿ ತನಕ ಬಹಳ ಚರ್ಚೆಯಾಗುತ್ತಿದೆ. ಬಹಳಷ್ಟು ಜನ ನನ್ನನ್ನು ಪಕ್ಷ ಹೊರಹಾಕುವ ಕನಸು ಕಾಣುತಿದ್ದಾರೆ. ಯಾರಿಂದಲೂ ನನ್ನನ್ನು ಹೊರಗೆ ಹಾಕಲು ಸಾಧ್ಯವಿಲ್ಲ ಎಂದು ಬಿಜೆಪಿಯ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ತನ್ನ ರಾಜಕೀಯ ವಿರೋಧಿಗಳಿಗೆ ನೇರವಾಗಿ ಸವಾಲಿನ ರೀತಿಯಲ್ಲಿ ಚುಚ್ಚಿದ್ದಾರೆ.
ಉಡುಪಿಯ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥರು ನಾಲ್ಕನೇ ಬಾರಿಗೆ ಪರ್ಯಾಯ ಪೀಠಾ ರೋಹಣ ಮಾಡಿದ ನಂತರ ಸಂಜೆ ನಡೆದ ‘ಸಂಧ್ಯಾ ದರ್ಬಾರ್’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತಾಡುತಿದ್ದರು.
ತನಗ ಬಹಳಷ್ಟು ಗುರುಗಳ ಹಿರಿಯರ ಹಾಗೂ ಜನರ ಆಶೀರ್ವಾದವಿದೆ. ಹೀಗಾಗಿ ಯಾರಿಂದಲೂ ನನ್ನನ್ನು ಹೊರಗೆ ಹಾಕಲು ಸಾಧ್ಯವಿಲ್ಲ ಎಂದು ಯತ್ನಾಳ್ ಪಕ್ಷದೊಳಗಿನ ರಾಜಕೀಯ ವಿರೋಧಿಗಳಿಗೆ ತಿರುಗೇಟು ನೀಡಿದರು.
ವಿದೇಶಗಳಲ್ಲಿ ಹಿಂದುಧರ್ಮದ ಪ್ರಚಾರದಲ್ಲಿ ಪುತ್ತಿಗೆ ಸ್ವಾಮೀಜಿ ಅವರು ಮಾಡುತ್ತಿರುವ ಕಾರ್ಯವನ್ನು ಶ್ಲಾಘಿಸುತ್ತಾ ಮಾತನಾಡಿದ ಯತ್ನಾಳ್, ಪೇಜಾವರಶ್ರೀಗಳು ದಲಿತರ ಮನೆಗಳಿಗೆ ಭೇಟಿ ನೀಡಿ ಕ್ರಾಂತಿ ಮಾಡಿದ್ದರೆ, ಪುತ್ತಿಗೆ ಶ್ರೀಗಳು ಸಾಗರದಾಚೆ ಹಿಂದು ಧರ್ಮದ ಕೆಲಸ ಮಾಡಿದ್ದಾರೆ ಎಂದರು.
ಸಮಾಜಗಳನ್ನು ಜೋಡಿಸುವ, ಮೇಲುಕೀಳು ತಾರತಮ್ಯವನ್ನು ಸರಿ ಮಾಡುವ ಪ್ರಯತ್ನ ಆಗಬೇಕು ಎಂದ ಅವರು, ರಾಮಮಂದಿರಕ್ಕೆ 500 ವರ್ಷಗಳ ಹೋರಾಟದ ಇತಿಹಾಸವಿದೆ. ಸಾಕಷ್ಟು ಸಾವು-ನೋವುಗಳು ಆಗಿಲೆ. ಇನ್ನು ಎರಡು ವರ್ಷದೊಳಗೆ ಮಥುರಾ, ಕಾಶಿ ವಿಶ್ವನಾಥ ಹಿಂದುಗಳ ಸುಪರ್ದಿಗೆ ಬರಬೇಕು. ಪುತ್ತಿಗೆಶ್ರೀಗಳ ನೇತೃತ್ವದಲ್ಲಿ ಹೋರಾಟ ಮಾಡೋಣ ಮುಂದಿನ ಎರಡು ವರ್ಷದಲ್ಲಿ ಎರಡು ಕ್ಷೇತ್ರ ನಮ್ಮದಾಗಲಿ ಎಂದರು.
ರಾಷ್ಟ್ರದೇವೋಭವ ಎಂದು ಕರೆಕೊಟ್ಟ ನಾಡು ಉಡುಪಿ. ಪುತ್ತಿಗೆ ಸ್ವಾಮೀಜಿ ಚರ್ಚ್ ಖರೀದಿಸಿ ಮಂದಿರ ಮಾಡುವ ಕೆಲಸ ಮಾಡುತ್ತಿದ್ದಾರೆ. ಹಿಂದುತ್ವ ಜಗತ್ತನ್ನು ಆಳುತ್ತದೆ ಎಂಬ ವಿಶ್ವಾಸ ಈ ಮೂಲಕ ಮೂಡಿದೆ. ಜಾತ್ಯಾತೀತ ಎಂದು ಒಂದು ಕೋಮನ್ನು ಓಲೈಸಲಾಗುತ್ತಿದೆ. ಭಾರತದಲ್ಲಿ ಹಿಂದುತ್ವದ ಕಹಳೆ ಮೊಳಗಿಸಿದರೆ ವಿಶ್ವಗುರು ಆಗುತ್ತದೆ ಎಂದು ಯತ್ನಾಳ್ ಹೇಳಿದರು.